ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಗಿ | ವಿದ್ಯಾರ್ಥಿನಿಯರನ್ನು ಬಸ್‌ಗೆ ಹತ್ತಿಸಿಕೊಳ್ಳದ ನಿರ್ವಾಹಕ; ನಿಂದನೆ ಆರೋಪ

Published : 25 ಸೆಪ್ಟೆಂಬರ್ 2024, 6:26 IST
Last Updated : 25 ಸೆಪ್ಟೆಂಬರ್ 2024, 6:26 IST
ಫಾಲೋ ಮಾಡಿ
Comments

ಕಾಳಗಿ (ಕಲಬುರಗಿ ಜಿಲ್ಲೆ): ಪಟ್ಟಣದಿಂದ 3 ಕಿ.ಮೀ. ಅಂತರದ ಭರತನೂರ ಗ್ರಾಮದಲ್ಲಿ ನಿತ್ಯ ಬೆಳಿಗ್ಗೆ 9ಕ್ಕೆ ರಾಜಾಪುರ ಕಡೆಯಿಂದ ಕಾಳಗಿಗೆ ಸಂಚರಿಸುವ ಹುಮನಾಬಾದ್ ಬಸ್ ನಿಲ್ಲಿಸಿದರೂ ಶಾಲಾ- ಕಾಲೇಜು ವಿದ್ಯಾರ್ಥಿನಿಯರನ್ನು ಹತ್ತಿಸಿಕೊಳ್ಳದ ನಿರ್ವಾಹಕರು, ವಿದ್ಯಾರ್ಥಿನಿಯರಿಗೆ ನಿಂದನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬುಧವಾರ 'ಪ್ರಜಾವಾಣಿ' ಎದುರು ಅಳಲು ತೋಡಿಕೊಂಡ ಭರತನೂರ ಗ್ರಾಮದ ಏಳು ವಿದ್ಯಾರ್ಥಿನಿಯರು, 'ನಿರ್ವಾಹಕರು ನಮಗೆ ಬಸ್‌ಗೆ ಹತ್ತಿಸಿಕೊಳ್ಳದೆ ಬೈದು ಅವಮಾನ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

'ನಾವು ನಿತ್ಯ ಶಾಲಾ-ಕಾಲೇಜಿಗಾಗಿ ಕಾಳಗಿಗೆ ಹೋಗಿ-ಬರುತ್ತೇವೆ. ಬೆಳಿಗ್ಗೆ ಕಾಳಗಿಗೆ ತೆರಳಲು ಹುಮನಾಬಾದ್ ಬಸ್ ಬರುತ್ತದೆ. ಬಸ್ ನಿಲ್ಲಿಸಿದಾಗ ಬೇರೆ ಪ್ರಯಾಣಿಕರನ್ನು ಹತ್ತಿಸಿಕೊಂಡು ನಮಗೆ ಹತ್ತಿಸಿಕೊಳ್ಳುವುದಿಲ್ಲ. ನಮಗೆ ಏಕೆ ಹತ್ತಿಸಿಕೊಳ್ಳುವುದಿಲ್ಲ ಎಂದು ನಿರ್ವಾಹಕರನ್ನು ಪ್ರಶ್ನಿಸಿದರೆ, ನಮ್ಮನ್ನೆ ಬೈಯುತ್ತಾರೆ' ಎಂದು ವಿದ್ಯಾರ್ಥಿನಿಯರು ಆಪಾದಿಸಿದರು.

'15 ದಿನಗಳ ಹಿಂದೆ ಕಾಳಗಿ ಡಿಪೋ ಮ್ಯಾನೇಜರ್‌ಗೆ ಮನವಿಪತ್ರ ಕೊಡಲು ಹೋದಾಗ, ಮ್ಯಾನೇಜರ್ ಕೂಡ ನಮ್ಮನ್ನು ಬೈದಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ಸಿಗದೆ 3 ತಿಂಗಳಿಂದ ಆಟೊ, ಜೀಪ್, ಟಂ ಟಂನಂತಹ ವಾಹನಗಳಲ್ಲಿ ಶಾಲಾ-ಕಾಲೇಜಿಗೆ ಹೋಗುತ್ತಿದ್ದೇವೆ. ಎಷ್ಟೋ ಬಾರಿ ಅವುಗಳು ಸಿಗದೆ ನಡೆದುಕೊಂಡು ಹೋಗಿ ತರಗತಿಯ ಪಾಠಗಳನ್ನು ತಪ್ಪಿಸಿಕೊಂಡು ಶಿಕ್ಷೆ ಅನುಭವಿಸಿದ್ದೇವೆ' ಎಂದರು.

'ವಿನಾಕಾರಣ ನಮ್ಮನ್ನು ಬೈದು ಅವಮಾನಿಸಿರುವ ಬಸ್ ನಿರ್ವಾಹಕರ ಮತ್ತು ಡಿಪೋ ಮ್ಯಾನೇಜರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ಶಾಲಾ, ಕಾಲೇಜಿಗೆ ಅನುಕೂಲವಾಗುವಂತೆ ಬಸ್‌ಗಳ ವ್ಯವಸ್ಥೆ ಮಾಡಿ ಹತ್ತಿಸಿಕೊಳ್ಳಬೇಕು. ಇಲ್ಲವಾದಲ್ಲಿ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಡಿಪೋ ಮ್ಯಾನೇಜರ್ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT