ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಡಪದವು: ದಾಖಲೆಗಳಿಲ್ಲದ ₹1.32 ಲಕ್ಷ ನಗದು ವಶ

Published : 18 ಮಾರ್ಚ್ 2024, 14:27 IST
Last Updated : 18 ಮಾರ್ಚ್ 2024, 14:27 IST
ಫಾಲೋ ಮಾಡಿ
Comments

ಮಂಗಳೂರು: ‘ಕಾರಿನಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ₹ 1.32 ಲಕ್ಷ ನಗದನ್ನು ಚುನಾವಣಾ ಅಧಿಕಾರಿಗಳ ತಂಡವು ಎಡಪದವು ತಪಾಸಣಾ ಠಾಣೆಯಲ್ಲಿ ಭಾನುವಾರ ರಾತ್ರಿ ವಶಪಡಿಸಿಕೊಂಡಿದೆ’ ಎಂದು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕೆ.ಜಾನ್ಸನ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾ ಇಡಲು ಕ್ರಮವಹಿಸಿದ್ದೇವೆ. ಮುಕ್ಕ, ಕೂಳೂರು ಹಾಗೂ ಎಡಪದವಿನಲ್ಲಿ ತಪಾಸಣಾ ಠಾಣೆಗಳನ್ನು ಆರಂಭಿಸಲಾಗಿದೆ. ಎಡಪದವು ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿದ, ದಾಖಲೆಗಳಿಲ್ಲದ ಹಣವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ಸಮಿತಿಗೆ ಒಪ್ಪಿಸಿದ್ದೇವೆ. ಹಣ ಸಾಗಿಸುತ್ತಿದ್ದವರು ಸೂಕ್ತ ದಾಖಲೆಗಳನ್ನು ಸಮಿತಿಗೆ ಒಪ್ಪಿಸಿ ಹಣವನ್ನು ಮರಳಿ ಪಡೆಯಬಹುದು’ ಎಂದರು.

’25 ಸೆಕ್ಟರ್ ಅಧಿಕಾರಿಗಳು, 18 ಅಧಿಕಾರಿಗಳನ್ನು ಒಳಗೊಂಡ ಸಂಚಾರ ತಂಡಗಳು ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾ ಇಡಲಿದ್ದಾರೆ. 18 ಅಧಿಕಾರಿಗಳನ್ನು ಒಳಗೊಂಡ ತಂಡವು ನಿರ್ದಿಷ್ಟ ಸ್ಥಳಗಳಲ್ಲಿ ನಿಗಾ ಇಡಲಿದೆ. ಚುನಾವಣಾ ಅಕ್ರಮಗಳ ಕುರಿತ ವಿಡಿಯೊ ವೀಕ್ಷಣೆಗೆ, ವಿಡಿಯೊ ಸಾಕ್ಷ್ಯ ದಾಖಲೀಕರಣಕ್ಕೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತ ದೂರು ಪರಿಶೀಲನೆಗೆ, ನಿಯಂತ್ರಣ ಕೊಠಡಿಗೆ ಬರುವ ದೂರುಗಳ ವಿಲೇವಾರಿಗೆ ತಲಾ ಮೂವರು ಅಧಿಕಾರಿಗಳನ್ನು ಒಳಗೊಂಡ ತಂಡಗಳು ಕಾರ್ಯನಿರ್ವಹಿಸಲಿವೆ. ಸಿ–ವಿಜಿಲ್‌, ಏಕಗವಾಕ್ಷಿ ವ್ಯವಸ್ಥೆ ಹಾಗೂ ಸುವಿಧಾ ಆ್ಯಪ್‌ಗಳಲ್ಲಿ ಬರುವ ದೂರುಗಳ ನಿರ್ವಹಣೆಗೆ ನಾಲ್ವರು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ’ ಎಂದರು.

‘ಮಂಗಳೂರು ನಗರ ಉತ್ತರ ಕ್ಷೇತ್ರದ ವ್ಯಾಪ್ತಿಯ ನಗರ ಪ್ರದೇಶದಲ್ಲಿ 164 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 90 ಮತಗಟ್ಟೆಗಳಿವೆ. ಸೂಕ್ಷ್ಮ ಮತಗಟ್ಟೆಗಳನ್ನು ಇನ್ನೂ ನಿರ್ಧರಿಸಿಲ್ಲ. ಇಲ್ಲಿ ಒಟ್ಟು 2,51,205 ಮತದಾರರಿದ್ದಾರೆ. 4,352 ಹೊಸ ಮತದಾರರಿದ್ದಾರೆ. 42 ಮತದಾರರು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 85 ವರ್ಷ ದಾಟಿದ 3,619 ಮತದಾರರಿದ್ದಾರೆ. 1,363 ಅಂಗವಿಕಲ ಮತದಾರರು ಇದ್ದಾರೆ’ ಎಂದು ಮಾಹಿತಿ ನೀಡಿದರು.

‘ನಗರದ ಆಸ್ಪತ್ರೆಗಳಿಗೆ ರೋಗಿಗಳನ್ನು ಚಿಕಿತ್ಸೆಗೆ ಕರೆತರುವವರು ₹ 50 ಸಾವಿರಕ್ಕಿಂತ ಹೆಚ್ಚು ನಗದನ್ನು ಹೊಂದಿದ್ದರೆ, ಅದಕ್ಕೆ ಪೂರಕ ದಾಖಲೆಗಳನ್ನೂ ಹೊಂದಿರಬೇಕಾಗುತ್ತದೆ. ವಾಹನ ತಪಾಸಣೆ ವೇಳೆ ದಾಖಲೆಗಳಿಲ್ಲದ ಹಣ ಪತ್ತೆಯಾದರೆ, ಅದನ್ನು ವಶಪಡಿಸಿಕೊಳ್ಳಲೇ ಬೇಕಾಗುತ್ತದೆ’ ಎಂದು ತಹಶೀಲ್ದಾರ್ ಪ್ರಶಾಂತ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT