ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಢ ಬಣ್ಣದ ‘ಕೃಷ್ಣಪ್ರಭಾ ರುದ್ರಾ’: ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಹೆಚ್ಚು ಬಳಕೆ

Published : 24 ಸೆಪ್ಟೆಂಬರ್ 2024, 6:08 IST
Last Updated : 24 ಸೆಪ್ಟೆಂಬರ್ 2024, 6:08 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಬ್ಯಾಡಗಿ ಮೆಣಸಿಕಾಯಿ ಕಡಿಮೆ ಖಾರ, ಗಾಢ ಕೆಂಪು ಬಣ್ಣಕ್ಕೆ ಪ್ರಸಿದ್ಧಿ ಪಡೆದ ತಳಿ. ಹಾವೇರಿ ಜಿಲ್ಲೆಯ ದೇವಿ ಹೊಸೂರಿನ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ತರಕಾರಿ ವಿಭಾಗದ ವಿಜ್ಞಾನಿ ಪ್ರಭುದೇವ ಅಜ್ಜಪ್ಪನವರ ಅವರು ‘ಕೃಷ್ಣಪ್ರಭಾ ರುದ್ರಾ’ ಎಂಬ ಬ್ಯಾಡಗಿ ಮೆಣಸಿಕಾಯಿಯ ಹೊಸ ತಳಿಯನ್ನು ಈ ವರ್ಷ ಸಂಶೋಧಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿಯೂ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿ ಅಂದಾಜು 2 ಟನ್‌ ಬೀಜ ಉತ್ಪಾದಿಸಿ, ಮಾರಾಟ ಮಾಡಲಾಗಿದೆ.

ಬೀಜ ಖರೀದಿಗೆ ರೈತರಿಂದ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಈಗಾಗಲೇ ಬಾಗಲಕೋಟೆ, ಗದಗ, ವಿಜಯನಗರ, ಬಳ್ಳಾರಿ, ರಾಯಚೂರು, ಹಾವೇರಿ ಧಾರವಾಡ ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ತಳಿಯನ್ನು ಬೆಳೆಯಲಾಗಿದೆ. 

ಸಾಮಾನ್ಯ ಬ್ಯಾಡಗಿ ಮೆಣಸಿಕಾಯಿ ತಳಿಯು ಎಕರೆಗೆ ಮೂರರಿಂದ ನಾಲ್ಕು ಕ್ವಿಂಟಲ್‌ ಇಳುವರಿ ನೀಡುತ್ತದೆ. ಅದರಲ್ಲಿ ಬಣ್ಣದ ಗಾಢತೆಯ ಪ್ರಮಾಣ ಶೇ 120ರಿಂದ 150ರವರೆಗೆ ಇರುತ್ತದೆ. ಆದರೆ ಅಭಿವೃದ್ಧಿಪಡಿಸಿದ ‘ಕೃಷ್ಣಪ್ರಭಾ ರುದ್ರಾ’ ತಳಿಯನ್ನು ಒಣಭೂಮಿಯಲ್ಲಿ ಬೆಳೆದರೆ ಮೂರರಿಂದ ನಾಲ್ಕು ಕ್ವಿಂಟಲ್‌ ಇಳುವರಿ, ನೀರಾವರಿ ಭೂಮಿಯಲ್ಲಿ ಎಂಟರಿಂದ ಹತ್ತು ಕ್ವಿಂಟಲ್‌ ಇಳುವರಿ ಪಡೆಯಬಹುದು. 

ಲಿಪ್‌ಸ್ಟಿಕ್‌ ತಯಾರಿಕೆಗೆ ಬಳಕೆ: ‘ಕೃಷ್ಣಪ್ರಭಾ ರುದ್ರಾ ತಳಿಯಲ್ಲಿ ಬಣ್ಣದ ಗಾಢತೆಯ ಪ್ರಮಾಣ ಶೇ 180ರಿಂದ 220ರ ವರೆಗೂ ಇರುತ್ತದೆ. ಮಧ್ಯಮ ಪ್ರಮಾಣದಲ್ಲಿ ಖಾರವಿದ್ದು,‌ ಕಡುಗೆಂಪು ಬಣ್ಣದಲ್ಲಿರುತ್ತದೆ. ಹಾಗಾಗಿ ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ. ಅದರಲ್ಲೂ ಲಿಪ್‌ಸ್ಟಿಕ್‌ ತಯಾರಿಕೆಯಲ್ಲಿ ಈ ತಳಿಯ ಮೆಣಸಿನಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ’ ಎಂದು ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿ.ಬಿ.ಪಾಟೀಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮಾರುಕಟ್ಟೆಯಲ್ಲಿಯೂ ಈ ತಳಿ ಲಭ್ಯವಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಕ್ವಿಂಟಲ್‌ ಮೆಣಸಿಕಾಯಿಗೆ ₹60 ಸಾವಿರ ವರೆಗೂ ದರವಿದೆ’ ಎಂದು ಹೇಳಿದರು.

ಅಭಿವೃದ್ಧಿಪಡಿಸಿದ ಹೊಸ ಬ್ಯಾಡಗಿ ಮೆಣಸಿನಕಾಯಿ ತಳಿಯು ರೈತರಿಗೆ ವರದಾನವಾಗಲಿದೆ. ಕೃಷಿ ಮೇಳದಲ್ಲಿ ಈ ಬಗ್ಗೆ ಮಾಹಿತಿ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಇದೇ ತಳಿ ಬೆಳೆಯುತ್ತೇನೆ
ಮಹಾಂತೇಶ ಬ್ಯಾಡಗಿ ಮೆಣಸಿನಕಾಯಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT