ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಂಬಳ: ವಿಕ್ಟೋರಿಯಾ ಮಹಾರಾಣಿ ಕೆರೆ ನಿರ್ವಹಣೆ ಕೊರತೆ

ಹಗಲು, ರಾತ್ರಿ ಗಸ್ತು ವ್ಯವಸ್ಥೆ ಮಾಡುವಂತೆ ರೈತರ ಒತ್ತಾಯ
ಲಕ್ಷ್ಮಣ ಎಚ್ ದೊಡ್ಡಮನಿ
Published : 11 ಅಕ್ಟೋಬರ್ 2024, 7:02 IST
Last Updated : 11 ಅಕ್ಟೋಬರ್ 2024, 7:02 IST
ಫಾಲೋ ಮಾಡಿ
Comments


ಡಂಬಳ: ಅಖಂಡ ಧಾರವಾಡ ಜಿಲ್ಲೆಯಲ್ಲಿ ವಿಸ್ತಿರ್ಣದಲ್ಲಿ ದೊಡ್ಡದಾಗಿರುವ ಡಂಬಳ ಗ್ರಾಮದ ವಿಕ್ಟೋರಿಯಾ ಮಹಾರಾಣಿ ಕೆರೆ ಈ ಭಾಗದಲ್ಲಿ ನೂರಾರು ರೈತರ ಕಾಮಧೇನು ಆಗಿದೆ. ಇದೀಗ ಸಾಕಷ್ಟು ಸಿಬ್ಬಂದಿಯಿಲ್ಲದೆ ನಿರ್ವಹಣೆ ಕೊರತೆ ಮತ್ತು ಅನುದಾನ ಸಮಸ್ಯೆಯಿಂದ ಕಳೆಗುಂದುತ್ತಿದೆ.

ರೈತರು ತಮ್ಮ ಜಮೀನುಗಳಿಗೆ ನೀರು ಪಡೆಯುವುದಕ್ಕೆ ಚಾಪಕ ಪಕ್ಷಿಯಂತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಕೆರೆಯು ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿದೆ. ಕೆರೆಯು ಮಳೆಯಿಂದ ಅಥವಾ ಸಿಂಗಟಾಲೂರ ಏತನೀರಾವರಿ ಯೋಜನೆಯಡಿ ತುಂಗಭದ್ರ ನದಿಯ ಮೂಲಕ ಭರ್ತಿ ಮಾಡಲಾಗುತ್ತದೆ. ಕೆರೆ ಆಶ್ರಯದಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಯನ್ನು ರೈತರು ಬೆಳೆಯಬಹುದಾಗಿದೆ. ರೈತರ ಜಮೀನುಗಳಿಗೆ ನೀರು ಹರಿಸಲು ಉತ್ತರಭಾಗ, ದಕ್ಷಿಣ ಭಾಗ ಹಾಗೂ ಮಧ್ಯಮಭಾಗ ಒಟ್ಟು ಮೂರು ಕಾಲುವೆ ಮಾರ್ಗಗಳಿವೆ.

ಇಲಾಖೆಯ ಮಾಹಿತಿ ಪ್ರಕಾರ ಕೆರೆ 2,075 ಹೆಕ್ಟೇರ್‌ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೆರೆಯಿಂದ ಅಂದಾಜು 3000 ಹೆಕ್ಟೇರ್‌ ಜಮೀನುಗಳಿಗೆ ನೀರು ಹರಿಯುತ್ತದೆ.

ಡಂಬಳ ಅಲ್ಲದೆ ಹತ್ತಿರದ ಪೇಠಾಲೂರ, ಮೇವುಂಡಿ ಗ್ರಾಮದ ಕೆಲ ರೈತರ ಜಮೀನುಗಳಿಗೂ ಈ ಕೆರೆಯ ನೀರು ಆಸರೆ ಆಗಿದೆ. ಪ್ರತಿವರ್ಷ ಕೆರೆ ಹಾಗೂ ಕಾಲುವೆ ದುರಸ್ಥಿಗೆ ಅನುದಾನದ ಕೊರತೆ ಎದುರಾಗುತ್ತದೆ. ಮೂರು ಕಾಲುವೆ ಮಾರ್ಗಗಳಿಗೂ ಒಬ್ಬರೆ ದಿನಗೂಲಿ ನೌಕರ ನಿರ್ವಹಣೆ ಮಾಡುವುದು ಸಾವಲಾಗಿ ಪರಿಣಮಿಸಿದೆ. ಸಮ ಪ್ರಮಾಣದಲ್ಲಿ ಎಲ್ಲಾ ರೈತರ ಜಮೀನುಗಳಿಗೆ ನೀರು ಹರಿಸಲು ಸರದಿ ಸಾಲಿನಲ್ಲಿ ಇಲಾಖೆ ವತಿಯಿಂದ ಪರವಾನಿಗೆ ಪಡೆಯುವ ಪದ್ದತಿ ಮುಂದುವರಿಸಬೇಕಿದೆ. ಇದಕ್ಕಾಗಿ ಅಗತ್ಯ ಸಿಬ್ಬಂದಿ ಮತ್ತು ಸಮರ್ಪಕ ನಿರ್ವಹಣೆಗೆ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ತಗೆದುಕೊಳ್ಳಬೇಕು ಎಂದು ರೈತ ಮುಖಂಡ ವಿರುಪಾಕ್ಷಪ್ಪ ಎಲಿಗಾರ ಮತ್ತು ಚಂದ್ರು ಯಳಮಲಿ ಒತ್ತಾಯಿಸಿದರು.

ಗಸ್ತು ಪದ್ದತಿ: ಕನಿಷ್ಠ ಮೂವರು ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ಇಲಾಖೆಯವರು ನೇಮಕ ಮಾಡಿಕೊಳ್ಳಬೇಕು. ಹಗಲು ಮತ್ತು ರಾತ್ರಿ ಸಮಯದಲ್ಲಿಯು ಕಾಲುವೆಯ ಮಾರ್ಗದಲ್ಲಿ ಸಿಬ್ಬಂದಿ ಗಸ್ತು ಮಾಡಬೇಕು. ಪ್ರತಿಯೊಬ್ಬ ರೈತರು ಹಗಲು ಮತ್ತು ರಾತ್ರಿ ಸಮಯಲ್ಲಿ ನೀರು ಹರಿಸುವವರು ಪ್ರತ್ಯೇಕವಾಗಿ ಇಲಾಖೆಯಿಂದ ಪಾಸ್ ಪಡೆದುಕೊಳ್ಳಬೇಕು. ದೊಡ್ಡ ಮತ್ತು ಸಣ್ಣ ಹಿಡುವಳಿದಾರರು ಹಾಗೂ ದೂರದಲ್ಲಿರುವ ರೈತರ ಜಮೀನುಗಳಿಗೂ ಸರಗವಾಗಿ ನೀರು ಹರಿಸಲು ಅನುಕೂಲವಾಗುತ್ತದೆ ಎನ್ನುವುದು ರೈತರ ಒತ್ತಾಯ.

ಡಂಬಳ ಗ್ರಾಮದ ವಿಕ್ಟೋರಿಯಾ ಮಹಾರಾಣೆ ಕೆರೆಯ ಸಣ್ಣ ನೀರಾವರಿ ಇಲಾಖೆ ಕಾಲುವೆ ಸಮರ್ಪಕವಾಗಿ ನಿರ್ವಹಣೆ ಆಗದಿರುವ ಚಿತ್ರಣ.
ಡಂಬಳ ಗ್ರಾಮದ ವಿಕ್ಟೋರಿಯಾ ಮಹಾರಾಣೆ ಕೆರೆಯ ಸಣ್ಣ ನೀರಾವರಿ ಇಲಾಖೆ ಕಾಲುವೆ ಸಮರ್ಪಕವಾಗಿ ನಿರ್ವಹಣೆ ಆಗದಿರುವ ಚಿತ್ರಣ.
ಪ್ಲಾಸ್ಟಿಕ್ ತ್ಯಾಜ್ಯವನ್ನು ಕಾಲುವೆಗೆ ಹಾಕದಂತೆ ಸಾರ್ವಜನಿಕರು ಜಾಗೃತಿ ಹೊಂದಬೇಕು. ಕೆರೆ ಸಮರ್ಪಕ ನಿರ್ವಹಣೆಗೆ ಇನ್ನಷ್ಟು ಸಿಬ್ಬಂದಿ ನೇಮಕದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು
ಪ್ರವೀಣ ಪಾಟೀಲ ಎಇ ಸಣ್ಣ ನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT