ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಪ್ರತ್ಯೇಕ ರೈಲ್ವೆ ವಿಭಾಗ: ಹೆಚ್ಚಿದ ಕೂಗು

ರೈಲ್ವೆ ಬಳಕೆದಾರರ ಸಮಿತಿಯಿಂದ ಸಹಿ ಅಭಿಯಾನಕ್ಕೆ ಹೆಚ್ಚಿದ ಬೆಂಬಲ
Published 4 ಜುಲೈ 2024, 6:44 IST
Last Updated 4 ಜುಲೈ 2024, 6:44 IST
ಅಕ್ಷರ ಗಾತ್ರ

ಮಂಗಳೂರು: ಧಾರ್ಮಿಕ, ಶೈಕ್ಷಣಿಕ, ವಾಣಿಜ್ಯ ಕೇಂದ್ರವಾಗಿರುವ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎಂಬ ಬಹುಕಾಲದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನ ಸೆಳೆಯಲು ರೈಲ್ವೆ ಬಳಕೆದಾರರ ಸಮಿತಿ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಿದೆ.

ಮಂಗಳವಾರದಿಂದ ಆನ್‌ಲೈನ್‌ನಲ್ಲಿ ಸಹಿ ಸಂಗ್ರಹ ಅಭಿಯಾನ ಪ್ರಾರಂಭವಾಗಿದ್ದು, ಈಗಾಗಲೇ 500ಕ್ಕೂ ಹೆಚ್ಚು ಜನರು ಸಹಿ ಹಾಕಿದ್ದಾರೆ. ಆಗಸ್ಟ್‌ 2ರವರೆಗೆ ಈ ಅಭಿಯಾನ ಮುಂದುವರಿಯಲಿದೆ.

ಮಂಗಳೂರಿನಲ್ಲಿ ಎಂಸಿಎಫ್, ಕೆಐಒಸಿಎಲ್, ಎಂಆರ್‌ಪಿಎಲ್‌ ಮೊದಲಾದ ಪ್ರಮುಖ ಕೈಗಾರಿಕೆಗಳು ಇವೆ. ಕಡಲ ನಗರಿಯು ಈಗಾಗಲೇ ಶೈಕ್ಷಣಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇಲ್ಲಿಗೆ ಬರುತ್ತಾರೆ. ಆರೋಗ್ಯ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಇಲ್ಲಿ ಚಿಕಿತ್ಸೆ ಪಡೆಯಲು ಬೇರೆ ಬೇರೆ ಜಿಲ್ಲೆಗಳ ರೋಗಿಗಳು ಬರುತ್ತಾರೆ. ವೈದ್ಯಕೀಯ ಶಿಕ್ಷಣ ಪಡೆಯಲು ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ದೊಡ್ಡದಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಮೊದಲಾದ ಧಾರ್ಮಿಕ ಕ್ಷೇತ್ರಗಳು ಇವೆ. ಇಂತಹ ಪ್ರಮುಖ ನಗರಕ್ಕೆ ಪ್ರತ್ಯೇಕ ರೈಲ್ವೆ ವಿಭಾಗ ಇಲ್ಲದ ಕಾರಣ ರೈಲ್ವೆ ಸೌಲಭ್ಯದಲ್ಲಿ ಹಿಂದೆ ಬಿದ್ದಿದೆ ಎಂಬುದು ರೈಲ್ವೆ ಬಳಕೆದಾರರ ಸಮಿತಿಯ ಅಭಿಪ್ರಾಯ.

ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗ, ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗ ಹಾಗೂ ಕೊಂಕಣ ರೈಲ್ವೆ ನಿಗಮದ ಮಧ್ಯೆ ಮಂಗಳೂರಿನ ರೈಲ್ವೆ ಜಾಲ ಹಂಚಿಕೆಯಾಗಿದೆ. ಇದರಿಂದ ಮಂಗಳೂರಿಗೆ ಸಿಗಬೇಕಾದ ರೈಲ್ವೆ ಸೇವೆಗಳು ನಿರೀಕ್ಷಿತ ಮಟ್ಟದಲ್ಲಿ ದೊರೆಯುತ್ತಿಲ್ಲ. ಕೇರಳದ ಲಾಬಿಯಿಂದಾಗಿ ಕೇರಳ, ತಮಿಳುನಾಡಿನ ಕಡೆಗೆ ಹೋಗುವ ರೈಲುಗಳೇ ಹೆಚ್ಚಿವೆ. ಇನ್ನೊಂದೆಡೆ ಮಂಗಳೂರಿಗೆ ಹಾಸನ, ಸಕಲೇಶಪುರ ಮೂಲಕ ಹೊಸ ರೈಲು ತರುವ ಪ್ರಯತ್ನಕ್ಕೆ ಅಡ್ಡಿಪಡಿಸುವ ಹುನ್ನಾರಗಳೂ ನಡೆಯುತ್ತಿವೆ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಅಭಿವೃದ್ಧಿ ಹೊಂದಬೇಕಾದರೆ, ಪ್ರತ್ಯೇಕ ವಿಭಾಗ ಅಗತ್ಯವಿದೆ ಎನ್ನುತ್ತಾರೆ ಹೋರಾಟ ಸಮಿತಿಯ ಪ್ರಮುಖರು.

ಈಗಾಗಲೇ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆ ಇಲಾಖೆಯಡಿ ಸೇರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಇದು ಸಾಧ್ಯವಾದರೆ, ಮಂಗಳೂರಿನಿಂದ ಮಡಗಾಂವ್‌ವರೆಗೆ ಹಾಗೂ ಮಂಗಳೂರಿನಿಂದ ಸಕಲೇಶಪುರ, ಹಾಸನದವರೆಗೆ ರೈಲ್ವೆ ಜಾಲವನ್ನು ಸೇರಿಸಿ ಮಂಗಳೂರು ಸೆಂಟ್ರಲ್ ಅನ್ನು ಕೇಂದ್ರ ಸ್ಥಾನವಾಗಿ ಮಾಡಿ ಪ್ರತ್ಯೇಕ ರೈಲ್ವೆ ವಿಭಾಗ ಆರಂಭಿಸಬಹುದು. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಹೊಸ ರೈಲು ಪ್ರಾರಂಭಿಸಲು ಮೂರು ವಿಭಾಗಗಳ ಅನುಮತಿ ಪಡೆಯಬೇಕಾಗುತ್ತದೆ. ಪ್ರತ್ಯೇಕ ವಿಭಾಗವಾದರೆ, ಸುಬ್ರಹ್ಮಣ್ಯದಿಂದ ಮಡಗಾಂವ್‌ವರೆಗೆ ಹೊಸ ರೈಲು ಪ್ರಾರಂಭಿಸಲು ತ್ವರಿತ ನಿರ್ಧಾರ ಕೈಗೊಳ್ಳಬಹುದು ಎನ್ನುತ್ತಾರೆ ಅವರು.

ಈ ಅಭಿಯಾನಕ್ಕೆ ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿ, ರೈಲ್ವೆ ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ.

‘ಮಂಗಳೂರಿನಲ್ಲಿರುವ ಎನ್‌ಎಂಪಿಎ, ಎಂಆರ್‌ಪಿಎಲ್‌, ಕೆಐಒಸಿಎಲ್‌ನಂತಹ ಕೈಗಾರಿಕೆಗಳ ಸರಕು ಸಾಗಣೆಯಿಂದ ಪಾಲಕ್ಕಾಡ್ ವಿಭಾಗಕ್ಕೆ ದೊಡ್ಡ ಪ್ರಮಾಣದ ಆದಾಯ ದೊರೆಯುತ್ತಿದೆ. ಆದರೆ, ಮಂಗಳೂರನ್ನು ಕಡೆಗಣಿಸಿ, ಕೇರಳ ಕೇಂದ್ರಿತವಾಗಿ ವಿಭಾಗವು ನಿರ್ಧಾರ ಕೈಗೊಳ್ಳುತ್ತದೆ. ಇದರಿಂದ ಮಂಗಳೂರು ಭಾಗದ ಜನರಿಗೆ ನಿರಂತರ ಅನ್ಯಾಯವಾಗುತ್ತಿದೆ’ ಎನ್ನುತ್ತಾರೆ ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿಯ ತಾಂತ್ರಿಕ ಸಲಹೆಗಾರ ಅನಿಲ್‌ ಹೆಗ್ಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT