ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಶಾರದೆ ಮಂಟಪದಲ್ಲಿ ಪ್ರಾಚೀನ ವೈಭವ

ಕುದ್ರೋಳಿ ದಸರಾ ಮಂಟಪದಲ್ಲಿ ಅಯೋಧ್ಯೆ ಮಾದರಿ ಕಂಬಗಳು ಆಕರ್ಷಣೆ
Published : 1 ಅಕ್ಟೋಬರ್ 2024, 15:22 IST
Last Updated : 1 ಅಕ್ಟೋಬರ್ 2024, 15:22 IST
ಫಾಲೋ ಮಾಡಿ
Comments

ಮಂಗಳೂರು: ಮಂಗಳೂರು ದಸರಾ ಖ್ಯಾತಿಯ ಕುದ್ರೋಳಿ ದಸರಾ ವೈಭವಕ್ಕೆ ಗೋಕರ್ಣನಾಥ ದೇವಾಲಯದ ಆವರಣ ಶೃಂಗಾರಗೊಳ್ಳುತ್ತಿದೆ.

ಶಾರದಾ ದೇವಿ ಮತ್ತು ನವದುರ್ಗಿಯರು ಆಸೀನರಾಗುವ ಸಭಾ ಮಂಟಪದಲ್ಲಿ ಈ ಬಾರಿ ವಿಷ್ಣುವಿನ ದಶಾವತಾರ ಹಾಗೂ ಅಯೋಧ್ಯೆ ಮಾದರಿಯ ಪ್ರಾಚೀನ (ಆ್ಯಂಟಿಕ್‌) ಕೆತ್ತನೆಯ ಕಂಬಗಳು ವಿಶೇಷ ಆಕರ್ಷಣೆಯಾಗಿವೆ. ನವದುರ್ಗಿಯರ ಪೀಠದ ಎದುರಲ್ಲಿ ಅಯೋಧ್ಯೆ ಮಾದರಿಯ ಕಂಬಗಳು ಕಂಗೊಳಿಸಲಿವೆ.

ಅಯೋಧ್ಯೆ ಕ್ಷೇತ್ರದ ಬಗ್ಗೆ ಜನರಿಗೆ ಭಾವನಾತ್ಮಕ ಬಂಧ ಬೆಸೆದಿದೆ. ಹೀಗಾಗಿ, ಇಲ್ಲಿರುವ ಕಂಬಗಳನ್ನು ಹೋಲುವ ಮಾದರಿಗಳನ್ನು ಫೈಬರ್ ಬಳಸಿ ತಯಾರಿಸಲಾಗಿದೆ. ಚೋಳ, ಹೊಯ್ಸಳ ಶೈಲಿಯ ಕಲೆಗಳನ್ನು ಸಮ್ಮಿಶ್ರಣಗೊಳಿಸಿ, ಕಲಾಕೃತಿಗಳನ್ನು ರಚಿಸಲಾಗಿದೆ. 32 ವರ್ಷಗಳಿಂದ ಕುದ್ರೋಳಿ ಶಾರದೋತ್ಸವದ ಮಂಟಪ ಸಿದ್ಧಪಡಿಸುವ ಕಾಯಕ ಮಾಡಿಕೊಂಡು ಬಂದಿದ್ದೇವೆ. ಪ್ರತಿವರ್ಷ ಭಿನ್ನವಾಗಿ ಮಂಟಪ ಸಿದ್ಧಪಡಿಸುತ್ತೇವೆ, ಈವರೆಗೆ ಒಮ್ಮೆಯೂ ಪುನರಾವರ್ತನೆಯಾಗಿಲ್ಲ ಎನ್ನುತ್ತಾರೆ ಮೂಲ್ಕಿ ಸುವರ್ಣ ಆರ್ಟ್ಸ್‌ ಮಾಲೀಕ ಚಂದ್ರಶೇಖರ ಸುವರ್ಣ. 

ಕಳೆದ ವರ್ಷ ಸಭಾ ಮಂಟಪದಲ್ಲಿ ಡೂಮ್ ಮಾದರಿ ರಚಿಸಲಾಗಿತ್ತು. ಎಲ್ಲವೂ ಚಿನ್ನದಂತೆ ಮಿಂಚುತ್ತಿದ್ದಿದ್ದನ್ನು ಕಂಡು ಜನರು ಸಂಭ್ರಮಿಸಿದ್ದರು. ಈ ಬಾರಿ ಆ್ಯಂಟಿಕ್ ಕಲಾಕೃತಿಗಳು ಮನಸೂರೆಗೊಳ್ಳಲಿವೆ. ಇವುಗಳ ಸಿದ್ಧತೆಗೆ ಕನಿಷ್ಠ ಎರಡು ತಿಂಗಳು ಸಮಯ ಬೇಕು. ಮೂಲ ಪರಿಕರಗಳ ತಯಾರಿ ಮೂಲ್ಕಿಯಲ್ಲಿ ನಡೆಯುತ್ತದೆ. ಕುದ್ರೋಳಿಯಲ್ಲಿ 15 ದಿನಗಳಿಂದ 25ಕ್ಕೂ ಹೆಚ್ಚು ಜನರು ಹಗಲು–ರಾತ್ರಿಯೆನ್ನದೆ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅವರು ತಿಳಿಸಿದರು.

ಸುಮಾರು 50 ಸಾವಿರ ಮಿನಿಯೇಚರ್ ಬಲ್ಬ್‌, 30 ಎಇಡಿ ಪಾರ್, 50 ಮೆಟಲ್‌ ಲೈಟ್‌ಗಳನ್ನು ಬಳಸಿ ಸಭಾ ಮಂಟಪದಲ್ಲಿ ಲೈಟಿಂಗ್ ಮಾಡಲಾಗಿದೆ. ಶಾರದಾ ದೇವಿ ಪ್ರತಿಷ್ಠಾಪನೆಯಾಗುವ ಪೀಠವನ್ನು ಅರಮನೆಯ ಮಾದರಿಯಲ್ಲಿ ರೂಪಿಸಲಾಗಿದೆ. ದೇವಿಯ ಹಿಂಭಾಗದಲ್ಲಿ ನವಿಲು ಗರಿ ಅರಳಿಸಲಿದೆ ಎಂದು ಗಗನ್ ಸುವರ್ಣ ಮಾಹಿತಿ ನೀಡಿದರು.

ದೇವಾಲಯದ ಹೊರ ಆವರಣದಲ್ಲಿ ದಾಸ್ ಎಲೆಕ್ಟ್ರಿಕಲ್ಸ್‌ನ ಕೆಲಸಗಾರರು ದೀಪಾಲಂಕಾರದಲ್ಲಿ ನಿರತರಾಗಿದ್ದಾರೆ. ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸ ಅಂತಿಮ ಹಂತದಲ್ಲಿದೆ.

ಕುದ್ರೋಳಿಯಲ್ಲಿ ಶಾರದೋತ್ಸವದ ಪ್ರಯುಕ್ತ ನವದುರ್ಗೆಯರನ್ನು ಪ್ರತಿಷ್ಠಾಪಿಸುವ ಮಂಟಪದ ನಡುವೆ ಅಯೋಧ್ಯೆ ಮಾದರಿ ಕಂಬಗಳನ್ನು ಅಳವಡಿಸಲಾಗಿದೆ  : ಪ್ರಜಾವಾಣಿ ಚಿತ್ರ
ಕುದ್ರೋಳಿಯಲ್ಲಿ ಶಾರದೋತ್ಸವದ ಪ್ರಯುಕ್ತ ನವದುರ್ಗೆಯರನ್ನು ಪ್ರತಿಷ್ಠಾಪಿಸುವ ಮಂಟಪದ ನಡುವೆ ಅಯೋಧ್ಯೆ ಮಾದರಿ ಕಂಬಗಳನ್ನು ಅಳವಡಿಸಲಾಗಿದೆ  : ಪ್ರಜಾವಾಣಿ ಚಿತ್ರ
ನವರಾತ್ರಿ ಪ್ರಯುಕ್ರ ಮಂಗಳೂರಿನ ನವಭಾರತ್ ವೃತ್ತದಲ್ಲಿ ದೀಪಾಲಂಕಾರದಲ್ಲಿ ತೊಡಗಿದ್ದ ಕೆಲಸಗಾರರು :ಪ್ರಜಾವಾಣಿ ಚಿತ್ರ
ನವರಾತ್ರಿ ಪ್ರಯುಕ್ರ ಮಂಗಳೂರಿನ ನವಭಾರತ್ ವೃತ್ತದಲ್ಲಿ ದೀಪಾಲಂಕಾರದಲ್ಲಿ ತೊಡಗಿದ್ದ ಕೆಲಸಗಾರರು :ಪ್ರಜಾವಾಣಿ ಚಿತ್ರ
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಕಾರ್ಮಿಕರು : ಪ್ರಜಾವಾಣಿ ಚಿತ್ರ
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಕಾರ್ಮಿಕರು : ಪ್ರಜಾವಾಣಿ ಚಿತ್ರ
ಪ್ರತಿ ಬಾರಿ ಶಾರದಾ ದೇವಿ ನವದುರ್ಗೆಯರ ಪ್ರತಿಷ್ಠಾಪನಾ ಸ್ಥಳವನ್ನು ನಾವು ಸಿದ್ಧಪಡಿಸುತ್ತೇವೆ. ಜನರು ಪ್ರಶಂಸಿಸಿದಾಗ ಸಾರ್ಥಕ ಭಾವ ಮೂಡುತ್ತದೆ.
ಚಂದ್ರಶೇಖರ ಸುವರ್ಣ ಸುವರ್ಣ ಆರ್ಟ್ಸ್ ಮಾಲೀಕ
ಈ ಬಾರಿ ದಸರಾದಲ್ಲಿ ಡ್ರಗ್ಸ್‌ ಮುಕ್ತ ಜಿಲ್ಲೆ ಹಾಗೂ ‘ಒನ್ ಡಿಸ್ಟ್ರಿಕ್ಟ್ ಒನ್ ಸ್ಪಿರಿಟ್’ ಘೋಷವಾಕ್ಯದೊಂದಿಗೆ ಸಾಮರಸ್ಯದ ಕಲ್ಪನೆಯಲ್ಲಿ ಹಾಫ್ ಮ್ಯಾರಥಾನ್ ನಡೆಸಲಾಗುತ್ತದೆ.
ಪದ್ಮರಾಜ್ ಆರ್ ಕ್ಷೇತ್ರದ ಆಡಳಿತ ಮಂಡಳಿ ಕಾರ್ಯದರ್ಶಿ

ಜಪ ಧ್ಯಾನ ವ್ರತ...

ಕುದ್ರೋಳಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸುವ ಶಾರದಾ ದೇವಿ ನವದುರ್ಗೆಯರು ಆದಿಶಕ್ತಿ ಮತ್ತು ಮಹಾಗಣಪತಿ ಮೂರ್ತಿಗಳನ್ನು ದೇವಾಲಯದ ಆವರಣದಲ್ಲೇ ತಯಾರಿಸುತ್ತಾರೆ. ಶಿವಮೊಗ್ಗದ ಕುಬೇರ ಮತ್ತು ತಂಡದವರು ಮೂರ್ತಿ ಸಿದ್ಧಪಡಿಸಿದ್ದು ಪ್ರತಿಷ್ಠಾಪನೆಗೆ ಅಂತಿಮ ಸಿದ್ಧತೆಗಳು ನಡೆದಿವೆ. ಕಲಾವಿದ ಬಿ.ವಿ.ರಾಜಶೇಖರ ಅವರ ಜೊತೆ 14 ವರ್ಷಗಲಿಂದ ಮೂರ್ತಿ ತಯಾರಿಕೆಗೆ ಇಲ್ಲಿಗೆ ಬರುತ್ತಿದ್ದ ಕುಬೇರ ಗುರುಗಳಿಗೆ ವಯಸ್ಸಾದ ಮೇಲೆ ಕಳೆದ ಏಳು ವರ್ಷಗಳಿಂದ ತಾವೇ ಇದರ ಹೊಣೆಯನ್ನು ವಹಿಸಿಕೊಂಡಿದ್ದಾರೆ. ಒಟ್ಟು 12 ಮೂರ್ತಿಗಳ ರಚನೆಗೆ ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ. ಗಣೇಶ ಚತುರ್ಥಿ ದಿನ ಮೂರ್ತಿ ಮುಹೂರ್ತ ಪೂಜೆ ನಡೆದ ಮೇಲೆ ಇದಕ್ಕೆ ಅಧಿಕೃತ ಚಾಲನೆ ದೊರೆಯುತ್ತದೆ. ಅಂದಿನಿಂದ ಮೂರ್ತಿ ರಚಿಸುವ ಎಲ್ಲ ಕಲಾವಿದರು ವ್ರತ ಪಾಲನೆ ಮಾಡುತ್ತಾರೆ. ಪ್ರತಿನಿತ್ಯ ಶಿವನ ಜಪ ಧ್ಯಾನ ಮಾಡಿ ಗೋಕರ್ಣನಾಥ ದೇವರಿಗೆ ಪ್ರದಕ್ಷಿಣೆ ಹಾಕಿ ಆಶೀರ್ವಾದ ಪಡೆದು ಮೂರ್ತಿಯ ಕಾಯಕ ಮುಂದುವರಿಸುತ್ತೇವೆ ಎನ್ನುತ್ತಾರೆ ಕುಬೇರ. ಜಪ ಧಾರ್ಮಿಕ ಅನುಷ್ಠಾನದಿಂದ ಸಾತ್ವಿಕ ಶಕ್ತಿ ನಮ್ಮೊಳಗೆ ಅಂತರ್ಗತವಾಗುತ್ತದೆ. ಕಲ್ಪನೆಯಲ್ಲಿ ಮೂಡುವ ಮೂರ್ತಿಯ ಸ್ವರೂಪವು ಆಕೃತಿಯಾಗಿ ಮೈದಳೆಯುವ ದೇವಿಯ ಮುಖದಲ್ಲಿ ಆವಿರ್ಭವಿಸುವ ತೇಜಸ್ಸು ನಮಗೇ ಅಚ್ಚರಿ ಮೂಡಿಸುತ್ತದೆ. ದೈವಿಕ ಶಕ್ತಿಯ ಜಾಗೃತಿಯಿಂದ ನಕಾರಾತ್ಮಕ ಶಕ್ತಿ ತೊಡೆದು ಸಕಾರಾತ್ಮಕ ಶಕ್ತಿ ಉದ್ದೀಪನಗೊಳ್ಳುತ್ತದೆ. ಇಂತಹ ಮೂರ್ತಿಗಳನ್ನು ಪೂಜಿಸುವ ಸ್ಥಳದಲ್ಲಿ ಚೈತನ್ಯ ಶಕ್ತಿಯ ಕಂಪನ ಸೃಷ್ಟಿಯಾಗುತ್ತದೆ. ಇದು ಅನುಭವಿಸಿದರೆ ಮಾತ್ರ ವೇದ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT