ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಆಗದ ವಲಯ ವರ್ಗಾವಣೆ; ಶಿಕ್ಷಕರಿಗೆ ನಿರಾಸೆ

ಹೆಚ್ಚುವರಿ ವರ್ಗಾವಣೆಗಷ್ಟೇ ಶಾಲಾ ಶಿಕ್ಷಣ ಇಲಾಖೆ ನಿರ್ಧಾರ
Published 9 ಜುಲೈ 2024, 6:49 IST
Last Updated 9 ಜುಲೈ 2024, 6:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಲಯ ವರ್ಗಾವಣೆ ನಡೆಸದಿರಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿರುವುದು ಬಹುತೇಕ ಶಿಕ್ಷಕರಲ್ಲಿ ನಿರಾಸೆ ಮೂಡಿಸಿದೆ. ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ವರ್ಗಾವಣೆ ಆಗುವ ಅವರ ನಿರೀಕ್ಷೆ ಹುಸಿಯಾಗಿದೆ.

ಕರ್ನಾಟಕ ಶಿಕ್ಷಕರ ವರ್ಗಾವಣೆ ಮತ್ತು ನಿಯಂತ್ರಣ ಕಾಯ್ದೆ (ತಿದ್ದುಪಡಿ)–2022ರ ಪ್ರಕಾರ, ಹೆಚ್ಚುವರಿ ವರ್ಗಾವಣೆ ನಂತರದ ವರ್ಷದಲ್ಲಿ ವಲಯ (ಕಡ್ಡಾಯ) ವರ್ಗಾವಣೆ ಮಾಡಬೇಕು. ಈ ಪ್ರಕ್ರಿಯೆಯಲ್ಲಿ 10 ವರ್ಷಕ್ಕೂ ಹೆಚ್ಚು ಸಮಯದಿಂದ ನಗರ ಪ್ರದೇಶದಲ್ಲಿ (ಎ–ವಲಯ) ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಗ್ರಾಮೀಣ (ಸಿ–ವಲಯ) ಪ್ರದೇಶಕ್ಕೆ, ಗ್ರಾಮೀಣ ಪ್ರದೇಶದಲ್ಲಿನ ಶಿಕ್ಷಕರನ್ನು ನಗರ ಪ್ರದೇಶಕ್ಕೆ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು.

‘ರಾಜ್ಯದಲ್ಲಿ 5 ಲಕ್ಷ ಶಿಕ್ಷಕರಿದ್ದು, ಸುಮಾರು 4 ಲಕ್ಷ ಶಿಕ್ಷಕರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಾರೆ. ಅವರಲ್ಲಿ 10 ವರ್ಷ ಪೂರೈಸಿದ ಹಲವರು ನಗರ ಪ್ರದೇಶಕ್ಕೆ ವರ್ಗಾವಣೆ ಆಗುವ ನಿರೀಕ್ಷೆಯಲ್ಲಿದ್ದರು. ಕಳೆದ ವರ್ಷ ಹೆಚ್ಚುವರಿ ವರ್ಗಾವಣೆ ಆಗಿದ್ದಕ್ಕೆ, ಈ ವರ್ಷ ವಲಯ ವರ್ಗಾವಣೆ ಮಾಡಬೇಕಿತ್ತು’ ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಲೇಶ ನವುಲೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲು ವಲಯ ವರ್ಗಾವಣೆಗೆ ಅಧಿಸೂಚನೆ ಹೊರಡಿಸಿದ್ದ, ಶಾಲಾ ಶಿಕ್ಷಣ ಇಲಾಖೆ ಜೂನ್ 15ರಂದು ಮತ್ತೊಂದು ಅಧಿಸೂಚನೆ ಹೊರಡಿಸಿ, ಲೋಕಸಭೆ ಚುನಾವಣೆ ಕಾರಣ ವರ್ಗಾವಣೆ ಮುಂದೂಡಿದ್ದರಿಂದ ವಲಯ ವರ್ಗಾವಣೆ ನಡೆಸಲಾಗದು. ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಇತರೆ ವರ್ಗಾವಣೆಯಷ್ಟೇ ನಡೆಸುವುದಾಗಿ ತಿಳಿಸಲಾಗಿದೆ’ ಎಂದರು.

‘ಶಿಕ್ಷಕರ ವರ್ಗಾವಣೆ ಕಾನೂನು ಆಗಿರುವುದರಿಂದ ಯಾವುದೇ ಬದಲಾವಣೆ ಇದ್ದರೂ ಕಾನೂನಾತ್ಮಕವಾಗಿ ಮಾಡಬೇಕು. ಮುಂದಿನ ವರ್ಷಕ್ಕೆ ಇನ್ನಷ್ಟು ಗ್ರಾಮೀಣ ಶಿಕ್ಷಕರು 10 ವರ್ಷ ಪೂರೈಸುವುದರಿಂದ ಎಲ್ಲರ ವರ್ಗಾವಣೆ ಸಾಧ್ಯ ಆಗುವುದಿಲ್ಲ. ನಿವೃತ್ತಿ ಅಂಚಿನಲ್ಲಿರುವವರು ಸೇರಿ ಹಲವರಿಗೆ ಅನ್ಯಾಯ ಆಗುತ್ತದೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ವಲಯ ವರ್ಗಾವಣೆ ಮಾಡಬೇಕು. ಇಲ್ಲವಾದರೆ, ಕಾನೂನು ಹೋರಾಟ ಅನಿವಾರ್ಯವಾಗುತ್ತದೆ’ ಎಂದು ಅವರು ಹೇಳಿದರು.

‘ಗ್ರಾಮೀಣ ಭತ್ಯೆಯಾದರೂ ನೀಡಲಿ’
‘ನಗರದ ಶಿಕ್ಷಕರಿಗೆ ಒಟ್ಟಾರೆ ಭತ್ಯೆ ಮೂಲ ವೇತನದ ಶೇ 12ರಷ್ಟು ಮತ್ತು ಗ್ರಾಮೀಣ ಶಿಕ್ಷಕರಿಗೆ ಶೇ 8ರಷ್ಟು ಇದೆ. ಬಹುತೇಕ ಗ್ರಾಮೀಣ ಶಿಕ್ಷಕರು ನಗರದಲ್ಲಿ ವಾಸವಿದ್ದು, ಹೆಚ್ಚುವರಿ ಖರ್ಚನ್ನು ಅವರೇ ಭರಿಸಬೇಕು. ಭತ್ಯೆ ಹೆಚ್ಚಿರುವುದರಿಂದಲೇ ನಗರದ ಶಿಕ್ಷಕರು ಗ್ರಾಮಗಳಿಗೆ ಬರಲು ಬಯಸುವುದಿಲ್ಲ. 5ನೇ ವೇತನ ಆಯೋಗದಲ್ಲಿ ನೀಡುತ್ತಿದ್ದ ಗ್ರಾಮೀಣ ಭತ್ಯೆಯನ್ನು ಈಗ ಸ್ಥಗಿತಗೊಳಿಸಲಾಗಿದೆ. ನಗರದ ಶಿಕ್ಷಕರಂತೆ ಇಂತಿಷ್ಟು ಭತ್ಯೆ ನೀಡಿದರೆ, ಗ್ರಾಮೀಣ ಶಿಕ್ಷಕರಿಗೆ ಅನುಕೂಲ. ಆಗ ನಗರಕ್ಕೆ ವರ್ಗಾವಣೆ ಬೇಡಿಕೆಯೂ ಹೆಚ್ಚಿರುವುದಿಲ್ಲ’ ಎಂಬುದು ಗ್ರಾಮೀಣ ಶಿಕ್ಷಕರ ಅಭಿಪ್ರಾಯ.
ಇಲಾಖೆಯು ಕಡ್ಡಾಯವಾಗಿ ಕಾನೂನು ಪಾಲಿಸಬೇಕು. ಇಲ್ಲವೇ ವರ್ಗಾವಣೆ ಪ್ರಕ್ರಿಯೆ ಕೈಬಿಡಬೇಕು
ಹಾಲೇಶ ನವುಲೆ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ವಲಯ ವರ್ಗಾವಣೆ ಬಗ್ಗೆ ಶಿಕ್ಷಕರಲ್ಲೇ ಮಿಶ್ರ ಅಭಿಪ್ರಾಯವಿದೆ. ಈ ಹಿಂದೆಯೂ ವಲಯ ವರ್ಗಾವಣೆ ಕೈಬಿಡಲಾಗಿತ್ತು
ರಿತೇಶ್‌ಕುಮಾರ್‌ ಸಿಂಗ್‌, ಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT