ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾತನಾಮಯ ಬದುಕಿಗೆ ಮುಕ್ತಿ ಬೇಡುವ ನಿವಾಸಿಗಳು

Published : 4 ಅಕ್ಟೋಬರ್ 2024, 4:29 IST
Last Updated : 4 ಅಕ್ಟೋಬರ್ 2024, 4:29 IST
ಫಾಲೋ ಮಾಡಿ
Comments

ಹರಿಹರ: ನಗರದ ಕೊಳೆಗೇರಿಗಳಾದ ರೈಲ್ವೆ ಗೂಡ್ಸ್ ಶೆಡ್ (ಭಾರತ್ ಆಯಿಲ್ ಮಿಲ್ ಕಾಂಪೌಂಡ್), ಮಹಾತ್ಮ ಗಾಂಧಿ ನಗರ, ಬೆಂಕಿ ನಗರ, ಗಂಗಾ ನಗರ, ಕೈಲಾಸ ನಗರ, ಬೆಸ್ಕಾಂ ಕಚೇರಿ ಪಕ್ಕದ ಗಾಂಧಿ ನಗರ, ಬಾಂಗ್ಲಾ ಬಡಾವಣೆಯಲ್ಲಿನ ಸ್ಥಿತಿ ಶೋಚನೀಯ.

ಕೊಳೆಗೇರಿಗಳಲ್ಲಿನ ಜನರು ರಸ್ತೆ, ಚರಂಡಿ, ಶೌಚಾಲಯ, ಬೀದಿ ದೀಪ ಇತ್ಯಾದಿ ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿದ್ದು, 2ನೇ ದರ್ಜೆಯ ನಾಗರಿಕರಂತೆ ಬದುಕು ನಡೆಸುತ್ತಿದ್ದಾರೆ.

ಡಿಆರ್‌ಎಂ ಪ್ರೌಢಶಾಲೆ ಬಳಿ ಇರುವ ಮಹಾತ್ಮ ಗಾಂಧಿ ಕೊಳೆಗೇರಿಯಲ್ಲಿ 8X15 ಅಡಿ ಅಳತೆಯ ಮನೆಗಳು ದೊಡ್ಡ ಸಂಖ್ಯೆಯಲ್ಲಿವೆ. ಇದರಲ್ಲಿಯೇ ತಂದೆ, ತಾಯಿ, ಮಕ್ಕಳು, ಸೊಸೆಯಂದಿರು, ಮಕ್ಕಳು ವಾಸಿಸುತ್ತಿದ್ದಾರೆ. ಮಹಿಳೆಯರಿಗೆ ಸಾಮೂಹಿಕ ಶೌಚಾಲಯದ ವ್ಯವಸ್ಥೆ ಇದ್ದು, ಪುರುಷರು ಪ್ರಕೃತಿ ಕರೆಗೆ ಕತ್ತಲನ್ನು ಕಾಯಬೇಕಿದೆ. ಒಂದು ಬೈಕ್ ಕೂಡ ಹೋಗದಂತಹ ಕಿಷ್ಕಿಂಧೆ ರಸ್ತೆ, ಕಟ್ಟಿಕೊಂಡಿರುವ ಚರಂಡಿಗಳು, ಬೀದಿ ದೀಪಗಳ ಅವ್ಯವಸ್ಥೆ, ಕೈಗೆ ಸಿಗದ ಹಕ್ಕುಪತ್ರ, ಈ ಪ್ರದೇಶದ ಒಂದು ಭಾಗದ ಜಾಗದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವುದು ಇಲ್ಲಿನ ಪ್ರಮುಖ ಸಮಸ್ಯೆಗಳಾಗಿವೆ.

ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಗೂಡ್ಸ್‌ ಶೆಡ್ ಕೊಳೆಗೇರಿಯಲ್ಲಿ 6X15 ಅಡಿ ಅಳತೆಯ ಮನೆಗಳು ಅಪಾರವಾಗಿವೆ. ಗುಬ್ಬಚ್ಚಿ ಗೂಡಿನಂತಿರುವ ಮನೆಗಳಲ್ಲಿ ವಾಸಿಸುವ ಶಿಕ್ಷೆ ಇಲ್ಲಿನ ನಿವಾಸಿಗಳದ್ದಾಗಿದೆ. ನಗರಸಭೆಯಿಂದ ನಿರ್ಮಿಸಿರುವ ಸಾಮೂಹಿಕ ಶೌಚಾಲಯದ ನಿರ್ವಹಣೆ ಇಲ್ಲದ ಕಾರಣ ಬೀಗ ಹಾಕಲಾಗಿದೆ. ಸಮೀಪದ ಬಸ್ ನಿಲ್ದಾಣದ ಶೌಚಾಲಯವೇ ಇಲ್ಲಿನ ಜನರಿಗೆ ಆಸರೆಯಾಗಿದೆ. ಬಹುತೇಕ ಮನೆಗಳಿಗೆ ಕಾಮನ್ ವಾಲ್ ಇದ್ದು, ಗಾಳಿ, ಬೆಳಕು ಮರೀಚಿಕೆಯಾಗಿದೆ.

ಎಪಿಎಂಸಿ ಹಿಂಭಾಗದಲ್ಲಿ ಎಪಿಎಂಸಿ ಗೋಡೆಗೆ ತಾಗಿಕೊಂಡು ನಿರ್ಮಿಸಿರುವ ಮನೆಗಳಿರುವ ಗಂಗಾನಗರದಲ್ಲಿ 40ಕ್ಕೂ ಹೆಚು ಮನೆಗಳಿದ್ದು, ಮಳೆ ಹೆಚ್ಚು ಸುರಿದಾಗ ಜಲಾವೃತವಾಗುತ್ತದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ತುಂಗಭದ್ರಾ ನದಿಯ ಹಿನ್ನೀರು ಈ ಭಾಗದ ಜನರಿಗೆ ಶಾಪವಾಗಿ ಪರಿಣಮಿಸಿದೆ. 10 ವರ್ಷಗಳಿಂದಲೂ ಹೋರಾಟ ಮಾಡುತ್ತಿರುವ ಇಲ್ಲಿನ ನಿವಾಸಿಗಳಿಗೆ ಸ್ವಂತ ಸೂರು ಹೊಂದುವ, ಗೌರವಯುತ ಬದುಕು ಸಾಗಿಸುವ ಭಾಗ್ಯ ಸಿಕ್ಕಿಲ್ಲ.

ಬೆಸ್ಕಾಂ ಕಚೇರಿ ಪಕ್ಕದ ಗಾಂಧಿ ನಗರ ಕೊಳೆಗೇರಿಯಲ್ಲಿ 80ಕ್ಕೂ ಹೆಚ್ಚು ಮನೆಗಳಿದ್ದು, ನಿವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಈ ಜಾಗದ ಪ್ರಕರಣ ನ್ಯಾಯಾಲಯದಲ್ಲಿದೆ. ಇವರೂ ಸರ್ಕಾರದ ಯಾವುದಾದರು ಯೋಜನೆ ಅಡಿ ಸ್ವಂತ ಸೂರಿನ ನಿರೀಕ್ಷೆಯಲ್ಲಿದ್ದಾರೆ.

ಕಟ್ಟಿಕೊಂಡಿರುವ ಒಳಚರಂಡಿ
ಕಟ್ಟಿಕೊಂಡಿರುವ ಒಳಚರಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT