ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಶಾಲೆ ಉಳಿಸಲು ವೇಷ ಧರಿಸಿ ದೇಣಿಗೆ ಸಂಗ್ರಹ

ದೇವಸ್ಯಮೂಡೂರು: ‘ಶಾರ್ದೂಲ ವೇಷ’ದ ಮೊರೆ ಹೋದ ಶಾಲಾಭಿವೃದ್ಧಿ ಸಮಿತಿ
ಮೋಹನ್ ಕೆ.ಶ್ರೀಯಾನ್ ರಾಯಿ
Published : 4 ಅಕ್ಟೋಬರ್ 2024, 5:05 IST
Last Updated : 4 ಅಕ್ಟೋಬರ್ 2024, 5:05 IST
ಫಾಲೋ ಮಾಡಿ
Comments

ಬಂಟ್ವಾಳ (ದಕ್ಷಿಣ ಕನ್ನಡ): ಇಲ್ಲಿನ ದೇವಸ್ಯಮೂಡೂರು ಎಂಬಲ್ಲಿ 69 ವರ್ಷಗಳ ಹಿಂದೆ ಆರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳಿಸಿ ಬೆಳೆಸಲು ನವರಾತ್ರಿ ಉತ್ಸವ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ತಂಡವೇ ‘ಶಾರ್ದೂಲ ವೇಷ’ ಧರಿಸಿ ಹಣ ಸಂಗ್ರಹಿಸುತ್ತಿದೆ.

1955ರಲ್ಲಿ ಆರಂಭಗೊಂಡ ಈ ಶಾಲೆಗೆ ಸುಮಾರು 1.20 ಎಕರೆ ಜಮೀನು ಇದ್ದರೂ ಸುತ್ತ ಆವರಣ ಗೋಡೆ ಇಲ್ಲ. ಇಲ್ಲಿನ ಶಾಲಾ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದೆ. ರಾಜ್ಯದಲ್ಲಿ ಈಗಾಗಲೇ ಹಲವಾರು ಸರ್ಕಾರಿ ಶಾಲೆಗಳು ಶೂನ್ಯ ದಾಖಲಾತಿ ನೆಪದಲ್ಲಿ ಬಾಗಿಲು ಮುಚ್ಚಿವೆ. ಇದೀಗ ಜನಪ್ರತಿನಿಧಿಗಳು ಮತ್ತು ಸರ್ಕಾರಕ್ಕೆ ಬದಲಾಗಿ ಸರ್ಕಾರಿ ಶಾಲೆ ಉಳಿಸಲು ನಾವೇ ಹೋರಾಟ ನಡೆಸುವುದು ಅನಿವಾರ್ಯ ಎನ್ನುತ್ತಾರೆ ಸ್ಥಳೀಯರು.

84 ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆ ಉಳಿವಿಗೆ ಶಾಲಾಭಿವೃದ್ಧಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿಗಳ ತಂಡ ಪಣ ತೊಟ್ಟಿದ್ದು, ದಾನಿಗಳ ನೆರವಿನಲ್ಲಿ ವಿವಿಧ ಮೂಲಸೌಲಭ್ಯ ಒದಗಿಸಲು ಶ್ರಮಿಸುತ್ತಿದೆ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಮುದಿಮಾರ.

‘ಗ್ರಾಮೀಣ ಜನರ ಶಿಕ್ಷಣ ದೇಗುಲವಾಗಿರುವ ಈ ಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ನಿಟ್ಟಿನಲ್ಲಿ 5 ದಿನ ‘ಶಾರ್ದೂಲ ವೇಷ’ ಧರಿಸಿ ಹಣ ಸಂಗ್ರಹಿಸುವುದನ್ನು ಆರಂಭಿಸಿದ್ದೇವೆ. ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶವಂತ ಕಾಂದ್ರೋಡಿ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯ ಹರೀಶ ನಾಯ್ಕ್ ಹಾಗೂ ಕೆಲವು ಹಿರಿಯ ವಿದ್ಯಾರ್ಥಿಗಳೂ ನೆರವಾಗುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಕಾರ್ಕಳ ದಯಾಸಾಗರ್ ಸಂಸ್ಥೆ ಅಧ್ಯಕ್ಷ ಆರ್.ವಲೇರಿಯನ್ ಲೋಬೊ ಅವರು ಈಚೆಗೆ ನಮ್ಮ ಶಾಲೆಯ ಗೋಡೆಯಲ್ಲಿ ವರ್ಣ ಚಿತ್ರವನ್ನು ಉಚಿತವಾಗಿ ರಚಿಸಿದ್ದಾರೆ. ವಿದ್ಯಾ ಸರಸ್ವತಿ, ರಾಷ್ಟ್ರ ಪಕ್ಷಿ, ರಾಷ್ಟ್ರಪ್ರಾಣಿ, ಪ್ರಕೃತಿ ಮಾತೆ ಸೇರಿದಂತೆ ಸಾಲುಮರ ತಿಮ್ಮಕ್ಕ, ತುಳುನಾಡಿನ ಕಂಬಳ, ಯಕ್ಷಗಾನ, ಹಿಮ ಶಿಖರದಲ್ಲಿ ಸೈನಿಕರ ವರ್ಣ ಚಿತ್ರಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ’ ಎಂದು ಮುಖ್ಯಶಿಕ್ಷಕಿ ಹರಿಣಾಕ್ಷಿ ತಿಳಿಸಿದರು.

ಜಿಲ್ಲೆಯ ವಿವಿಧೆಡೆ 12 ಸರ್ಕಾರಿ ಶಾಲೆಗಳಲ್ಲಿ ‘ಉಚಿತ ವರ್ಣ ಚಿತ್ತಾರ’ ಕೊಡುಗೆ ನೀಡಿದ ಆರ್.ವಲೇರಿಯನ್ ಲೋಬೊ ಮತ್ತು ಫ್ಲೇವಿಯಾ ಲೋಬೊ ದಂಪತಿಯನ್ನು ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘವು ಗೌರವಿಸಿದೆ ಎಂದು ಅವರು ತಿಳಿಸಿದರು.

ಬಂಟ್ವಾಳ ತಾಲ್ಲೂಕಿನ ದೇವಸ್ಯಮೂಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ನೇತೃತ್ವದ ತಂಡ ಹುಲಿ ವೇಷ ಧರಿಸಿ ಹಣ ಸಂಗ್ರಹಿಸುತ್ತಿರುವುದು
ಬಂಟ್ವಾಳ ತಾಲ್ಲೂಕಿನ ದೇವಸ್ಯಮೂಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ನೇತೃತ್ವದ ತಂಡ ಹುಲಿ ವೇಷ ಧರಿಸಿ ಹಣ ಸಂಗ್ರಹಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT