ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ತುಸು ತಗ್ಗಿದ ತರಕಾರಿ ದರ; ಗ್ರಾಹಕ ನಿರಾಳ

ವಾರದ ಹಿಂದಷ್ಟೇ ದುಬಾರಿಯಾಗಿದ್ದ ತರಕಾರಿ ದರ; ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕ
Published 30 ಜೂನ್ 2024, 7:45 IST
Last Updated 30 ಜೂನ್ 2024, 7:45 IST
ಅಕ್ಷರ ಗಾತ್ರ

ದಾವಣಗೆರೆ: ಕಳೆದ ವಾರವಷ್ಟೇ ಗ್ರಾಹಕರ ಪಾಲಿಗೆ ದುಬಾರಿಯಾಗಿದ್ದ ಬಹುತೇಕ ತರಕಾರಿಗಳ ದರದಲ್ಲಿ ಕೆಲ ದಿನಗಳಿಂದ ಇಳಿಮುಖವಾಗಿದೆ.

₹ 60ರಿಂದ ₹ 100ರ ವರೆಗೆ ಇದ್ದ ಹೆಚ್ಚಿನ ತರಕಾರಿಗಳ ದರ, ಮಂಗಳವಾರದಿಂದ ಕುಸಿತಗೊಂಡಿದ್ದು, ಸದ್ಯ ಕೆ.ಜಿ.ಗೆ ₹ 30ರಿಂದ ₹ 80ರ ಆಸುಪಾಸಿನಲ್ಲಿ ಮಾರಾಟವಾಗುತ್ತಿವೆ.

‘ಮಳೆ ಕೊರತೆಯಿಂದಾಗಿ ತರಕಾರಿ ಆವಕದಲ್ಲಿ ಕುಸಿತ ಕಂಡಿತ್ತು. ಇದರಿಂದಾಗಿ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ದರ ಏರಿಕೆಯಾಗಿತ್ತು. ಗ್ರಾಹಕರು ಹೆಚ್ಚಿನ ತರಕಾರಿ ಖರೀದಿಸದ ಸ್ಥಿತಿ ಉಂಟಾಗಿತ್ತು. ಆದರೆ, ಜಿಲ್ಲೆಯ ವಿವಿಧೆಡೆ ಆಗಾಗ ಸುರಿದ ಮಳೆ ಹಾಗೂ ಕೊಳವೆಬಾವಿಯ ನೀರು ಬಳಸಿ ಬೆಳೆದ ತರಕಾರಿ ಹೆಚ್ಚಾಗಿ ಮಾರುಕಟ್ಟೆಗೆ ಬರಲಾರಂಭಿಸಿದೆ. ಇದರಿಂದಾಗಿ ತರಕಾರಿ ದರ ತುಸು ಇಳಿಕೆ ಕಂಡಿದೆ’ ಎಂದು ಕೆ.ಆರ್‌.ಮಾರ್ಕೆಟ್‌ನ ತರಕಾರಿ ವ್ಯಾಪಾರಿ ಎಂ.ಎಸ್‌.ರಾಜೇಶ್ವರಿ ತಿಳಿಸಿದರು.

‘ನಗರದ ಮಾರುಕಟ್ಟೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳು ಮಾತ್ರವಲ್ಲದೇ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಭಾಗದಿಂದಲೂ ಸೊಪ್ಪು ಹಾಗೂ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಹೀಗಾಗಿ ದರ ಕೊಂಚ ಕಡಿಮೆಯಾಗಿದೆ’ ಎಂದು ಸೊಪ್ಪಿನ ವ್ಯಾಪಾರಿ ಇಸ್ಮಾಯಿಲ್ ತಿಳಿಸಿದರು.

ಕಳೆದ ವಾರ ಹಸಿಮೆಣಸಿನಕಾಯಿ ಹಾಗೂ ಬೀನ್ಸ್‌ ಕೆ.ಜಿ.ಗೆ ₹ 100, ಸವತೆಕಾಯಿ ₹ 50, ಕ್ಯಾರೆಟ್‌, ಬೆಂಡೆಕಾಯಿ, ಚವಳೆಕಾಯಿ, ಟೊಮೆಟೊ, ಮೂಲಂಗಿ ₹ 80, ಆಲೂಗಡ್ಡೆ ₹ 40 ದರ ಇತ್ತು. ಇದೀಗ ಅರ್ಧದಷ್ಟು ದರ ಕಡಿಮೆಯಾಗಿದೆ. 

ಸೊಪ್ಪಿನ ದರದಲ್ಲೂ ಇಳಿಕೆ:

ಕಳೆದ ವಾರ ಹೆಚ್ಚಿನ ಸೊಪ್ಪುಗಳ ದರ ಸಿವುಡಿಗೆ ₹ 7ರಿಂದ ₹ 10 ಇತ್ತು. ಈ ವಾರ ಹೆಚ್ಚಿನ ಸೊಪ್ಪುಗಳ ದರ ₹ 3ರಿಂದ ₹ 6ಕ್ಕೆ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಶನಿವಾರ ಸಿವುಡು ಕೊತ್ತಂಬರಿ ₹ 3, ಮೆಂತ್ಯೆ ₹6, ಪಾಲಕ್‌ ₹ 3, ಸಬ್ಬಸಗಿ ₹ 3 ದರ ಇತ್ತು.

‘ಕೆಲ ದಿನಗಳ ಹಿಂದೆ ಸೊಪ್ಪು ಹಾಗೂ ತರಕಾರಿ ದರ ತೀವ್ರ ಏರಿಕೆಯಾಗಿದ್ದರಿಂದ ಹೋಟೆಲ್‌ ಉದ್ಯಮ ನಡೆಸುವುದೇ ಕಷ್ಟಕರವಾಗಿತ್ತು. ತರಕಾರಿ ದುಬಾರಿ ಎಂಬ ಕಾರಣಕ್ಕೆ ಊಟದ ದರ ಹೆಚ್ಚಿಸಲೂ ಆಗುತ್ತಿರಲಿಲ್ಲ. ಇದೀಗ ತರಕಾರಿ ದರ ತುಸು ಇಳಿಕೆ ಆಗಿರುವುದು ಸಮಾಧಾನ ತಂದಿದೆ’ ಎಂದು ಹೋಟೆಲ್‌ ಮಾಲೀಕ ರವಿ ಬಾಣಾವರ ತಿಳಿಸಿದರು.

ಚಿಕನ್‌ ದರ ಕುಸಿತ ₹ 300 ರ ಗಡಿ ದಾಟಿದ್ದ ಚಿಕನ್‌ ದರ 1 ವಾರದಿಂದ ಕಡಿಮೆ ಆಗಿದೆ. ಸದ್ಯ ವಿತ್‌ ಸ್ಕಿನ್‌ ಕೆ.ಜಿ.ಗೆ ₹ 230 ರಿಂದ ₹ 240 ಹಾಗೂ ಸ್ಕಿನ್‌ಲೆಸ್‌ ₹ 260 ರಿಂದ ₹ 270 ಇದೆ. ಈ ಮುಂಚೆ ವಿತ್‌ಸ್ಕಿನ್‌ ₹ 270 ಹಾಗೂ ಸ್ಕಿನ್‌ ಲೆಸ್‌ ₹ 300 ದರ ಇತ್ತು. 2 ತಿಂಗಳಿಗೂ ಹೆಚ್ಚು ಕಾಲ ಇದೇ ದರ ಮುಂದುವರಿದಿತ್ತು. ‘ಬೇಸಿಗೆಯಲ್ಲಿ ತೀವ್ರ ಬಿಸಿಲಿನ ಕಾರಣಕ್ಕೆ ಕೋಳಿ ಸಾಕಾಣಿಕೆ ಪ್ರಮಾಣ ಕಡಿಮೆಯಾಗಿತ್ತು. ಬಿಸಿಲಿನಿಂದಾಗಿ ಕೋಳಿಗಳ ಸಾವು ಸಂಭವಿಸುವ ಕಾರಣಕ್ಕೆ ಬೇಸಿಗೆಯಲ್ಲಿ ಕೋಳಿ ಸಾಕಣೆಗೆ ಬಹುತೇಕರು ಹಿಂದೇಟು ಹಾಕುತ್ತಾರೆ. ಇದೀಗ ಮಳೆಗಾಲ ಆಗಿರುವುದರಿಂದ ಕೋಳಿ ಸಾಕಣೆಗೆ ಉತ್ತಮ ವಾತಾವರಣ ಇದೆ. ಇದೇ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿ ಸಾಕಣೆ ಮಾಡಲಾಗುತ್ತಿದೆ. ಹೀಗಾಗಿ ಚಿಕನ್‌ ದರ ಹೆಚ್ಚಾಗಿದೆ’ ಎಂದು ಬಿಐಇಟಿ ಕಾಲೇಜು ರಸ್ತೆಯ ಖಾನ್ ಚಿಕನ್ ಸೆಂಟರ್‌ನ ಮಾಲೀಕ ತೌಸಿಫ್‌ ಖಾನ್‌ ತಿಳಿಸಿದರು.

ಕೆ.ಆರ್‌.ಮಾರುಕಟ್ಟೆ ದಾವಣಗೆರೆ (ಜೂನ್ 29) ತರಕಾರಿ;ದರ (ಕೆ.ಜಿ.₹ ಗಳಲ್ಲಿ) ಹಸಿಮೆಣಸಿನಕಾಯಿ;50–60 ಹೊಟ್ಟೆಮೆಣಸಿನಕಾಯಿ;100 ಆಲೂಗಡ್ಡೆ;40 ಟೊಮೆಟೊ;50 ಗಜ್ಜರಿ;30–40 ಈರುಳ್ಳಿ;30 ಬೆಂಡೆಕಾಯಿ;40 ಸವತೆಕಾಯಿ;20 ಬದನೆಕಾಯಿ;40–50 ಚವಳೆಕಾಯಿ;50 ಬೀಟ್‌ರೂಟ್;40 ಮೂಲಂಗಿ;40 ಬೀನ್ಸ್‌;100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT