ಭಾದ್ರಪದ ಮಾಸ ಶುಕ್ಲಪಕ್ಷದ ಚೌತಿಯಂದು ಬರುವ ಗಣನಾಯಕ ಹರುಷದ ಹೊನಲನ್ನೇ ಹೊತ್ತು ತರುತ್ತಾನೆ. ಸಮುದಾಯವನ್ನು ಒಗ್ಗೂಡಿಸುವ, ಕುಟುಂಬದ ಸದಸ್ಯರನ್ನು ಒಂದೆಡೆ ಸೇರಿಸುವ ಈತ, ಬದುಕಿನ ಜಂಜಾಟ– ದುಗುಡಗಳನ್ನೆಲ್ಲ ಕ್ಷಣಕಾಲ ಮರೆಸಿ, ನವೋಲ್ಲಾಸ ಚಿಮ್ಮಿಸುತ್ತಾನೆ. ‘ಹೂಬಳ್ಳಿಯ ಗಣೇಶೋತ್ಸವ’ ಸಡಗರವನ್ನು ಹಣ್ತುಂಬಿಕೊಳ್ಳಲು ಹುಬ್ಬಳ್ಳಿ– ಧಾರವಾಡ ನಗರ, ಸುತ್ತಲಿನ ಗ್ರಾಮಗಳು, ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದಲೂ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಮರಾಠಗಲ್ಲಿಯಲ್ಲಿ ಪ್ರತಿಷ್ಠಾಪಿಸಿರುವ 23 ಅಡಿ ಎತ್ತರದ ವಿಷ್ಣು ಅವತಾರದ ‘ಹುಬ್ಬಳ್ಳಿ ಚಾ ಮಹಾರಾಜಾ’ ಹಾಗೂ ದಾಜೀಬಾನ ಪೇಟೆಯಲ್ಲಿ ಸ್ಥಾಪಿಸಿರುವ 21 ಅಡಿ ಎತ್ತರದ ‘ಹುಬ್ಬಳ್ಳಿ ಕಾ ರಾಜಾ’ ಗಣಪನ ಮೂರ್ತಿಗಳು ಪ್ರತಿವರ್ಷದಂತೆ ಈ ವರ್ಷವೂ ಜನಾಕರ್ಷಣೆಯ ಕೇಂದ್ರಗಳಾಗಿವೆ. ಸ್ಟೇಷನ್ ರಸ್ತೆಯ ಗಣೇಶೋತ್ಸವ ಯುವಕ ಮಂಡಳ ‘ಸತ್ಯ ಹರಿಶ್ಚಂದ್ರ’ ಕಥೆಯ ರೂಪಕವನ್ನು ಪ್ರದರ್ಶಿಸುತ್ತಿದ್ದು, ಭಕ್ತರ ಮನಸೂರೆಗೊಳ್ಳುತ್ತಿದೆ. ಬಾರ್ದಾನ್ ಗಲ್ಲಿಯಲ್ಲಿ ‘ದಕ್ಷರಾಜ’ ರೂಪಕ ಹಾಗೂ ಕಂಚಗಾರ ಗಲ್ಲಿ ಹಿರೇಪೇಟ್–ಬೂಸ್‌ಪೇಟ್‌ನಲ್ಲಿ ಪ್ರತಿಷ್ಠಾಪಿಸಿರುವ ಯೋಧ ಅಭಿನಂದನ್‌ಅವರನ್ನು ವಾಘಾ ಬಾರ್ಡರ್‌ನಲ್ಲಿ ಬರಮಾಡಿಕೊಂಡ ರೂಪಕಗಳು ಜನಮನ ಸೆಳೆಯುತ್ತಿವೆ.

ಜನತಾಬಜಾರ್ ಸೂಪರ್ ಮಾರ್ಕೆಟ್‌ನಲ್ಲಿ ಪ್ರತಿಷ್ಠಾಪಿಸಿರುವ ಏಳಡಿ ಎತ್ತರದ ಪರಿಸರಸ್ನೇಹಿ ಮಣ್ಣಿನ ಗಣಪ, ವೇದಾಧ್ಯಯನದಲ್ಲಿ ತೊಡಗಿರುವ ಗೌಳಿ ಗಲ್ಲಿ ಕಾ ರಾಜಾ, ಅಂಚಟಗೇರಿ ಓಣಿಯ ಪ್ರಸನ್ನ ಸಿಂಹಾಸನಾರೂಢ, ತುಳಜಾಭವಾನಿ ದೇವಸ್ಥಾನದಲ್ಲಿರುವ ಭೂರಮೆ ರಕ್ಷಿಸಿದ ವಿಷ್ಣುರೂಪಿ, ಬಾಬಾಸಾನ ಗಲ್ಲಿಯ ಮಹಾರಾಜಾ, ಕುಬಸದಗಲ್ಲಿ ಕಮಡೊಳ್ಳಿ ಓಣಿಯ ಸಿಂಹರೂಪಿ ಸಿಂಹಾಸನದ ವಿರಾಜಿತ, ಜವಳಿ ಸಾಲಿನಲ್ಲಿರುವ ಗಜಾಸುರ ಸಂಹಾರಿ, 121 ಕೆ.ಜಿ ಬೆಳ್ಳಿಯಿಂದ ಸರಾಫಗಟ್ಟಿಯ ರಜತ ರಾಜ, ಶೀಲವಂತರ ಓಣಿಯಲ್ಲಿ ಮೈಸೂರಿನ ಕೃಷ್ಣರಾಜ ಸರ್ಕಲ್ ಮಾದರಿಯಲ್ಲಿ ಸ್ಥಾಪಿಸಿರುವ ಬೆಳ್ಳಿ ಗಣೇಶ, ಸಿಂಪಿಗಲ್ಲಿ ಅಕ್ಕಿಹೊಂಡದಲ್ಲಿ ‘ಗಜರಾಜ ರಕ್ಷಣೆ’ ರೂಪಕದ ಹಿನ್ನೆಲೆಯಲ್ಲಿ ಸ್ಥಾಪಿಸಿದ ರಜತ ಗಣೇಶ, ದೇಸಾಯಿ ಓಣಿ ಎರಡನೇ ಕ್ರಾಸ್‌ನಲ್ಲಿ ಕಮಲಜನಿಗೆ (ಬ್ರಹ್ಮ) ಜನ್ಮವಿತ್ತ ವಿಷ್ಣುರೂಪಿ, ಡೋರ್‌ಗಲ್ಲಿಯ ರಿದ್ಧಿ–ಸಿದ್ಧಿಯರ ಹೊತ್ತ ಗಣಪ, ದೇಸಾಯಿಗಲ್ಲಿಯ ಗಂಗೆಯನ್ನು ತಲೆ ಮೇಲೆ ಧುಮ್ಮಿಕ್ಕಿಸಿಕೊಂಡ ಶಿವರೂಪಿ, ಕಾಳಮ್ಮನ ಅಗಸಿಯಲ್ಲಿರುವ ಮೋದಕಹಸ್ತ, ಡಾಕಪ್ಪ ಸರ್ಕಲ್‌ನಲ್ಲಿರುವ ಮಣ್ಣಿನ ಗಣಪ, ದೀವಟೆಗಲ್ಲಿ ಸಿದ್ಧವೀರಪ್ಪನ ಪೇಟೆಯ ಅಂಕುಶಾರೂಢ, ಕಮರಿಪೇಟೆಯ ಶಿವ ಸಿಂಹಾಸನಾರೂಢ, ಮೂರುಸಾವಿರ ಮಠದ ದ್ವಾರದಲ್ಲಿ ಸ್ಥಾಪಿತ ಮಯೂರಾಸನರೂಢ, ತಾಡಪತ್ರಿ ಓಣಿಯ ಅಭಯ ಹಸ್ತಧಾರಿ, ಶಿವಾಜಿ ಚೌಕ್‌ನ ಹುಬ್ಬಳ್ಳಿ ಚಾ ಚಕ್ರವರ್ತಿ, ಬಂಬೂಬಜಾರ್‌ನ ಹಂಸ ಸಿಂಹಾಸನಾರೂಢ, ಮೇದಾರ ಓಣಿಯ ಪ್ರಸನ್ನ ಗಜವದನ, ಕಲಾದಗಿ ಓಣಿಯ ಪುಷ್ಪ ಸಿಂಹಾಸನಾರೂಢ, ದುರ್ಗದ ಬೈಲಿನ ರಿದ್ಧಿ–ಸಿದ್ಧಿ ಸಹಿತ ದಂತ ಸಿಂಹಾಸನಾರೂಢ, ರಾಧಾಕೃಷ್ಣ ಗಲ್ಲಿಯ ಢೋಲ್‌ಧಾರಿ ಕೃಷ್ಣರೂಪಿ, ವಾಳ್ವೇಕರ್ ಗಲ್ಲಿಯ ಮಾಲಾಧಾರಿ, ವೀರಾಪುರ ರೋಡ್ ಪಾಗಾದಿ ಗಲ್ಲಿಯ ಉಗ್ರನರಸಿಂಹಾರೂಢ, ಅಗಸರ ಓಣಿಯ ಗದಾಧಾರಿ, ವೀರಾಪುರ ಮುಖ್ಯ ರಸ್ತೆಯಲ್ಲಿ ಸುವರ್ಣಮಹೋತ್ಸವ ಸಂಭ್ರಮದಲ್ಲಿರುವ ಸಿಂಹಾಸನಧಾರಿ, ಮಹಾಬಳೇಶ್ವರ ಗುಡಿ ಓಣಿಯ ಮಯೂರಾಸನಧಾರಿ, ಗೌಡ್ರ ಓಣಿಯಲ್ಲಿರುವ ಶಿವಸುತ, ಮೈಲಾರಲಿಂಗೇಶ್ವರ ಗುಡಿ ಓಣಿಯಲ್ಲಿರುವ ಪ್ರಧಾನಿ ಮೋದಿ ಮೇಲೆ ಕುಳಿತ ಗಣಪ, ಸೆಟ್ಲಮೆಂಟ್‌ನ ಮಾಖನ್ ಚೋರ, ಘಂಟಿಕೇರಿ ಓಣಿಯ ಗಜಾಸುರ ಸಿಂಹಾಸನಾರೂಢ, ರುದ್ರಾಕ್ಷಿಮಠ ಗಂಗಾಧರ ಓಣಿಯ ಕರಕಿ ಪ್ರಿಯ, ಮಂಗಳವಾರ ಪೇಟ್‌ನ ಕಮಲಾಸನಧಾರಿ, ಜೈಭೀಮ್ ನಗರದ ಮೂಷಿಕವಾಹನ, ಹಬೀಬ ಲ್ಯಾಂಡ್– ಮಂಟೂರ್ ರೋಡ್ ಹಾನಗಲ್ ಚಾಳ್‌ನ ಬಾಹುಬಲಿ ರೂಪಿ ಇಲಿಯ ಮೇಲಿನ ಗಣಪ, ಬಾಕಳೆ ಗಲ್ಲಿಯ ಅಭಯಹಸ್ತ– ಛತ್ರಧಾರಿ, ವಡ್ಡರ ಓಣಿಯ ವಿರಾಜಮಾನ, ಗಣೇಶಪೇಟೆ ಕ್ರಾಸ್‌ನ ತಿರುಪತಿ ವೆಂಕಟೇಶ್ವರ ರೂಪಿ, ಗಣೇಶಪೇಟೆ ಮುಖ್ಯರಸ್ತೆಯ ಪದ್ಮ ಸಿಂಹಾಸನಾರೂಢ, ಮುಕ್ಕೇರಿ ಓಣಿಯ ವ್ಯಾಘ್ರ ಸಿಂಹಾಸನಾರೂಢ, ಕರೆಮ್ಮಗುಡಿಯ ಸಂಗೊಳ್ಳಿ ರಾಯಣ್ಣಾರೂಢ, ಮಟ್ಟಿ ಓಣಿಯ ಕಾಳಿಂಗಮರ್ದನ, ಕುಂಬಾರ ಓಣಿಯ ಮೂಷಿಕಾಸುರ ಮರ್ದನ, ರಾಜೀವನಗರದ ‘ವೃಕ್ಷ ವೃದ್ಧಿ’, ರಾಜಧಾನಿ ಕಾಲೊನಿಯ ಬ್ರಹ್ಮಾಂಡ ಸ್ವರೂಪಿ, ಉಣಕಲ್‌ನ ಸಿದ್ಧಕಲ್ಯಾಣ ನಗರದ ಇಷ್ಟಲಿಂಗ ಸ್ವರೂಪಿ, ವಿದ್ಯಾನಗರದಲ್ಲಿ ಪ್ರವಾಹ ಸಂತ್ರಸ್ತರ ಸಂರಕ್ಷಕ ಪುಷ್ಪಕ ವಿಮಾನರೂಢ... ಹೀಗೆ ನಗರದ ವಿವಿಧ ಭಾಗಗಳಲ್ಲಿ ಬಹುರೂಪಿಯಾಗಿ ಪ್ರತಿಷ್ಠಾಪನೆಗೊಂಡಿರುವ ಗಣನಾಯಕ ಹಬ್ಬದ ಸಂಭ್ರಮ ಹೆಚ್ಚಿಸಿದ್ದಾನೆ.

ಜಿಲ್ಲಾಡಳಿತದ ಸೂಚನೆಯಂತೆ ನಗರದ ಬಹುತೇಕ ಕಡೆ ಪಿಒಪಿ ಸಂಪ್ರದಾಯವನ್ನು ಕೈಬಿಟ್ಟಿದ್ದು– ಬಿದಿರು, ಪೇಪರ್, ಸುಣ್ಣದ ಪುಡಿ, ದಾರ ಹಾಗೂ ಮಣ್ಣಿನಿಂದ ತಯಾರಿಸಿದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಧಿಕೃತ ಮಾಹಿತಿಯಂತೆ ಹುಬ್ಬಳ್ಳಿ–ಧಾರವಾಡ ನಗರದಲ್ಲಿ 460 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಪರವಾನಗಿ ಪಡೆಯದ ‘ಗಲ್ಲಿ ಗಣಪನ’ ಲೆಕ್ಕ ಸೇರಿಸಿದರೆ ಈ ಸಂಖ್ಯೆ 600 ಮೀರುತ್ತದೆ!

ರಾಜಾ–ಮಹಾರಾಜರ ವಿಶೇಷ

ಮರಾಠಾ ಗಲ್ಲಿಯ ‘ಹುಬ್ಬಳ್ಳಿ ಚಾ ಮಹಾರಾಜಾ’ ಮೂರ್ತಿ ಭರ್ತಿ 4 ಟನ್ ತೂಕದ್ದಾಗಿದ್ದು, ಕೈಕಾಲುಗಳಿಗೆ ಬೆಳ್ಳಿ ಕವಚ ಧಾರಣ ಮಾಡಲಾಗಿದೆ. ಬಂಗಾರದ ದಂತಗಳನ್ನು ಅಳವಡಿಸಿದ್ದು, 3 ಕೆ.ಜಿ. ರತ್ನಖಚಿತ ತೂಕದ ಬಂಗಾರದ ನಕ್ಲೆಸ್ ತೊಡಿಸಲಾಗಿದೆ. ಅಲ್ಲದೇ ಕೈಗಳ ಪ್ರತಿ ಬೆರಳುಗಳಿಗೆ ನವರತ್ನಾಧರಿತ ಉಂಗುರುಗಳನ್ನು ಹಾಕಲಾಗಿದೆ. ನೇರವಾಗಿ ಗಣೇಶ ಮೂರ್ತಿಯ ಪಾದ ಸ್ಪರ್ಶಿಸಿ ನಮನ ಸಲ್ಲಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ದಾಜಿಬಾನ್ ಪೇಟೆಯ ‘ಹುಬ್ಬಳ್ಳಿ ಕಾ ರಾಜಾ’ ಮೂರ್ತಿ ಭರ್ತಿ 3.8 ಟನ್ ತೂಕದ್ದಾಗಿದ್ದು, ಬೆಳ್ಳಿಯ ಪಾದುಕೆ, ಹಸ್ತ, ಉಂಗುರ, 8 ಕೆ.ಜಿ ತೂಕದ ನಕ್ಲೆಸ್, 5 ಕೆ.ಜಿ ತೂಕದ ನಡಪಟ್ಟಿಗಳಿಂದ ಅಲಂಕೃತಗೊಂಡಿದೆ. ಇಲ್ಲಿಯೂ ಕೂಡ ಪ್ರತಿ ದಿನ ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಕಣ್ಣು ಕೋರೈಸುವ ಅಲಂಕಾರ

ಗಲ್ಲಿ–ಗಲ್ಲಿಯಲ್ಲೂ ಹಾಕಿರುವ ಆಕರ್ಷಕ ಪೆಂಡಾಲ್, ಜಗಮಗಿಸುವ ವಿದ್ಯುತ್ ದೀಪಗಳು, ವರ್ಣರಂಜಿತ ಫೋಕಸ್ ಲೈಟ್‌ಗಳು, ಮುತ್ತಿನ ಹಾರ, ಬಲೂನ್, ಮಿಂಚಿನ ಹಾಳೆ, ಮುತ್ತಿನ ಚೆಂಡು ಹಾಗೂ ಪ್ಲಾಸ್ಟಿಕ್ ಮಾಲೆಗಳನ್ನು ಒಳಗೊಂಡ ವೈವಿಧ್ಯಮಯ ಅಲಂಕಾರ, ರೂಪಕಗಳು, ಆಕರ್ಷಕ ಗಣೇಶ ಮೂರ್ತಿಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿವೆ. ದುರ್ಗದಬೈಲ್, ಜನತಾ ಬಜಾರ್, ಸೂಪರ್ ಮಾರ್ಕೆಟ್, ದಾಜಿಬಾನ್ ಪೇಟ, ಮರಾಠಾ ಗಲ್ಲಿ, ಕೊಪ್ಪಿಕರ ರಸ್ತೆ, ಸ್ಟೇಷನ್ ರಸ್ತೆಗಳಲ್ಲಿ ಸಂಜೆ ಆಗುತ್ತಿದ್ದಂತೆ ಗಣೇಶ ದರ್ಶನಕ್ಕೆ ಬರುವ ಭಕ್ತರಿಂದ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಟಿ ಜಿಟಿ ಮಳೆಯ ನಡುವೆಯೂ ಜನರು ವಿಘ್ನನಿವಾರಕನ ದರ್ಶನಕ್ಕೆ ಮುಗಿಬೀಳುತ್ತಿದ್ದಾರೆ. ‘ಗಣಪತಿ ಬಪ್ಪಾ ಮೋರಯಾ– ಮಂಗಲ ಮೂರ್ತಿ ಮೋರಯಾ...’ ಎಂಬ ಜಯಘೋಷ ಎಲ್ಲೆಡೆ ಕೇಳಿಬರುತ್ತಿದೆ.

ಸೌಹಾರ್ದ ಸಂಭ್ರಮ

ಹುಬ್ಬಳ್ಳಿಯ ಬಮ್ಮಾಪುರ ಓಣಿಯಲ್ಲಿ ಒಂದೇ ವೇದಿಕೆಯಲ್ಲಿ ಗಣೇಶ ಹಾಗೂ ಪಂಜಾವನ್ನು ಹಿಂದೂ–ಮುಸ್ಲಿಮರು ಪ್ರತಿಷ್ಠಾಪಿಸಿ, ಸೌಹಾರ್ದದಿಂದ ಪೂಜಿಸುತ್ತಿದ್ದಾರೆ. ಸತತ ಮೂರು ವರ್ಷಗಳಿಂದ ಎರಡೂ ಧರ್ಮೀಯರು ಒಂದುಗೂಡಿ ಭಾವೈಕ್ಯದಿಂದ ಉತ್ಸವ ಆಚರಿಸುವುದು ವಿಶೇಷವಾಗಿದೆ. ಇದೇ ರೀತಿ ದೇಸಾಯಿ ಓಣಿ, ಎರಡನೇ ಕ್ರಾಸ್‌ನಲ್ಲಿ ಗಣೇಶನ ಮಂಟಪದ ಸುತ್ತ ದರ್ಗಾ, ಮಸೀದಿಗಳಿದ್ದು ಮೊಹರಂ ಪಂಜಾಗಳನ್ನು ಸ್ಥಾಪಿಸಿ, ಸೌಹಾರ್ದ ಸಾಧಿಸಲಾಗಿದೆ.

ವ್ಯಾಪಾರಕ್ಕೂ ಗೌರಿಸುತ ಸಹಕಾರ

ಹುಬ್ಬಳ್ಳಿ ನಗರದಲ್ಲಿ ಪ್ರತಿವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಬರೋಬ್ಬರಿ ₹ 25 ಕೋಟಿಯಿಂದ ₹ 30 ಕೋಟಿ ವಹಿವಾಟು ನಡೆಯುತ್ತದೆ. ವರ್ಷಪೂರ್ತಿ ಗಣೇಶ ಮೂರ್ತಿ ತಯಾರಿಸುವುದನ್ನೇ ಕೆಲವು ಕುಟುಂಬಗಳು ಉದ್ಯೋಗವನ್ನಾಗಿಸಿಕೊಂಡಿವೆ. ಹಲವಾರು ವರ್ಷಗಳಿಂದ ಇದೇ ಕಾಯಕದಲ್ಲಿ ತೊಡಗಿಸಿಕೊಂಡಿವೆ. ಇನ್ನು ಕೆಲವು ಕುಟುಂಬಗಳವರು ನಾಲ್ಕಾರು ತಿಂಗಳು ಮಾತ್ರ ಮೂರ್ತಿ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಉಳಿದಂತೆ ಬೇರೆ ಕಡೆ ಕೆಲಸ ಮಾಡುತ್ತಾರೆ. ಈ ಕುಟುಂಬಗಳಿಗೆಲ್ಲ ಮೂರ್ತಿ ತಯಾರಿಕೆಯಿಂದಲೇ ಹೆಚ್ಚಿನ ಆದಾಯ ಬರುತ್ತದೆ. ಗಣೇಶ ಮೂರ್ತಿ ತಯಾರಕರು ಅಲ್ಲದೆ ಮೂರ್ತಿ ಮಾರಾಟಗಾರರಿಗೂ ಉದ್ಯೋಗ, ಲಾಭ ಲಭಿಸುತ್ತದೆ. ಇವರ ಪೈಕಿ ಕೆಲವರು ಸ್ಥಳೀಯ ಗಣೇಶ ಮೂರ್ತಿ ತಯಾರಕರಿಂದ ಮೂರ್ತಿಗಳನ್ನು ಕೊಂಡರೆ, ಇನ್ನೂ ಕೆಲವರು ಕೊಲ್ಲಾಪುರ, ಪುಣೆ ನಗರಗಳಿಂದ ತಂದು ಮಾರಾಟ ಮಾಡುತ್ತಾರೆ. ಕೊಲ್ಲಾಪುರ, ಪುಣೆಯಿಂದ ಗಣೇಶ ಮೂರ್ತಿಗಳನ್ನು ತರುವವರು ಅವುಗಳಿಗೆ ಇಲ್ಲಿಯೇ ಬಣ್ಣ ಬಳಿಸುತ್ತಾರೆ. ಹಾಗಾಗಿ, ಬಣ್ಣ ಬಳಿಯುವ ಇಲ್ಲಿನ ಕಲಾವಿದರಿಗೂ ಕೆಲಸ ಸಿಗುತ್ತದೆ. ಗಣೇಶ ಮೂರ್ತಿ ತಯಾರಿಸಲೆಂದೇ ಹುಬ್ಬಳ್ಳಿಗೆ ಹೊರ ರಾಜ್ಯಗಳಿಂದ ಕಾರ್ಮಿಕರು ವಲಸೆ ಬರುವ ಪರಿಪಾಠವೂ ಇದೆ.

‘₹500ರಿಂದ ಲಕ್ಷಾಂತರ ಬೆಲೆ ಬಾಳುವ ಗಣೇಶ ಮೂರ್ತಿಗಳ ಮಾರಾಟವಾಗುತ್ತವೆ. ಮೂರ್ತಿಯ ಎತ್ತರ, ಆಕಾರದ ಮೇಲೆ ಬೆಲೆ ನಿರ್ಧಾರವಾಗುತ್ತದೆ. ದೊಡ್ಡ ಮೂರ್ತಿಗಳನ್ನು ಮುಂಗಡ ಹಣ ನೀಡಿ, ಆರ್ಡರ್ ಕೊಟ್ಟರೆ ಮಾತ್ರ ತಯಾರಿಸಲಾಗುತ್ತದೆ. ಈ ಬಾರಿ ಅತಿವೃಷ್ಟಿ ಹಾಗೂ ಮಾರುಕಟ್ಟೆಯ ಮಂದಗತಿಯಿಂದ ಪ್ರತಿ ವರ್ಷಕ್ಕೆ ಹೋಲಿಸಿದರೆ, ಸ್ವಲ್ಪ ಮಟ್ಟಿಗೆ ವ್ಯಾಪಾರ– ವ್ಯವಹಾರ ತಗ್ಗಿದೆ’ ಎಂದು ಕಲಾವಿದ ಗಣೇಶ ಪೋತದಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.