ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಣನೂರು | ಅಪಘಾತ ಹೆಚ್ಚಳ-ಅಂಗಡಿ ತೆರವುಗೊಳಿಸಿ: ಸ್ಥಳೀಯರ ಒತ್ತಾಯ

ರಸ್ತೆ ಬದಿ ವ್ಯಾಪಾರಿಗಳನ್ನು ತೆರೆದ ಮಾರುಕಟ್ಟೆ, ಫುಡ್ ಕೋರ್ಟ್‌ಗೆ ಸ್ಥಳಾಂತರಿಸಲು ಆಗ್ರಹ
ಗಂಗೇಶ್‌ ಬಿ.ಪಿ.
Published 14 ಏಪ್ರಿಲ್ 2024, 7:31 IST
Last Updated 14 ಏಪ್ರಿಲ್ 2024, 7:31 IST
ಅಕ್ಷರ ಗಾತ್ರ

ಕೊಣನೂರು: ರಸ್ತೆ ಬದಿಯ ಗೂಡಂಗಡಿಗಳು ಮತ್ತು ಚಾಟ್ಸ್ ಅಂಗಡಿಗಳಿಂದಾಗಿ ಅಪಘಾತಗಳು ಹೆಚ್ಚುತ್ತಿದ್ದು, ಅಂಗಡಿಗಳನ್ನು ತೆರವುಗೊಳಿಸಿ ಅಪಘಾತಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಮಾಗಡಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ವಿಸ್ತರಣೆ ಕಾಮಗಾರಿ ಪೂರ್ಣಗೊಳ್ಳುವ ಮುಂಚೆಯೇ ರಸ್ತೆಯಲ್ಲಿ ವಾಹನ ಅಫಘಾತಗಳು ಹೆಚ್ಚಿದ್ದು, ವಾಹನ ಸವಾರರು ಜೀವ ಕಳೆದುಕೊಳ್ಳುತ್ತಿರುವುದು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ.

ರಸ್ತೆಬದಿ ವ್ಯಾಪಾರಿಗಳು, ಗೂಡಂಗಡಿಗಳು, ತರಕಾರಿ, ಹಣ್ಣಿನ ಮತ್ತು ಚಾಟ್ಸ್ ಅಂಗಡಿಗಳನ್ನು ತೆರವುಗೊಳಿಸಿ, ಮುಂದೆ ಆಗಬಹುದಾದ ಮತ್ತಷ್ಟು ಅನಾಹುತಗಳನ್ನು ತಪ್ಪಿಸಬೇಕು. ಜೀವಗಳನ್ನು ಕಾಪಾಡಬೇಕು ಎಂದು ಗ್ರಾಮ ಪಂಚಾಯಿತಿ ಮತ್ತು ಕಾಮಗಾರಿ ನಡೆಸುತ್ತಿರುವ ಕೆಶಿಫ್‌ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕೆಲ ತಿಂಗಳಿಂದ ರಾಮನಾಥಪುರ ಮತ್ತು ಕೊಣನೂರು ನಡುವಿನ ರಸ್ತೆ ವಿಸ್ತರಣೆ ಕಾರ್ಯ ಪೂರ್ಣಗೊಂಡಿದೆ. ಕೊಣನೂರಿನ ಗ್ರಾಮದ ವ್ಯಾಪ್ತಿಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿಯು ಮುಗಿಯಲಿದೆ. ಅದರ ನಡುವೆಯೇ ವಡ್ವಾಣಹೊಸಳ್ಳಿ ಸೇತುವೆಯ ಮೇಲೆ ಸುಮಾರು 5 ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಶುಕ್ರವಾರ ಕೊಣನೂರು ಪಟ್ಟಣದೊಳಗೆ ಲಾರಿ ಮತು ದಂಪತಿ ಇದ್ದ ಬೈಕ್ ನಡುವಿನ ಡಿಕ್ಕಿಯಲ್ಲಿ ಪತ್ನಿ ಸ್ಥಳದಲ್ಲೇ ಮೃತಪಟ್ಟ ಘಟನೆಯು ಜನರನ್ನು ಘಾಸಿಗೊಳಿಸಿದೆ.

ಕೊಣನೂರಿನ ಕೆರೆಯ ಬಳಿಯಿಂದ ಬಸ್ ನಿಲ್ದಾಣದವೆಗೂ ಅನೇಕ ರಸ್ತೆ ಬದಿ ವ್ಯಾಪಾರಿಗಳು, ಚಾಟ್ಸ್ ಅಂಗಡಿಯವರು ಹೆದ್ದಾರಿಯಲ್ಲೇ ನಿತ್ಯ ವ್ಯಾಪಾರ ಮುಂದವರಿದ್ದು, ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ. ವಾಹನಗಳು ಪಟ್ಟಣದೊಳಗಿನ ಚಿಕ್ಕಪುಟ್ಟ ರಸ್ತೆಗಳಿಂದ ಮುಖ್ಯ ರಸ್ತೆಯನ್ನು ಪ್ರವೇಶಿಸುವಾಗ, ರಸ್ತೆಯಲ್ಲಿರುವ ಅಂಗಡಿಗಳು ಮತ್ತು ಚಾಟ್ಸ್ ಗಾಡಿಗಳಿಂದಾಗಿ ರಸ್ತೆಯು ಮರೆಯಾಗುತ್ತಿದೆ. ಇಕ್ಕೆಲಗಳಿಂದ ಬರುವ ವಾಹನಗಳು ಕಾಣುವುದಿಲ್ಲ. ಹೀಗಾಗಿ ಅಪಘಾತಗಳು ಆಗುತ್ತಿವೆ ಎನ್ನುವುದು ಜನರು ದೂರು.

ರಸ್ತೆಯಲ್ಲಿ ವ್ಯಾಪಾರಿಕ್ಕಿಳಿದಿರುವ ಅಂಗಡಿಗಳನ್ನು ತೆರವುಗೊಳಿಸಿ, ಶಾಶ್ವತವಾಗಿ ರಸ್ತೆಯಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧಿಸಬೇಕು. ನಿತ್ಯ ವ್ಯಾಪಾರ ಮಾಡುವರ ಉದ್ದೇಶಕ್ಕಾಗಿಯೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ತೆರೆದ ಮಾರುಕಟ್ಟೆಗೆ ಸ್ಥಳಾಂತರಿಸಬೇಕು. ಚಾಟ್ಸ್ ಅಂಗಡಿಗಳನ್ನು ಪೊಲೀಸ್ ಠಾಣೆಯ ಸಮೀಪದ ನಿರ್ಮಿಸಿರುವ ಫುಡ್‍ಕೋರ್ಟ್‌ಗೆ ಸ್ಥಳಾಂತರಿಸಿ, ರಸ್ತೆಯನ್ನು ಸಂಪೂರ್ಣ ತೆರವುಗೊಳಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಮುಖ್ಯ ರಸ್ತೆಗೆ ಸಂಪರ್ಕಿಸುವ ಪಟ್ಟದೊಳಗಿನ ಚಿಕ್ಕಪುಟ್ಟ ರಸ್ತೆಗಳಿಗಿಂತ, ಹೆದ್ದಾರಿಯನ್ನು ಅಡಿಗಳಷ್ಟು ತಗ್ಗು ಮಾಡಿದ್ದು, ಸಂಪರ್ಕ ರಸ್ತೆಗಳು ಎತ್ತರದಲ್ಲಿವೆ. ವಾಹನಗಳನ್ನು ಇಳಿಸಲು ಮತ್ತು ಹತ್ತಿಸಲು ಪ್ರಯಾಸ ಪಡಬೇಕಿದೆ. ಸಂಪರ್ಕಿಸುವ ಸ್ಥಳವು ಕಡಿದಾದ ಎತ್ತರನ್ನು ಹೊಂದಿದ್ದು, ಅಲ್ಲಿಂದ ಮುಖ್ಯ ರಸ್ತೆಗಿಳಿಯುವ ವಾಹನಗಳಿಗೆ ಹಿಡಿತ ಸಿಗದೇ ವೇಗವಾಗಿ ಮಖ್ಯ ರಸ್ತೆಗಿಳಿಯುವ ಸಾಧ್ಯತೆ ಹೆಚ್ಚಿದ್ದರಿಂದ ಅಪಘಾತಕ್ಕೆ ಎಡೆಮಾಡಿಕೊಡುತ್ತಿವೆ. ಸಂಪರ್ಕ ರಸ್ತೆಯು ಮುಖ್ಯ ರಸ್ತೆಯನ್ನು ಸೇರುವ ಸ್ಥಳದಲ್ಲಿ ಸಮತಟ್ಟು ಮಾಡಿ ಉಬ್ಬುಗಳನ್ನು ಹಾಕಬೇಕು. ಬರುವ ವಾಹನಗಳು ನಿಧಾನವಾಗಿ ಚಲಿಸುವಂತೆ ಅಪಘಾತ ರಹಿತ ಸಂಚಾರಕ್ಕೆ ಕೆಶಿಪ್‌ನವರು ಅನೂಕೂಲ ಮಾಡಬೇಕಿದೆ ಎನ್ನುವುದು ಜನರ ಬೇಡಿಕೆ.

ಸಂಪರ್ಕ ರಸ್ತೆಗಳು ಮುಖ್ಯ ರಸ್ತೆಗಿಂತ ಎತ್ತರವಿರುವುದು.
ಸಂಪರ್ಕ ರಸ್ತೆಗಳು ಮುಖ್ಯ ರಸ್ತೆಗಿಂತ ಎತ್ತರವಿರುವುದು.
ಕೆಶಿಫ್ ನವರು ಹೆದ್ದಾರಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡುತ್ತಿದ್ದಾರೆ. ಫುಟ್‍ಪಾತ್‍ನಿಂದ ಆಚೆ ಇರಬೇಕಾದ ವಿದ್ಯುತ್ ಕಂಬಗಳು ರಸ್ತೆಯ ಪಕ್ಕದಲ್ಲಿವೆ. ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತಗಳು ಹೆಚ್ಚುತ್ತಿವೆ.
ರಘು ಸ್ಥಳೀಯ ನಿವಾಸಿ
ಅಪಘಾತಗಳಿಗೆ ರಸ್ತೆ ಕಾಮಗಾರಿ ನಡೆಸುತ್ತಿರುವ ಕೆಶಿಫ್‌ನವರೇ ಕಾರಣ. ವಿಭಜಕ ನಿರ್ಮಿಸುವ ಸ್ಥಳದಲ್ಲಿ ಡಸ್ಟ್ ಪೌಡರ್ ಸುರಿದಿರುವುದರಿಂದ ಸ್ಕಿಡ್ ಆಗಿ ಅಪಘಾತ ಆಗುತ್ತಿವೆ. ಕಾಮಗಾರಿ ಮುಗಿಸದೇ ಇರುವುದೇ ಅಪಘಾತಕ್ಕೆ ಕಾರಣ.
ಸೂರ್ಯನಾರಾಯಣ ಗ್ರಾಮ ಪಂಚಾಯಿತಿ ಸದಸ್ಯ
ರಸ್ತೆಬದಿ ಅಂಗಡಿಗಳಿಂದ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿರುವ ಕುರಿತು ಕೆಶಿಫ್‌ನವರಿಗೆ ನೋಟೀಸ್ ನೀಡಲಾಗುವುದು. ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗುವುದು. ಉಬ್ಬು ಹಾಕಿ ಸಂಪರ್ಕ ರಸ್ತೆಗಳ ತಗ್ಗನ್ನು ಸರಿಪಡಿಸುವಂತೆ ತಿಳಿಸಲಾಗುವುದು.
ಪ್ರದೀಪ ವಿ.ಎನ್. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT