ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ | ಚಿನ್ನ, ಬೆಳ್ಳಿ ಸಾಗಣೆ: ತನಿಖೆ ಚುರುಕು

ಮತ್ತೊಬ್ಬ ಆರೋಪಿಗಾಗಿ ಶೋಧ: ಉತ್ತರ ವಲಯ ಐಜಿಪಿ ವಿಕಾಸಕುಮಾರ್‌ ಮಾಹಿತಿ
Published : 4 ಅಕ್ಟೋಬರ್ 2024, 14:08 IST
Last Updated : 4 ಅಕ್ಟೋಬರ್ 2024, 14:08 IST
ಫಾಲೋ ಮಾಡಿ
Comments

ಧಾರವಾಡ: ‘ತಾಲ್ಲೂಕಿನ ನರೇಂದ್ರ ಕ್ರಾಸ್‌ನಲ್ಲಿ ಗುರುವಾರ ಖಾಸಗಿ ಬಸ್‌ನಲ್ಲಿ ದಾಖಲೆರಹಿತವಾಗಿ ಚಿನ್ನದ ಬಿಸ್ಕೆಟ್‌, ಆಭರಣ ಹಾಗೂ ಬೆಳ್ಳಿ ಗಟ್ಟಿ ಸಾಗಿಸುತ್ತಿದ್ದ ಪ್ರಕರಣದ ಕುರಿತು ತನಿಖೆ ಶುರುವಾಗಿದೆ. ಹುಬ್ಬಳ್ಳಿಯ ಭವರಸಿಂಗ್‌ ಚವ್ಹಾಣ ಎಂಬುವರನ್ನು ಬಂಧಿಸಲಾಗಿದೆ’ ಎಂದು ಉತ್ತರ ವಲಯ ಐಜಿಪಿ ವಿಕಾಸಕುಮಾರ್‌ ತಿಳಿಸಿದರು.

ಶುಕ್ರವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭವರಸಿಂಗ್‌ ಮುಂಬೈನಿಂದ ಹುಬ್ಬಳ್ಳಿಗೆ ಬಸ್‌ನಲ್ಲಿ ಮಾಲು ಸಾಗಿಸುವಾಗ ಸಿಕ್ಕಿಬಿದ್ದಿದ್ದ. ಸೂಟ್‌ಕೇಸ್‌ ಮತ್ತು ಬ್ಯಾಗ್‌ನಲ್ಲಿದ್ದ ಅಂದಾಜು ₹11 ಲಕ್ಷ ಮೌಲ್ಯದ 15 ಕೆ.ಜಿ. ಬೆಳ್ಳಿ ಗಟ್ಟಿ, ಅ‌ಂದಾಜು ₹86.6 ಲಕ್ಷ ಮೌಲ್ಯ 1.2 ಕೆ.ಜಿ ಚಿನ್ನದ ಹೊಸ ಆಭರಣ ಮತ್ತು ಬಿಸ್ಕೆಟ್‌ ವಶಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿಯ ನರಪತ್ತ ಸಿಂಗ್‌ ಬಾಲೋ‌ಥ ಎಂಬಾತನ ಸೂಚನೆಯಂತೆ ಆರೋಪಿಯು ಚಿನ್ನ, ಬೆಳ್ಳಿ ಸಾಗಣೆಯಲ್ಲಿ ತೊಡಗಿದ್ದನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ’ ಎಂದರು.

‘ಆರೋಪಿ ಭವರಸಿಂಗ್‌, ಕೊರಿಯರ್‌ ಸಂಸ್ಥೆಯ ಉದ್ಯೋಗಿ. ಈ ಚಿನ್ನ, ಬೆಳ್ಳಿ ಯಾರದ್ದು? ಎಲ್ಲಿಂದ ತಂದಿದ್ದು? ಎಂಬ ಕುರಿತು ವಿಚಾರಣೆ ನಡೆಯುತ್ತಿದೆ. ನರಪತ್ತ ಸಿಂಗ್‌ ಬಾಲೋ‌ಥನಿಗಾಗಿ ಶೋಧ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ರಸ್ತೆ ಅಪಘಾತ; ಶೇ 20ರಷ್ಟು ಇಳಿಕೆ: ‘ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಶೇ 20ರಷ್ಟು ಕಡಿಮೆಯಾಗಿದೆ. ಧಾರವಾಡ–ಹುಬ್ಬಳ್ಳಿ ಬೈಪಾಸ್‌ ಮಾರ್ಗ, ಹೆದ್ದಾರಿಯಲ್ಲೂ ಅಪಘಾತ ಪ್ರಮಾಣ ತಗ್ಗಿದೆ. ಸಂಚಾರ ನಿಯಮ ಪಾಲನೆ, ರಸ್ತೆ ಸುರಕ್ಷತಾ ಕ್ರಮಗಳು ಅರಿವು ಮೂಡಿಸಲಾಗುತ್ತಿದೆ’ ಎಂದರು.

‘ಮಾದಕ ಪದಾರ್ಥಗಳ ಬಳಕೆ ತಡೆಗೆ ಶಾಲಾ, ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ ವಿ.ಭರಮನಿ ಪಾಲ್ಗೊಂಡಿದ್ದರು. 

‘ಧಾನ್ಯ ತುಂಬಿದ್ದ ಚೀಲಗಳ ವಶ ’

‘ಅಣ್ಣಿಗೇರಿಯ ಉಗ್ರಾಣದಲ್ಲಿ ಧಾನ್ಯ ತುಂಬಿದ್ದ ಚೀಲಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರಾಣದ ಪ್ರಭಾರ ವ್ಯವಸ್ಥಾಪಕ ಆಕಾಸ ಮುಶಣ್ಣವರ ಮತ್ತು ಸಹೋದ್ಯೋಗಿ ಶಶಿಕುಮಾರ ಹಿರೇಮಠನನ್ನು ಬಂಧಿಸಲಾಗಿದೆ. ಇಬ್ಬರನ್ನೂ 10 ದಿನ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದ್ದು ತನಿಖೆ ಚುರುಕುಗೊಳಿಸಲಾಗಿದೆ’ ಎಂದು ವಿಕಾಸಕುಮಾರ್‌ ತಿಳಿಸಿದರು. ‘ಧಾನ್ಯ ತುಂಬಿದ್ದ1859 ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ನಕಲಿ ದಾಖಲಿ ಸೃಷ್ಟಿಸಿ ಅಣ್ಣಿಗೇರಿಯ ರಡ್ಡಿ ಬ್ಯಾಂಕ್‌ನಲ್ಲಿ ₹37 ಲಕ್ಷ ಹಾಗೂ ಗದಗದ ಸೆಂಟ್ರಲ್‌ ಬ್ಯಾಂಕ್‌ನಲ್ಲಿ ₹45 ಲಕ್ಷ ಸಾಲ ಪಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ’ ಎಂದರು. ‘ವ್ಯವಸ್ಥಿತವಾಗಿ ಸಂಚು ರೂಪಿಸಿ ವಂಚನೆ ಎಸಗಲಾಗಿದೆ. ಇದರ ಹಿಂದೆ ಹಲವರ ಕೈವಾಡ ಇರುವ ಶಂಕೆ ಇದೆ. ಪ್ರಮುಖ ಆರೋಪಿ ಯಾರೆಂದು ಪತ್ತೆ ಹಚ್ಚಲು ಹಾಗೂ ನಕಲಿ ದಾಖಲೆ ಸೃಷ್ಟಿ ಸಾಲ ಪಡೆದಿರುವುದರ ಸಂಬಂಧ ಸಮಗ್ರ ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT