ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶಗಳಿಗೆ ಬಟ್ಟೆಗಳ ರಫ್ತು | ಹೊಲಿಗೆ ಕಲಿತವರಿಗೆ ವಿಪುಲ ಅವಕಾಶ: ಸಚಿವ ಜೋಶಿ

Published : 7 ಜುಲೈ 2024, 8:56 IST
Last Updated : 7 ಜುಲೈ 2024, 8:56 IST
ಫಾಲೋ ಮಾಡಿ
Comments

ಹುಬ್ಬಳ್ಳಿ: 'ದೊಡ್ಡ ಪ್ರಮಾಣದಲ್ಲಿ ಭಾರತ ಬಟ್ಟೆಗಳನ್ನು ಉತ್ಪಾದನೆ ಮಾಡಿ, ವಿದೇಶಗಳಿಗೆ ರಪ್ತು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಹೊಲಿಗೆ ಕಲಿತ ಮಹಿಳೆಯರಿಗೆ ದೊಡ್ಡ ಅವಕಾಶ ಸಿಗಲಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಕುಸಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಭಾನುವಾರ ಗ್ರಾಮ ವಿಕಾಸ ಫೌಂಡೇಷನ್ ಹಾಗೂ ಇತರ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ ಹಮ್ಮಿಕೊಂಡಿದ್ದ 'ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ'ದಲ್ಲಿ ಅವರು ಮಾತನಾಡಿದರು.

'ಬಟ್ಟೆ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಎರಡು-ಮೂರನೇ ಸ್ಥಾನಕ್ಕೆ ಬರಲಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಯಿಂದ ಗಾರ್ಮೆಂಟ್‌ನಲ್ಲಿ ದೊಡ್ಡ ಅವಕಾಶಗಳು ತೆರೆದುಕೊಳ್ಳುತ್ತಿವೆ. ಹೊಲಿಗೆಗೆ ಬೇಕಾದ ಮೂಲ ತರಬೇತಿ ನಾವು ನೀಡುತ್ತೇವೆ. ಹೆಚ್ಚಿನ ತರಬೇತಿ ನೀವು ಪಡೆಯಬೇಕು' ಎಂದು ಹೇಳಿದರು.

'ಧಾರವಾಡಕ್ಕೆ ಎರಡು, ಮೂರು ಗಾರ್ಮೆಂಟ್ ಕಂಪನಿಗಳು ಬರಲು ಉತ್ಸಕತೆ ತೋರಿವೆ. ನೀವು ಸಹ ಗಾರ್ಮೆಂಟ್ ಕಂಪನಿ ಮಾಲೀಕರಾಗಲು ಮುಂದಾಗಬೇಕು. ಅದಕ್ಕೆ ಪರಿಶ್ರಮ ಮತ್ತು ಕೌಶಲ ಅಗತ್ಯ. ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಪಡೆದು, ನೀವೇ ಉದ್ಯೋಗದಾತರಾಗಬೇಕು‌' ಎಂದರು.

'ಅನೇಕ ವರ್ಷಗಳ ಹಿಂದೆ ಮಹಿಳೆಯರು ಉದ್ಯೋಗ ನೀಡುವಂತೆ ವಿನಂತಿಸಿದ್ದರು. ಅವರಲ್ಲಿ ಶಿಕ್ಷಣ ಹಾಗೂ ಕೌಶಲದ ಕೊರತೆ ಎದ್ದು ಕಂಡಿತ್ತು. ಗ್ರಾಮ ವಿಕಾಸ ಫೌಂಡೇಷನ್ ಅಡಿಯಲ್ಲಿ ೧೪ ಕೇಂದ್ರಗಳಲ್ಲಿ ೧೧,೦೪೦ ಮಂದಿಗೆ ತರಬೇತಿ ನೀಡಲಾಗಿದೆ. ಅವರಲ್ಲಿ ೩,೬೯೫ ಮಂದಿ ವಿವಿಧೆಡೆ ಉದ್ಯೋಗ ಪಡೆದಿದ್ದಾರೆ. ೩,೭೦೦ ಮಂದಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಗಿದೆ' ಎಂದರು.

ಶಾಸಕ ಮಹೇಶ ಟೆಂಗಿನಕಾಯಿ, 'ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಮಹಿಳೆಯರು ಇದೀಗ ಸ್ವಾವಲಂಬಿಯಾಗಿ ಬದುಕು ನಡೆಸುತ್ತಿದ್ದಾರೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮೊದಲ ಹಂತದಲ್ಲಿ ೨೦೦೪ ಹೊಲಿಗೆ ಯಂತ್ರ ವಿತರಿಸಿ, ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದ್ದಾರೆ' ಎಂದರು.

'ಕಂಪ್ಯೂಟರ್ ಕಲಿಕೆಗೆ ಒತ್ತು ನೀಡಬೇಕು ಎನ್ನುವ ಬೇಡಿಕೆ ಕೇಳಿಬರುತ್ತಿದೆ. ಸಚಿವರ ಜೊತೆ ಸೇರಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಮಹಿಳೆಯರಿಗೆ ಕಂಪ್ಯೂಟರ್ ಕಲಿಕೆ ತರಬೇತಿ ನೀಡಲು ಯೋಜನೆ ರೂಪಿಸಲಾಗುವುದು' ಎಂದು ಹೇಳಿದರು‌

ಜ್ಯೋತಿ ಜೋಶಿ, ಜಗದೀಶ ನಾಯಕ ಪಾಲ್ಗೊಂಡಿದ್ದರು.

ಸಿಎಸ್‌ಆರ್ ನಿಧಿಯಿಂದ ಯಂತ್ರ ವಿತರಣೆ: ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಫೌಂಡೇಷನ್, ಜೆಕೆ ಸಿಮೆಂಟ್, ರ್ಯಾಮ್ಕೋ ಸಿಮೆಂಟ್, ಓರಿಯಂಟ್ ಸಿಮೆಂಟ್, ಮೈ ಹೋಮ್ ಗ್ರುಪ್, ಎನ್ಎಲ್‌ಸಿ ಇಂಡಿಯಾ ಲಿ. ಕಂಪನಿಯ ಸಿಎಸ್‌ಆರ್ ನಿಧಿಯಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಉಚಿತವಾಗಿ ಹೊಲಿಗೆ ತರಬೇತಿ ಪಡೆದು, ಹೊಲಿಗೆ ಯಂತ್ರ ಪಡೆದ ಮಹಿಳೆಯರು ಅನಿಸಿಕೆ ಹಂಚಿಕೊಂಡರು. ತರಬೇತಿ ಅವಧಿಯಲ್ಲಿ ಮಹಿಳೆಯರು ಸಿದ್ಧಪಡಿಸಿದ ಅಂಗನವಾಡಿ ಮಕ್ಕಳ ಬಟ್ಟೆಯನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT