ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಮಿನಿ ವಿಧಾನಸೌಧ: ಮೆಟ್ಟಿಲು ಹತ್ತುವುದರಲ್ಲಿಯೇ ಜನ ಸುಸ್ತು

ಮಿನಿ ವಿಧಾನಸೌಧದಲ್ಲಿ ಲಿಫ್ಟ್‌ ಇಲ್ಲದೇ ಸಾರ್ವಜನಿಕರಿಗೆ ತೊಂದರೆ
Published 10 ಜುಲೈ 2024, 6:50 IST
Last Updated 10 ಜುಲೈ 2024, 6:50 IST
ಅಕ್ಷರ ಗಾತ್ರ

ಆಲೂರು: ಪಟ್ಟಣದ ಹೃದಯ ಭಾಗದಲ್ಲಿ ಸುಮಾರು ₹6 ಕೋಟಿ ವೆಚ್ಚದಲ್ಲಿ ಬೃಹತ್ ಮಿನಿ ವಿಧಾನಸೌಧ ನಿರ್ಮಾಣವಾಗಿದ್ದು, ಇಲ್ಲಿಗೆ ಬರುವ ಸಾರ್ವಜನಿಕರು ಮೆಟ್ಟಿಲು ಹತ್ತುವುದರಲ್ಲಿಯೇ ಸುಸ್ತಾಗುತ್ತಿದ್ದಾರೆ.

ನೆಲ ಅಂತಸ್ತು ಸೇರಿ ಮೂರು ಅಂತಸ್ತುಗಳಿರುವ ಈ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಭೂ ಸ್ವಾಧೀನ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ಮೀನುಗಾರಿಕೆ ಸೇರಿದಂತೆ ನಾಲ್ಕು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ.

ಭೂ ದಾಖಲೆ ಇಲಾಖೆಗೆ ಸಂಬಂಧಿಸಿದಂತೆ ಬಹುತೇಕ ವೃದ್ಧ ರೈತರು, ರೈತ ಮಹಿಳೆಯರು ಹೆಚ್ಚಾಗಿ ನಿತ್ಯ ಎರಡನೆ ಅಂತಸ್ತಿಗೆ ಹೋಗಲು ಮೆಟ್ಟಿಲುಗಳನ್ನು ಏರಿ ಹೋಗಿ ಬರಬೇಕಾಗಿದೆ. ಅನೇಕ ವೃದ್ಧರು, ಮಹಿಳೆಯರು ಮೆಟ್ಟಿಲು ಏರುವಾಗ ಅಲ್ಲಲ್ಲಿ ಕುಳಿತು ನಂತರ ಮೆಟ್ಟಿಲೇರಿ ಕಚೇರಿಗೆ ಹೋಗುತ್ತಾರೆ. ಕೆಲ ಸ್ಥಳದಲ್ಲಿದ್ದ ಕೆಲವರು ಮೆಟ್ಟಿಲೇರಿ ಕಚೇರಿಗೆ ಹೋಗಿ ಬರಲು ಸಹಾಯ ಮಾಡುತ್ತಿದ್ದಾರೆ.

ಬೃಹತ್ ಕಟ್ಟಡ ನಿರ್ಮಾಣ ಮಾಡಲು ತಯಾರಿಸಿದ ನೀಲನಕ್ಷೆಯಲ್ಲಿ ಲಿಫ್ಟ್‌ ಅಳವಡಿಕೆ ಇರಲಿಲ್ಲ.  ಹಾಗಾಗಿ ಲಿಫ್ಟ್‌ ಅಳವಡಿಕೆ ಮಾಡಿಲ್ಲ ಎನ್ನಲಾಗಿದೆ. ಈಗಲೂ ಲಿಫ್ಟ್ ಅಳವಡಿಕೆಗೆ ಕಟ್ಟಡದಲ್ಲಿ ಸೂಕ್ತ ಸ್ಥಳಾವಕಾಶವಿದೆ. ಕೂಡಲೆ ಲಿಫ್ಟ್ ಅಳವಡಿಸಬೇಕು ಎಂಬುದು ಜನಸಾಮಾನ್ಯರು ಆಗ್ರಹಿಸಿದ್ದಾರೆ.

ಮೇಲು ಅಂತಸ್ತು ಕಟ್ಟಡ ನಿರ್ಮಾಣ ಮಾಡುವಾಗ ಲಿಫ್ಟ್ ಅಳವಡಿಕೆ ಮಾಡಬೇಕಾಗಿತ್ತು. ಎರಡನೇ ಅಂತಸ್ತಿನಲ್ಲಿರುವ ಕಚೇರಿಗಳಿಗೆ ಹೋಗಿ ಬರಲು ಅಸಾಧ್ಯವಾಗಿದೆ. ಕೂಡಲೇ ಲಿಫ್ಟ್ ಅಳವಡಿಸಿ ಅಸಹಾಯಕರು, ವೃದ್ಧರು, ಮಹಿಳೆಯರಿಗೆ ನೆರವಾಗಬೇಕು ಎಂದು ಕುಂದೂರಿನ ಆರ್. ಜಯಪದ್ಮ ಧರಣೇಂದ್ರ ಆಗ್ರಹಿಸಿದ್ದಾರೆ.

ಲಿಫ್ಟ್ ಸೇರಿದಂತೆ ಇನ್ನಿತರ ಸೌಲಭ್ಯಗಳ ಅಳವಡಿಕೆಗೆ ₹ 30 ಲಕ್ಷ ಪ್ರಸ್ತಾವಯನ್ನು ವಾರದ ಹಿಂದೆ ಸಲ್ಲಿಸಲಾಗಿದೆ. ಮಂಜೂರಾದ ತಕ್ಷಣ ಲಿಫ್ಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
ಮಧು, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಪ್ರಸ್ತಾವದ ಕುರಿತು ಅಧಿಕಾರಿಗಳ ಜೊತೆ ಮಾತನಾಡಿ ಹಣ ಮಂಜೂರು ಮಾಡಿಸಲಾಗುವುದು. ಆದಷ್ಟು ಬೇಗ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ ಪಡುತ್ತೇನೆ.
ಸಿಮೆಂಟ್ ಮಂಜು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT