ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪೌಷ್ಟಿಕತೆ ನಿವಾರಣೆ ಕಾರ್ಯಕ್ಕೆ ಹಿನ್ನಡೆ

ಪುನರ್ವಸತಿ ಕೇಂದ್ರಕ್ಕೆ ದಾಖಲಾಗುವ ಮಕ್ಕಳ ಪಾಲಕರ ದಿನಗೂಲಿ ಕಡಿತ
Published : 21 ಸೆಪ್ಟೆಂಬರ್ 2024, 6:42 IST
Last Updated : 21 ಸೆಪ್ಟೆಂಬರ್ 2024, 6:42 IST
ಫಾಲೋ ಮಾಡಿ
Comments

ದಾವಣಗೆರೆ: ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ದಾಖಲಾಗುವ ಚಿಣ್ಣರೊಂದಿಗೆ ಆರೈಕೆಗೆ ಬರುವ ಪಾಲಕರಿಗೆ ದಿನಗೂಲಿ ಹೆಸರಲ್ಲಿ ನೀಡುತ್ತಿದ್ದ ಸಹಾಯಧನವನ್ನು ಕೇಂದ್ರ ಸರ್ಕಾರ ₹ 309ರಿಂದ ₹ 104ಕ್ಕೆ ಕಡಿತಗೊಳಿಸಿದ ಪರಿಣಾಮ ‘ಅಪೌಷ್ಟಿಕತೆ’ ನಿವಾರಣೆಯ ಕಾರ್ಯಕ್ಕೆ ಹಿನ್ನಡೆ ಉಂಟಾಗುತ್ತಿದೆ.

ಕೇಂದ್ರ ಸರ್ಕಾರದ ಸಹಾಯ ಧನದಲ್ಲಿ ಜಿಲ್ಲಾ ಮಟ್ಟದಲ್ಲಿ ಪುನರ್ವಸತಿ ಕೇಂದ್ರಗಳು 2013ರಿಂದ ಕಾರ್ಯ ನಿರ್ವಹಿಸುತ್ತಿವೆ. 5 ವರ್ಷದೊಳಗಿನ ತೀವ್ರ ಮತ್ತು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಇಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಹೀಗೆ ಚಿಕಿತ್ಸೆಗೆ ದಾಖಲಾಗುವ ಮಕ್ಕಳ ಪಾಲಕರಿಗೆ ನಿಗದಿಪಡಿಸಿದ ದಿನಗೂಲಿಯನ್ನು 2023ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ಪರಿಷ್ಕರಿಸಿದೆ.

ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಶಿಫಾರಸುಗೊಂಡ ಮಕ್ಕಳನ್ನು ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿಕೊಳ್ಳಲಾಗುತ್ತದೆ. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಮಕ್ಕಳಲ್ಲಿ ಅಪೌಷ್ಟಿಕತೆ ಪತ್ತೆಯಾದರೆ ಪುನರ್ವಸತಿ ಕೇಂದ್ರದಲ್ಲಿ ಇರಿಸಿ ಅಪೌಷ್ಟಿಕತೆ ನಿವಾರಿಸಲು ವ್ಯವಸ್ಥೆ ಮಾಡಲಾಗುತ್ತದೆ. ಇಂತಹ ಮಕ್ಕಳೊಂದಿಗೆ ಒಬ್ಬ ಪಾಲಕರು 14 ದಿನ ಕೇಂದ್ರದಲ್ಲಿಯೇ ತಂಗಬೇಕಾಗುತ್ತದೆ.

‘ಮಕ್ಕಳಿಗೆ ಔಷಧದ ಜೊತೆಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಚಿಕಿತ್ಸೆ ಜೊತೆಗೆ ಕೂಲಿ ಸಿಗುವ ಭರವಸೆಯೊಂದಿಗೆ ಪಾಲಕರು ಮಕ್ಕಳೊಂದಿಗೆ ತಂಗುತ್ತಿದ್ದರು. ಕೂಲಿ ಬಿಟ್ಟು ಪುನರ್ವಸತಿ ಕೇಂದ್ರಕ್ಕೆ ಬರಲು ಬಡವರು ಇತ್ತೀಚೆಗೆ ಹಿಂದೇಟು ಹಾಕುತ್ತಿದ್ದಾರೆ. ಅವರ ಮನವೊಲಿಸಲು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಕೇಂದ್ರದ ಸಿಬ್ಬಂದಿ.

ಜಿಲ್ಲಾ ಕೇಂದ್ರಗಳಲ್ಲಿ 10 ಹಾಸಿಗೆ ವ್ಯವಸ್ಥೆಯ ಪುನರ್ವಸತಿ ಕೇಂದ್ರಗಳಿವೆ. ಪ್ರತಿ ತಿಂಗಳು ಗರಿಷ್ಠ 20 ಮಕ್ಕಳಿಗೆ ಚಿಕಿತ್ಸೆ ನೀಡಲು ಅವಕಾಶವಿದೆ. ₹ 309 ಕೂಲಿ ಇದ್ದಾಗ ಎಲ್ಲ ಹಾಸಿಗೆಗಳು ಭರ್ತಿಯಾಗಿರುತ್ತಿದ್ದವು. ದಿನಗೂಲಿ ಕಡಿತಗೊಳಿಸಿದ ಬಳಿಕ ಮಾಸಿಕ ಸರಾಸರಿ 14 ರಿಂದ 16 ಮಕ್ಕಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪೂರ್ಣ ಎರಡು ವಾರ ಕೇಂದ್ರದಲ್ಲಿ ಉಳಿಯದೇ ಚಿಕಿತ್ಸೆ ಮಧ್ಯದಲ್ಲೇ ಮನೆಗೆ ಮರಳುತ್ತಿದ್ದಾರೆ.

ತಾಲ್ಲೂಕು ಕೇಂದ್ರದಲ್ಲಿ ₹ 309 ಕೂಲಿ

ಅಪೌಷ್ಟಿಕತೆಯ ನಿವಾರಣೆಗೆ ಜಿಲ್ಲಾ ಮಟ್ಟದಂತೆ ತಾಲ್ಲೂಕು ಮಟ್ಟದಲ್ಲಿಯೂ ಪುನರ್ವಸತಿ ಕೇಂದ್ರಗಳನ್ನು ರಾಜ್ಯ ಸರ್ಕಾರ ಸ್ಥಾಪಿಸುತ್ತಿದೆ. ಮೊದಲ ಹಂತದಲ್ಲಿ ಮೀಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇವು ಕಾರ್ಯಾರಂಭಗೊಳ್ಳುತ್ತಿವೆ. ಇಲ್ಲಿಗೆ ದಾಖಲಾಗುವ ಮಕ್ಕಳ ಪಾಲಕರಿಗೆ ₹ 309 ಕೂಲಿ ಇದೆ.

‘ರಾಜ್ಯ ಸರ್ಕಾರದ ಸಹಾಯಧನದಲ್ಲಿ ಕಾರ್ಯ ನಿರ್ವಹಿಸುವ ಕೇಂದ್ರಗಳಲ್ಲಿ 5 ಹಾಸಿಗೆಗಳಷ್ಟೇ ಇವೆ. ಕೂಲಿ ಹೆಚ್ಚಿರುವ ಕಾರಣಕ್ಕೆ ಇಂತಹ ಕೇಂದ್ರಗಳನ್ನು ಪಾಲಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾ ಮಟ್ಟದ ಕೇಂದ್ರಕ್ಕೆ ಬರಲು ಆಸಕ್ತಿ ತೋರುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾರೆ ಕೆಲಸದಲ್ಲಿ ನಿತ್ಯ ₹ 600 ಕೂಲಿ ಸಿಗುತ್ತದೆ. 6 ದಿನಗಳಿಂದ ಮಗುವನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರಿಂದ ಕೆಲಸಕ್ಕೆ ಹೋಗಿಲ್ಲ. ₹ 309 ದಿನಗೂಲಿ ಇದ್ದಿದ್ದರೆ ಅನುಕೂಲವಾಗುತ್ತಿತ್ತು.
ಪಿ.ಪ್ರದೀಪ್, ಪಾಲಕ, ಜಂಬೂಲಿಂಗನಹಳ್ಳಿ, ಹರಪನಹಳ್ಳಿ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT