ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಸಿದ್ಧಕಟ್ಟೆ ಕಾಲೇಜಿನಲ್ಲಿ ಬಿಸಿಯೂಟ ಸೌಲಭ್ಯ: BCA ತರಗತಿ ಶುರು

ಬಿಎಯಲ್ಲಿ ಶೇಕಡ 100 ಫಲಿತಾಂಶ; ಬಿಕಾಂನಲ್ಲೂ ಸಾಧನೆ: ಈ ವರ್ಷದಿಂದ ಬಿಸಿಎ ತರಗತಿ
Published 24 ಜೂನ್ 2024, 5:41 IST
Last Updated 24 ಜೂನ್ 2024, 5:41 IST
ಅಕ್ಷರ ಗಾತ್ರ

ಮಂಗಳೂರು: ಮೂಡುಬಿದಿರೆ ಮತ್ತು ಬಂಟ್ವಾಳ ಹೆದ್ದಾರಿಯ ಒಳಭಾಗದ ಸಿದ್ಧಕಟ್ಟೆಯ ಹಸಿರು ಹೊದ್ದಿರುವ ವಿಶಾಲ ಜಾಗದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಜ್ಞಾನದಾಹ ನೀಗಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಈಗ ಬಿಸಿಯೂಟ ಸೌಲಭ್ಯ ಒದಗಿಸಲು ಸಜ್ಜಾಗಿದೆ.

ದೂರದ ಹಳ್ಳಿ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಬುತ್ತಿಕಟ್ಟಿಕೊಂಡು ಬರುವುದು ಕಷ್ಟವಾಗುತ್ತದೆ. ಹೋಟೆಲ್‌ಗೆ ಹೋಗಲು ತುಂಬ ನಡಿಯಬೇಕು, ಊಟ–ತಿಂಡಿಗೆ ನಿತ್ಯವೂ ಹಣ ತೆರುವುದು ಕೂಡ ಕಷ್ಟ. ಕಾಲೇಜಿನಲ್ಲಿ ಕ್ಯಾಂಟೀನ್ ನಡೆಸುವುದು ಲಾಭದಾಯಕ ಅಲ್ಲದ್ದರಿಂದ ಯಾರೂ ಮುಂದಾಗುವುದಿಲ್ಲ. ಹೀಗಾಗಿ ಕಾಲೇಜಿನಲ್ಲೇ ಊಟದ ವ್ಯವಸ್ಥೆ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದೆ ಆಡಳಿತ.

‘ಬಂಟ್ವಾಳ ತಾಲ್ಲೂಕಿನ ಕೆಲವು ಕಾಲೇಜುಗಳಲ್ಲಿ ಮಧ್ಯಾಹ್ನ ಬಿಸಿಯೂಟ ನೀಡುವ ವ್ಯವಸ್ಥೆ ಇದೆ. ನಮ್ಮ ಕಾಲೇಜಿನಲ್ಲೂ ಈ ಸೌಲಭ್ಯವನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಯಾರಿಗೆ ತಗಲುವ ಸಣ್ಣ ಮೊತ್ತವನ್ನು ಪಡೆದು ಬಿಸಿ ಬಿಸಿ ಊಟ ನೀಡಲು ಮುಂದಾಗಿದ್ದೇವೆ’ ಎಂದು ಕಾಲೇಜಿನ ಪ್ರಾಂಶುಪಾಲ ಗಿರೀಶ್ ಭಟ್‌ ಅಜಕ್ಕಳ ‘ಪ್ರಜಾವಾಣಿ’ಗೆ ತಿಳಿಸಿದರು.

‘2007ರಲ್ಲಿ ಆರಂಭಗೊಂಡ ಕಾಲೇಜಿಗೆ 2015ರಲ್ಲಿ ಸ್ವಂತ ಕಟ್ಟಡವಾಯಿತು. ಮೂರೂವರೆ ಎಕರೆ ಜಾಗದ ಒಂದು ಭಾಗವನ್ನು ಮೈದಾನಕ್ಕಾಗಿ ಬಳಸಿಕೊಳ್ಳಲಾಗಿದೆ. 200 ಮೀಟರ್ಸ್ ಓಟದ ಟ್ರ್ಯಾಕ್ ನಿರ್ಮಿಸಬಲ್ಲಷ್ಟು ದೊಡ್ಡ ಮೈದಾನ ಈಗ ಸಿದ್ಧವಾಗಿದೆ. ಬಿ.ಎ ಮತ್ತು ಬಿ.ಕಾಂ ಪದವಿ ಮಾತ್ರ ಇದ್ದ ಕಾಲೇಜಿನಲ್ಲಿ ಈ ಬಾರಿ ಬಿಸಿಎಯನ್ನೂ ಸೇರಿಸಲಾಗಿದೆ. ಅದಕ್ಕೆ ಪ್ರವೇಶಾತಿ ಆರಂಭವಾಗಿದೆ’ ಎಂದು ಅವರು ತಿಳಿಸಿದರು.

ಸಿದ್ಧಕಟ್ಟೆ ಕಾಲೇಜು, ಬಂಟ್ವಾಳದಿಂದ 15 ಕಿಲೊಮೀಟರ್ ಮತ್ತು ಮೂಡುಬಿದಿರೆಯಿಂದ 15 ಕಿಮೀ ದೂರದಲ್ಲಿದೆ. ಸಿದ್ಧಕಟ್ಟೆಯಲ್ಲಿ ಬಸ್ ಇಳಿದು ಸ್ವಲ್ಪ ದೂರ ನಡೆದರೆ ಕಾಲೇಜು ಸಿಗುತ್ತದೆ.

ಕಾಲೇಜಿಗೆ ನ್ಯಾಕ್‌ನಿಂದ ‘ಬಿ’ ಗ್ರೇಡ್ ಮಾನ್ಯತೆ ಲಭಿಸಿದೆ. ಎನ್‌ಎಸ್‌ಎಸ್‌, ರೇಂಜರ್ಸ್‌, ರೋವರ್ಸ್‌, ರೆಡ್ ಕ್ರಾಸ್‌, ರೆಡ್ ರಿಬ್ಬನ್‌ ಘಟಕಗಳನ್ನು ಹೊಂದಿದ್ದು ಪಠ್ಯೇತರ ಚಟುವಟಿಕೆಗಳಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿದ ವಿದ್ಯಾರ್ಥಿಗಳು ಇದ್ದಾರೆ. ಕ್ರೀಡಾ ವಿಭಾಗಕ್ಕೆ ನಿರ್ದೇಶಕರು ಇದ್ದು ಗ್ರಂಥಪಾಲಕರೂ ಇದ್ದಾರೆ.

ಕಾಲೇಜು ಈ ಬಾರಿ ಕಲಾ ಪದವಿಯಲ್ಲಿ ಶೇಕಡ 100 ಫಲಿತಾಂಶ ಗಳಿಸಿದ್ದು ವಾಣಿಜ್ಯ ವಿಜ್ಞಾನ ವಿಭಾಗದಲ್ಲಿ ಶೇಕಡ 98ರಷ್ಟು ಫಲಿತಾಂಶ ಬಂದಿದೆ. ಹೊಸದಾಗಿ ಸೇರ್ಪಡೆಯಾದ ಬಿಸಿಎಯಲ್ಲಿ 30 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

-ಅಜಕ್ಕಳ ಗಿರೀಶ್ ಭಟ್‌ ಪ್ರಾಂಶುಪಾಲ

ಸ್ಪೋಕನ್‌ ಇಂಗ್ಲಿಷ್ ಕೋರ್ಸ್‌

ಇಂಗ್ಲಿಷ್ ಕಲಿಕೆಗೆ ಕಾಲೇಜಿನಲ್ಲಿ ಉತ್ತಮ ಸೌಲಭ್ಯಗಳಿದ್ದು ಸ್ಪೋಕನ್ ಇಂಗ್ಲಿಷ್ ಸರ್ಟಿಫಿಕೆಟ್ ಕೋರ್ಸ್ ಇದೆ. ಕಂಪ್ಯೂಟರ್ ಕಲಿಕೆಗೂ ಆದ್ಯತೆ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವುದರೊಂದಿಗೆ ವ್ಯಕ್ತಿತ್ವ ವಿಕಾಸದ ಕಡೆಗೂ ಗಮನ ನೀಡಲಾಗುತ್ತಿದೆ. ಕಂಪ್ಯೂಟರ್ ಪ್ರಯೋಗಾಲಯ ಇಂಟರ್‌ನೆಟ್ ಸೌಲಭ್ಯ ಐಸಿಟಿ ಆಧಾರಿತ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. 

ಕಾಲೇಜಿನಲ್ಲಿರುವ ಸೌಲಭ್ಯಗಳು

ಸುಸಜ್ಜಿತ ಕಟ್ಟಡ; ಪೂರ್ಣ ಪ್ರಮಾಣದ ಬೋಧಕ ಸಿಬ್ಬಂದಿ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ (ಶುಲ್ಕ ವಾಪಸ್‌ ಸೌಲಭ್ಯ) ಗಣಕೀಕೃತ ಗ್ರಂಥಾಲಯ; ಆನ್‌ಲೈನ್ ಕಲಿಕೆ ವಿದ್ಯಾರ್ಥಿ ವೇತನ ಸೌಲಭ್ಯ; ವಿದ್ಯಾರ್ಥಿ ದತ್ತು ಯೋಜನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT