ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಮಗಾರಿಗಳ ಬಿಲ್ ಬಾಕಿ ಹಿಂದಿನ ಬಿಜೆಪಿ ಸರ್ಕಾರದಲ್ಲಿನ ರಾಡಿ: ಜಗದೀಶ್ ಶೆಟ್ಟರ್

Published 12 ಆಗಸ್ಟ್ 2023, 14:12 IST
Last Updated 12 ಆಗಸ್ಟ್ 2023, 14:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಾಮಗಾರಿಗಳ ಬಿಲ್‌ ಬಾಕಿ ಇರುವುದು ಹಿಂದಿನ ಸರ್ಕಾರದ ರಾಡಿ. ಬೇಕಾಬಿಟ್ಟಿಯಾಗಿ ಕಾಮಗಾರಿಗಳಿಗೆ ಮಂಜೂರು ನೀಡಿದ್ದ ಬಿಜೆಪಿ ಸರ್ಕಾರ ಏಕೆ ಬಿಲ್‌ ಪಾವತಿಸಿರಲಿಲ್ಲ. ಈಗ ಅಧಿಕಾರಕ್ಕೆ ಬಂದು 2–3 ತಿಂಗಳಷ್ಟೆ ಆಗಿರುವ ಕಾಂಗ್ರೆಸ್‌ ವಿರುದ್ಧ ಆಪಾದನೆ ಮಾಡುತ್ತಿರುವುದರ ಹಿಂದೆ ದುರುದ್ದೇಶ ಹಾಗೂ ವೈಯಕ್ತಿಕ ಹಿತಾಸಕ್ತಿ ಅಡಗಿದೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಸರ್ಕಾರವು ಬೇಕಾಬಿಟ್ಟಿಯಾಗಿ ಕಾಮಗಾರಿಗಳಿಗೆ ಮಂಜೂರಾತಿ ನೀಡಿತ್ತು. ಇವುಗಳಲ್ಲಿ ಬಹಳಷ್ಟು ಕಾಮಗಾರಿಗಳಿಗೆ ಆರ್ಥಿಕ ಇಲಾಖೆಯ ಒಪ್ಪಿಗೆ ಕೂಡ ಇರಲಿಲ್ಲ. ಇವುಗಳ ಕೆಲಸ ಆಗಿದೆಯೋ, ಇಲ್ಲವೋ ಎನ್ನುವುದನ್ನು ತನಿಖೆ ಮಾಡಬೇಕಾಗಿದೆ. ಕಾಮಗಾರಿ ನಡೆದಿದ್ದರೆ ಬಿಲ್‌ ಪಾವತಿಸುವುದಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ’ ಎಂದು ಹೇಳಿದರು.  

ರಾಹುಲ್‌ ಜೊತೆ ಚರ್ಚೆ: 

ದೆಹಲಿಯಲ್ಲಿ ಇತ್ತೀಚೆಗೆ ರಾಜ್ಯ ಮುಖಂಡರ ಸಭೆಯನ್ನು ರಾಹುಲ್‌ ಗಾಂಧಿ ಕರೆದಿದ್ದರು. ಅವರ ಆಹ್ವಾನದ ಮೇಲೆ ನಾನೂ ಪಾಲ್ಗೊಂಡಿದ್ದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಯಾವ ರೀತಿಯ ಕಾರ್ಯತಂತ್ರ ರೂಪಿಸಬೇಕು, ಯಾವ ರೀತಿ ಪಕ್ಷವನ್ನು ಬಲಪಡಿಸಬೇಕು ಎನ್ನುವುದರ ಬಗ್ಗೆ ಚರ್ಚಿಸಲಾಯಿತು. ನಾನೂ ಸೇರಿದಂತೆ ಲಕ್ಷ್ಮಣ ಸವದಿ ಹಾಗೂ ಇತರ ಮುಖಂಡರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದೇವು ಎಂದು ನುಡಿದರು.

‘ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ  ಮಾಡುತ್ತಿರುವುದರಿಂದ ಹಾಗೂ ರಾಜ್ಯದಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಥಿರ ಸರ್ಕಾರ ಕೊಟ್ಟಿರುವುದರಿಂದ ರಾಜ್ಯದಿಂದ 20ಕ್ಕೂ ಹೆಚ್ಚು ಸಂಸದರನ್ನು ಆಯ್ಕೆ ಮಾಡಿಕಳಿಸಬೇಕೆಂದು ಚರ್ಚಿಸಲಾಯಿತು. ಮತ್ತೊಂದೆಡೆ, ಬಿಜೆಪಿಯ ಪ್ರಾಬಲ್ಯ ದಿನದಿಂದ ಕುಸಿಯುತ್ತಿರುವುದರ ಬಗ್ಗೆ ಚರ್ಚಿಸಲಾಯಿತು’ ಎಂದು ಹೇಳಿದರು.

‘ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ನಾನೇನೂ ಹೇಳಿಲ್ಲ. ಇಂತಹದ್ದೇ ಕ್ಷೇತ್ರ ಬೇಕೆಂದೂ ಹೇಳಿಲ್ಲ. ಪಕ್ಷದ ಮುಖಂಡರು ಬಯಸಿದಂತೆ ಪಕ್ಷದ ಪರ ಹಾಗೂ ಗ್ಯಾರಂಟಿ ಯೋಜನೆಗಳ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಇತ್ತೀಚೆಗಷ್ಟೆ ಬಳ್ಳಾರಿ, ಮಸ್ಕಿಗೆ ಹೋಗಿ ಪ್ರಚಾರ ಮಾಡಿಬಂದಿದ್ದೇನೆ’ ಎಂದು ತಿಳಿಸಿದರು. 

ಶಂಕರಪಾಟೀಲ ಮುನೇನಕೊಪ್ಪ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT