ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಗಿಲ್ ವಿಜಯೋತ್ಸವ: 26ಕ್ಕೆ ಜಾಗೃತಿ ಮೆರವಣಿಗೆ

Published 3 ಜುಲೈ 2024, 14:39 IST
Last Updated 3 ಜುಲೈ 2024, 14:39 IST
ಅಕ್ಷರ ಗಾತ್ರ

ಗದಗ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಜುಲೈ 26ರಂದು ನಗರದ ಯುವಜನರಲ್ಲಿ ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೆರವಣಿಗೆ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ ತಿಳಿಸಿದರು.

‘ಜುಲೈ 26ರಂದು ನಗರದ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್‌ನಿಂದ ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಗಾಂಧಿ ಸರ್ಕಲ್ ಮಾರ್ಗವಾಗಿ ಕೆ. ಎಚ್. ಪಾಟೀಲ ಸಭಾ ಭವನದವರೆಗೆ ಮೆರವಣಿಗೆ ನಡೆಯಲಿದೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರತಿವರ್ಷ ಕಾರ್ಗಿಲ್ ವಿಜಯೋತ್ಸವವನ್ನು ಗಾಂಧಿ ಸರ್ಕಲ್‌ನಲ್ಲಿ ಆಚರಿಸುತ್ತಾರೆ. ಆದರೆ, ಈ ವಿಜಯೋತ್ಸವವನ್ನು ಕೇವಲ ಮಾಜಿ ಸೈನಿಕರಷ್ಟೇ ಬೀದಿ ನಾಟಕದ ರೀತಿ ಆಚರಿಸಬೇಕಾದ ದುಸ್ಥಿತಿ ಇದೆ. ಯುವಕರು ವಿಜಯೋತ್ಸವದ ದಿನದಂದು ವ್ಯಾಟ್ಸ್ಆ್ಯಪ್‌ನಲ್ಲಿ ಸ್ಟೇಟಸ್ ಇಡುವ ಮೂಲಕ ದೇಶಭಕ್ತಿ ತೋರಿಸುತ್ತಾರೆಯೇ ವಿನಹ ನಮ್ಮ ಜೊತೆ ಕೈಜೋಡಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೇವಲ ತಮ್ಮ ಒಳಿತಿಗಾಗಿ ಹೋರಾಟ ಮಾಡುತ್ತಿಲ್ಲ. ಬದಲಾಗಿ ಗದಗವನ್ನು ಮಾದರಿ ಜಿಲ್ಲೆಯನ್ನಾಗಿ ಸಂಕಲ್ಪದೊಂದಿಗೆ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ’ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಎನ್. ಆರ್ ದೇವಾಂಗಮಠ ಮಾತನಾಡಿ, ‘ಒಬ್ಬ ಯೋಧ ಸುಮಾರು 18 ರಿಂದ 25 ವರ್ಷಗಳವರೆಗೆ ತನ್ನ ಇಡೀ ಕುಟುಂಬವನ್ನು ಬಿಟ್ಟು ದೇಶ ರಕ್ಷಣೆಗಾಗಿ ಹೋರಾಟ ನಡೆಸಿ, ನಿವೃತ್ತಿಯ ನಂತರ ತವರಿಗೆ ಮರಳುತ್ತಾರೆ. ಆದರೆ, ನಿವೃತ್ತಿ ನಂತರ ಉದ್ಯೋಗಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋಗುವ ಅನಿವಾರ್ಯತೆ ಎದುರಾಗುತ್ತದೆ. ಈಗಾಗಲೇ ಕುಟುಂಬ ಬಿಟ್ಟು ದೇಶ ಸೇವೆ ಮಾಡಿ ಬಂದ ಯೋಧ ನಿವೃತ್ತಿ ನಂತರವೂ ಕುಟುಂಬದ ಜೊತೆ ಕಾಲ ಕಳೆಯಲು ಆಗುವುದಿಲ್ಲ. ಹಾಗಾಗಿ ನಿವೃತ್ತ ಯೋಧರಿಗೆ ಸ್ವಂತ ಜಿಲ್ಲೆಯಲ್ಲಿಯೇ ಕೆಲಸ ನೀಡಲು ಸರ್ಕಾರ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ಸುಭಾಶ್‌ಚಂದ್ರ ಬಗರೆ, ಪ್ರವೀಣ ಹೂಗಾರ, ಮಂಗಲೇಶ್ ವಸ್ತ್ರದ, ಚಂದ್ರಶೇಖರಪ್ಪ ಬಿಳೆಯಲಿ, ಸಿದ್ದಲಿಂಗಪ್ಪ ಪಾಳೇದ, ಸಂಗಪ್ಪ ತಳವಾರ, ದಾವಲ್ ಅಂಗಡಿ, ಶಿವಪುತ್ರಪ್ಪ ಸಂಗನಾಳ, ವಿಜಯ ಬಡಿಗೇರ, ಮಲ್ಲಿಕಾರ್ಜುನ ಕೊರಕ್ಕನವರ, ಬೆಟ್ಟಪ್ಪ ಕುಂಬಾರ, ವೆಂಕಪ್ಪ ಕಲಹಾಳ, ಮಲ್ಲೆಶಪ್ಪ ಕೊಣ್ಣೂರ, ನಿಂಗಪ್ಪ ಚೊರಗತ್ತಿ, ಪ್ರಕಾಶ್ ಬಂಡಿಹಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT