ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತರಳಬಾಳು ಮಠದ ₹ 2,000 ಕೋಟಿ ಆಸ್ತಿ ವರ್ಗಾವಣೆ: ಸ್ವಾಮೀಜಿ ವಿರುದ್ಧ ಭಕ್ತರ ಆರೋಪ

Published : 1 ಸೆಪ್ಟೆಂಬರ್ 2024, 13:42 IST
Last Updated : 1 ಸೆಪ್ಟೆಂಬರ್ 2024, 13:42 IST
ಫಾಲೋ ಮಾಡಿ
Comments

ದಾವಣಗೆರೆ: ಏಕವ್ಯಕ್ತಿ ಟ್ರಸ್ಟ್‌ ಡೀಡ್‌ ರೂಪಿಸಿಕೊಂಡು ತರಳಬಾಳು ಮಠಕ್ಕೆ ಸೇರಿದ ಅಂದಾಜು ₹ 2,000 ಕೋಟಿ ಮೌಲ್ಯದ ಆಸ್ತಿಯನ್ನು ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಮಠವನ್ನು ಖಾಸಗಿ ಸ್ವತ್ತಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಸಾದರ ಲಿಂಗಾಯತ ಸಮುದಾಯದ ಮುಖಂಡರು ಆರೋಪಿಸಿದರು.

ನಗರದಲ್ಲಿ ವೀರಶೈವ ಲಿಂಗಾಯತ ಭಕ್ತರ ಬಳಗದ ವತಿಯಿಂದ ಭಾನುವಾರ ನಡೆದ ಸಭೆಯಲ್ಲಿ ಸಿರಿಗೆರೆಯ ತರಳಬಾಳು ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಬೇಕು ಎಂಬ ಹೋರಾಟವನ್ನು ಮುಂದುವರಿಸಲು ತೀರ್ಮಾನಿಸಲಾಯಿತು. ಭಕ್ತರಲ್ಲಿ ಜಾಗೃತಿ ಮೂಡಿಸಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲು ನಿರ್ಣಯ ಕೈಗೊಂಡಿತು.

‘1977ರಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರೂಪಿಸಿದ್ದ ಬೈಲಾ ರದ್ದುಪಡಿಸಿ 1990ರಲ್ಲಿ ಏಕವ್ಯಕ್ತಿ ಟ್ರಸ್ಟ್‌ ಡೀಡ್‌ ಮಾಡಿಕೊಳ್ಳಲಾಗಿದೆ. ಹಳೆಯ ಮಠವನ್ನು ನುಂಗಿಹಾಕಿ ಹೊಸ ನಾಮಕರಣ ಮಾಡಲಾಗಿದೆ. ಜಮೀನು, ಶಿಕ್ಷಣ ಸಂಸ್ಥೆ ಸೇರಿ ಮಠದ ಸಂಪೂರ್ಣ ಆಸ್ತಿ ಏಕ ವ್ಯಕ್ತಿ ಟ್ರಸ್ಟ್‌ಗೆ ವರ್ಗಾವಣೆಗೊಂಡಿದೆ. ಟ್ರಸ್ಟ್‌ನಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪರಮಾಧಿಕಾರ ಹೊಂದಿದ್ದು, ಎಲ್ಲವೂ ಅವರ ಸ್ವತ್ತಾಗಿ ಬದಲಾಗಿದೆ. ₹ 2,000 ಕೋಟಿ ಆಸ್ತಿ ಹೊಂದಿದ ನೀವು (ಪೀಠಾಧಿಪತಿ) ಬಂಡವಾಳಶಾಹಿ ಅಲ್ಲವೇ’ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಮಠ ಹಾಗೂ ಪೀಠಾಧಿಪತಿಯನ್ನು ಭಕ್ತರು ವಿರೋಧಿಸುತ್ತಿಲ್ಲ. ಮಠದಲ್ಲಿರುವ ಭಕ್ತರ ಆಸ್ತಿ ಉಳಿಯಬೇಕು ಎಂಬುದಷ್ಟೇ ನಮ್ಮ ಕಳಕಳಿ. ಭಕ್ತರ ಮನಸಿನಲ್ಲಿ ವಿಷಬೀಜ ಬಿತ್ತಿ ಸಮಾಜವನ್ನು ಇಬ್ಬಾಗ ಮಾಡಬೇಡಿ. ಸುತ್ತೂರು ಮಠ, ಮಾದಾರ ಚನ್ನಯ್ಯ ಗುರುಪೀಠದಂತೆ ತರಳಬಾಳು ಮಠಕ್ಕೂ ಉತ್ತರಾಧಿಕಾರಿ ನೇಮಕವಾಗಬೇಕು’ ಎಂದರು.

ಉದ್ಯಮಿ ಅಣಬೇರು ರಾಜಣ್ಣ, ‘ಅನ್ನ, ಅಕ್ಷರ ದಾಸೋಹದಲ್ಲಿ ವೀರಶೈವ ಲಿಂಗಾಯತ ಮಠಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿವೆ. ಸಮಾಜ ತಿದ್ದುವ, ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸುವ ಮಠಾಧೀಶರಿಗೆ ಆಸ್ತಿ, ಹಣದ ವ್ಯಾಮೋಹ ಏಕೆ? ಭಕ್ತರು ಮಠಕ್ಕೆ ನೀಡಿದ ಕಾಣಿಕೆಯನ್ನು ಸ್ವಂತ ಆಸ್ತಿಯಾಗಿ ಪರಿವರ್ತನೆ ಮಾಡಿಕೊಳ್ಳುವುದು ತಪ್ಪಲ್ಲವೇ’ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌, ಮಾಜಿ ಶಾಸಕ ವಡ್ನಾಳ್‌ ರಾಜಣ್ಣ ಇದ್ದರು.

ಭಕ್ತರ ಸಭೆಯ ಒತ್ತಾಯ
  • 1990ರಲ್ಲಿ ರಚನೆಯಾದ ಏಕವ್ಯಕ್ತಿ ಟ್ರಸ್ಟ್‌ಡೀಡ್‌ ರದ್ದುಪಡಿಸಬೇಕು

  • 1977ರ ಬೈಲಾ ಪ್ರಕಾರ ತರಳಬಾಳು ಮಠಕ್ಕೆ ಉತ್ತರಾಧಿಕಾರಿ ನೇಮಿಸಬೇಕು

  • ಹಾಳಾಗಿರುವ ಶಾಲೆ–ಕಾಲೇಜುಗಳನ್ನು ಅಭಿವೃದ್ಧಿಪಡಿಸಿ ಅಕ್ಷರ ದಾಸೋಹ ಮುಂದುವರಿಸಬೇಕು

  • ಮಠದ ಭಕ್ತರ ಮೇಲೆ ಹಾಕಿರುವ ಪ್ರಕರಣಗಳು ಹಿಂಪಡೆಯಬೇಕು

  • ಸಾದರ ಸಮಾಜದಲ್ಲಿ ಮೂಡಿರುವ ಗೊಂದಲ ನಿವಾರಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT