ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಣಜಿ ಟ್ರೋಫಿ | ವಿದ್ವತ್‌ಗೆ ವಿಶ್ರಾಂತಿ; ಐವರು ಮಧ್ಯಮವೇಗಿಗಳಿಗೆ ಸ್ಥಾನ

ಕರ್ನಾಟಕ ತಂಡಕ್ಕೆ ಮಯಂಕ್ ಸಾರಥ್ಯ; ಅಭಿಲಾಷ್, ವಿದ್ಯಾಧರ್‌ಗೆ ಸ್ಥಾನ
Published : 1 ಅಕ್ಟೋಬರ್ 2024, 13:20 IST
Last Updated : 1 ಅಕ್ಟೋಬರ್ 2024, 13:20 IST
ಫಾಲೋ ಮಾಡಿ
Comments

ಬೆಂಗಳೂರು: ಕರ್ನಾಟಕ ತಂಡದ ಪ್ರಮುಖ ವೇಗಿ ವಿದ್ವತ್ ಕಾವೇರಪ್ಪ ಅವರು ಗಾಯಗೊಂಡಿದ್ದಾರೆ. ಮೊಣಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಅವರು ಇನ್ನೂ ಆರು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಆದ್ದರಿಂದ ಅವರನ್ನು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ರಾಜ್ಯ ತಂಡದಲ್ಲಿ ಸ್ಥಾನ ನೀಡಿಲ್ಲ. 

ಮಂಗಳವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿರುವ ತಂಡದಲ್ಲಿ 16 ಆಟಗಾರರು ಸ್ಥಾನ ಪಡೆದಿದ್ದಾರೆ. ಮಯಂಕ್ ಅಗರವಾಲ್ ತಂಡದ ನಾಯಕ ಹಾಗೂ ಮನೀಷ್ ಪಾಂಡೆ ಉಪನಾಯಕರಾಗಿ ನೇಮಕವಾಗಿದ್ದಾರೆ. 

ಪ್ರಸಿದ್ಧ ಎಂ ಕೃಷ್ಣ, ವೈಶಾಖ ವಿಜಯಕುಮಾರ್, ವಿ. ಕೌಶಿಕ್,  ಹೊಸಪ್ರತಿಭೆ ಎಡಗೈ ಬೌಲರ್ ಅಭಿಲಾಷ್ ಶೆಟ್ಟಿ ಮತ್ತು ರಾಯಚೂರು ವಲಯದ ವಿದ್ಯಾಧರ್ ಪಾಟೀಲ ಸೇರಿ ಒಟ್ಟು ಐವರು ಮಧ್ಯಮವೇಗಿಗಳಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಕೇರಳದಿಂದ ಮರಳಿ ಬಂದಿರುವ  ಸೀನಿಯರ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರಿಗೆ ಆಲ್‌ರೌಂಡರ್ ಹಾರ್ದಿಕ್ ರಾಜ್ ಜೊತೆಯಾಗಲಿದ್ದಾರೆ. ಹಾರ್ದಿಕ್ ಅವರು ಹೋದ ಬಾರಿಯ ರಣಜಿ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದರು. 

ವಿಕೆಟ್‌ಕೀಪರ್ ಶರತ್ ಶ್ರೀನಿವಾಸ್ ಅವರು ಕರ್ನಾಟಕ ತೊರೆದು ತ್ರಿಪುರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.  ಇದರಿಂದಾಗಿ ಹೋದ ಬಾರಿ ಆಡಿದ್ದ ಸುಜಯ್ ಸತೇರಿ ಮತ್ತೊಂದು ಅವಕಾಶ ಪಡೆದಿದ್ದಾರೆ. ಲವನೀತ್ ಸಿಸೋಡಿಯಾ ಎರಡನೇ ವಿಕೆಟ್‌ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್‌ ವಿಭಾಗವು ಅನುಭವಿಗಳಾದ ಮಯಂಕ್, ನಿಕಿನ್, ಪಾಂಡೆ ಹಾಗೂ ದೇವದತ್ತ ಅವರ ಮೇಲೆ ಅವಲಂಬಿತವಾಗಿದೆ. ಯುವ ಆಟಗಾರ ಆರ್. ಸ್ಮರಣ್ ತಂಡದಲ್ಲಿದ್ದು ತಮ್ಮ ಪ್ರತಿಭೆ ಮೆರೆಯಲು ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ಋತುವಿನ ವಿವಿಧ  ಟೂರ್ನಿಗಳಲ್ಲಿ ಸ್ಮರಣ್ ಅವರು 700 ರನ್‌ ಪೇರಿಸಿದ್ದಾರೆ. 

ಆದರೆ ಬೀಸಾಟದ ಬ್ಯಾಟರ್ ಅಭಿನವ್ ಮನೋಹರ್ ಮತ್ತು ಎಲ್.ಆರ್. ಚೇತನ್ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಇವರಿಬ್ಬರೂ ಸಂಭವನೀಯರ ಪಟ್ಟಿಯಲ್ಲಿದ್ದರು.

ತಂಡ ಇಂತಿದೆ: ಮಯಂಕ್ ಅಗರವಾಲ್ (ನಾಯಕ), ನಿಕಿನ್ ಜೋಸ್, ದೇವದತ್ತ ಪಡಿಕ್ಕಲ್, ಆರ್. ಸ್ಮರಣ್, ಮನೀಷ್ ಪಾಂಡೆ (ಉಪನಾಯಕ), ಶ್ರೇಯಸ್ ಗೋಪಾಲ್, ಸುಜಯ್ ಸತೇರಿ (ವಿಕೆಟ್‌ಕೀಪರ್), ಹಾರ್ದಿಕ್ ರಾಜ್, ವೈಶಾಖ ವಿಜಯಕುಮಾರ್, ಪ್ರಸಿದ್ಧಕೃಷ್ಣ, ವಿ. ಕೌಶಿಕ್, ಲವನೀತ್ ಸಿಸೊಡಿಯಾ(ವಿಕೆಟ್‌ಕೀಪರ್), ಮೊಹಸಿನ್ ಖಾನ್, ವಿದ್ಯಾಧರ ಪಾಟೀಲ, ಕಿಶನ್ ಎಸ್ ಬೆದರೆ, ಅಭಿಲಾಷ್ ಶೆಟ್ಟಿ. ಯರೇಗೌಡ (ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶಬರೀಶ್ ಪಿ. ಮೋಹನ್ (ಫೀಲ್ಡಿಂಗ್ ಕೋಚ್), ಎ. ರಮೇಶ್ ರಾವ್ (ಮ್ಯಾನೇಜರ್), ಎ. ಜಾಬ ಪ್ರಭು (ಫಿಸಿಯೊಥೆರಪಿಸ್ಟ್). 

ಅಭಿಲಾಷ್ ಶೆಟ್ಟಿ
ಅಭಿಲಾಷ್ ಶೆಟ್ಟಿ
ಮಯಂಕ್ ಅಗರವಾಲ್
ಮಯಂಕ್ ಅಗರವಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT