ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕ್ಕೆ ಸುಬ್ರಹ್ಯಣ್ಯ ಭೋಜನ ಪ್ರಸಾದ: 10 ಬಗೆಯ ಪಾಯಸ

Published : 7 ಅಕ್ಟೋಬರ್ 2024, 13:52 IST
Last Updated : 7 ಅಕ್ಟೋಬರ್ 2024, 13:52 IST
ಫಾಲೋ ಮಾಡಿ
Comments

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಭೋಜನ ಪ್ರಸಾದದಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಇದರಿಂದ ಭಕ್ತರಿಗೆ ಪ್ರತಿದಿನವೂ ವಿಶೇಷ ಭೋಜನ ಪ್ರಸಾದ ಸವಿಯುವ ಅವಕಾಶ ಲಭಿಸಿದೆ. 

ಇದುವರೆಗೆ ವಿಶೇಷ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನ ಒಂದೇ ಬಗೆಯ ಪಾಯಸವನ್ನು ಭಕ್ತರಿಗೆ ನೀಡಲಾಗುತ್ತಿತ್ತು. ಈಗ ಹೊಸ ವ್ಯವಸ್ಥೆಯಡಿ ಪ್ರತಿದಿನವೂ ಭಿನ್ನವಾದ ಪಾಯಸದ ಸ್ವಾದವನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ. ಕಡಲೆಬೇಳೆ, ಹೆಸರು ಬೇಳೆ, ಸಬ್ಬಕ್ಕಿ, ಗೋಧಿ ಕಡಿ, ಹಾಲು, ಅಕ್ಕಿ, ಶ್ಯಾವಿಗೆ, ರವೆ ಮತ್ತು ಸಿರಿಧಾನ್ಯ ಸೇರಿ 10 ಬಗೆಯ ಪಾಯಸವನ್ನು ತಯಾರಿಸಿ, ದಿನವೂ ಭಿನ್ನ ರುಚಿ ಉಣಬಡಿಸಲಾಗುತ್ತಿದೆ. ಸುಬ್ರಹ್ಮಣ್ಯದ ಪ್ರಸಾದ ಭೋಜನವು ಸ್ವಾದಿಷ್ಟ ಮತ್ತು ಅಷ್ಟೇ ಪೌಷ್ಟಿಕವಾಗಿರಬೇಕು ಎಂಬ ಉದ್ದೇಶದಿಂದ ಗುಣಮಟ್ಟದ 15 ಬಗೆಯ ತರಕಾರಿಗಳನ್ನು ಪ್ರತಿದಿನ ಸಾಂಬಾರಿಗೆ ಬಳಸುವಂತೆಯೂ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

‘ಅನ್ನದಾತ ಸುಬ್ಬಪ್ಪ’  ಪ್ರತೀತಿಯ ಈ ದೇವಳದಲ್ಲಿ ಪ್ರಸಾದ ವ್ಯವಸ್ಥೆಯಲ್ಲಿ ಈ ಬದಲಾವಣೆಗಳನ್ನು ತಂದವರು ದೇವಳದ ಆಡಳಿತಾಧಿಕಾರಿಯೂ ಆಗಿರುವ ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಮತ್ತು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ. ಇವರಿಬ್ಬರ ವಿಶೇಷ ಆಸಕ್ತಿ ಫಲವಾಗಿ ಭೋಜನ ಪ್ರಸಾದವು ಮತ್ತಷ್ಟು ವಿಶೇಷವೆನಿಸಲಿದೆ. 

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಾರ್ಷಿಕ ಸರಾಸರಿ 55ಲಕ್ಷಕ್ಕೂ ಹೆಚ್ಚು ಭಕ್ತರು ಭೋಜನ ಪ್ರಸಾದ ಸ್ವೀಕರಿಸುತ್ತಾರೆ. ಸಂಪ್ರದಾಯದಂತೆ ಇಲ್ಲಿ ಬಾಳೆ ಎಲೆಯಲ್ಲಿ ಪ್ರಸಾದ ನೀಡಲಾಗುತ್ತದೆ. ಚಟ್ನಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ನೀಡಲಾಗುತ್ತದೆ. ಜಾತ್ರೆ ಸೇರಿದಂತೆ ವಿಶೇಷ ದಿನಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಸಾದ ಸ್ವೀಕರಿಸುತ್ತಾರೆ. ಏಕಾದಶಿ ದಿನ ಅವಲಕ್ಕಿ, ಉಪ್ಪಿಟ್ಟು ಮತ್ತು ಮಜ್ಜಿಗೆ ವಿತರಿಸಲಾಗುತ್ತದೆ.

ದೇವಸ್ಥಾನದ ಆಡಳಿತ ಮಂಡಳಿ ನಡೆಸುತ್ತಿರುವ ಎರಡು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪ್ರತಿದಿನ ದೇವಸ್ಥಾನದ ಪ್ರಸಾದ ಭೋಜನವನ್ನು ವಿತರಿಸಲಾಗುತ್ತದೆ. ಭಕ್ತರಲ್ಲದೆ ಪ್ರತಿದಿನ 3,300 ಮಂದಿ ಇಲ್ಲಿಂದ ಪ್ರಸಾದ ಭೋಜನ ಸ್ವೀಕರಿಸುತ್ತಾರೆ.

ಎಸ್ಎಸ್‌ಪಿಯು ಕಾಲೇಜಿನಲ್ಲಿ ಭೋಜನ ಪ್ರಸಾದ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳು
ಎಸ್ಎಸ್‌ಪಿಯು ಕಾಲೇಜಿನಲ್ಲಿ ಭೋಜನ ಪ್ರಸಾದ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳು
ದೇವಳದಲ್ಲಿ ದೇವರ ಅನ್ನಪ್ರಸಾದ ತಯಾರಿಸಲು ಹೈಟೆಕ್ ಪಾಕಶಾಲೆ ನಿರ್ಮಿಸಲಾಗಿದೆ. ಭಕ್ತರಿಗೆ ಪ್ರಸಾದ ಸ್ವೀಕರಿಸಲು ಇನ್ನಷ್ಟು ಉತ್ತಮವಾದ ಯೋಜನೆ ರೂಪಿಸಲಾಗುವುದು
ಜುಬಿನ್ ಮಹಪಾತ್ರ, ದೇವಸ್ಥಾನದ ಆಡಳಿತಾಧಿಕಾರಿ ಉಪ ವಿಭಾಗಾಧಿಕಾರಿ
ಭಕ್ತರಿಗೆ ಪೌಷ್ಟಿಕಾಂಶಯುಕ್ತ ವಿಶೇಷ ಬೋಜನ ಪ್ರಸಾದ ಸಿಗಬೇಕು ಎಂಬ ಆಶಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ತಯಾರಿಕೆ ಮತ್ತು ವಿತರಣೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದೆ
ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ
ಪ್ರತಿದಿನ ಕಾಲೇಜಿಗೆ ಊಟ ಬರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಕಾಲೇಜಿಗೆ ಶೇ 100ರಷ್ಟು ಫಲಿತಾಂಶ ಬರುತ್ತಿರುವುದರ ಹಿಂದೆ ದೇವಳದ ಭೋಜನ ಪ್ರಸಾದವೂ ಮುಖ್ಯ ಕಾರಣವಾಗಿದೆ
– ಸೋಮಶೇಖರ ನಾಯಕ್ , ಪ್ರಾಚಾರ್ಯರು ಎಸ್‌ಎಸ್‌ಪಿಯು ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT