ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಯಕ್ಕೆ ಮರಳಿಸುವುದು ಮೊದಲ ಆದ್ಯತೆ: ಜನರಲ್ ಮುಗಿದಿದೆ

X
Published : 24 ಸೆಪ್ಟೆಂಬರ್ 2024, 16:31 IST
Last Updated : 24 ಸೆಪ್ಟೆಂಬರ್ 2024, 16:31 IST
ಫಾಲೋ ಮಾಡಿ
Comments

ನವದೆಹಲಿ: ‍‘ಪಿ.ವಿ.ಸಿಂಧು ಈಗಲೂ ಯಶಸ್ಸಿನ ಹಂಬಲದಲ್ಲಿದ್ದಾರೆ. ಅವರು ಮತ್ತೆ ಸ್ಥಿರ ಪ್ರದರ್ಶನ ನೀಡುವಂತೆ ಮಾಡುವದು ಮೊದಲ ಆದ್ಯತೆಯಾಗಿದೆ’ ಎಂದು ಅವರಿಗೆ ತಾತ್ಕಾಲಿಕ ನೆಲೆಯಲ್ಲಿ ಕೋಚ್‌ ಆಗಿರುವ ಅನೂಪ್ ಶ್ರೀಧರ್ ಮಂಗಳವಾರ ಹೇಳಿದ್ದಾರೆ.

2016 ಮತ್ತು 2021ರಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದಿದ್ದ ಸಿಂಧು, ಪ್ಯಾರಿಸ್‌ ಕ್ರೀಡೆಗಳಲ್ಲಿ ಬರಿಗೈನಲ್ಲಿ ಮರಳಿದ್ದರು. ಪ್ರಸ್ತುತ ಅನೂಪ್ ಶ್ರೀಧರ್‌ ಅವರು ಹೈದರಾಬಾದಿನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಮೂರು ವಾರಗಳಿಂದ ಸಿಂಧು ಅವರಿಗೆ ತರಬೇತಿ ನೀಡುತ್ತಿದ್ದಾರೆ. ಶ್ರೀಧರ್‌ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

‘ನಾನು ಸಿಂಧು ಅವರ ತಂಡದ ಜೊತೆ ಕೆಲವಾರಗಳ ಹಿಂದೆ ಮಾತನಾಡಿದ್ದೆ. ಈಗ ಅವರು ಹೈದರಾಬಾದಿನಲ್ಲಿ ನನ್ನಿಂದ ತರಬೇತಿ ಪಡೆಯುತ್ತಿದ್ದಾರೆ. ನಾವು ಗಣನೀಯ ಪ್ರಗತಿ ಕಂಡಿದ್ದೇವೆ. ಇನ್ನೆರಡು ವಾರಗಳಲ್ಲಿ ಟೂರ್ನಿಗಳಲ್ಲಿ ಭಾಗವಹಿಸಲು ಯುರೋಪ್‌ಗೆ ಹೋಗಲಿದ್ದೇವೆ’ ಎಂದು 41 ವರ್ಷ ವಯಸ್ಸಿನ ಶ್ರೀಧರ್ ಸುದ್ದಿಸಂಸ್ಥೆಗೆ ತಿಳಿಸಿದರು. ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಶ್ರೀಧರ್ ಈ ಹಿಂದೆ ಲಕ್ಷ್ಯ ಸೇನ್ ಅವರಿಗೂ ಕೆಲಕಾಲ ತರಬೇತಿ ನೀಡಿದ್ದರು.

ಪ್ಯಾರಿಸ್‌ ಒಲಿಂಪಿಕ್ಸ್‌ನ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧು ಅವರು ಚೀನಾದ ಹೆ ಬಿಂಗ್‌ಜಿಯಾವೊ ಅವರಿಗೆ ಮಣಿದಿದ್ದರು. ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಋತುವನ್ನು 29 ವರ್ಷ ವಯಸ್ಸಿನ ಆಟಗಾರ್ತಿ ಯುರೋಪ್‌ ಪ್ರವಾಸದೊಡನೆ ಆರಂಭಿಸಲಿದ್ದಾರೆ. ಫಿನ್ಲೆಂಡ್‌ನ ವಾಂಟಾದಲ್ಲಿ ಆರ್ಕ್ಟಿಕ್ ಓಪನ್ (ಅ. 8 ರಿಂದ 13), ಒಡೆನ್ಸ್‌ನಲ್ಲಿ ಡೆನ್ಮಾರ್ಕ್ ಓಪನ್ (ಅ. 15 ರಿಂದ 20) ಆಡಲಿದ್ದಾರೆ.

ಸಿಂಧು ಅವರ ಈ ಹಿಂದಿನ ಕೋಚ್‌ ಇಂಡೊನೇಷ್ಯಾದ ಆಗಸ್ ದ್ವಿ ಸಂತೊಸೊ ಅವರ ಗುತ್ತಿಗೆ ಅವಧಿ ಒಲಿಂಪಿಕ್ಸ್‌ಗೆ ಮುಕ್ತಾಗೊಂಡಿತ್ತು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಫ್ರೆಂಚ್ ಓಪನ್ ವೇಳೆ ಮೊಣಕಾಲು ನೋವಿನಿಂದ ಬಳಲಿದ್ದ ಸಿಂಧು, ಐದು ತಿಂಗಳ ಹಿಂದಷ್ಟೇ ಚೇತರಿಸಿಕೊಂಡು ಜುಲೈ– ಆಗಸ್ಟ್‌ನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಡಿದ್ದರು.

ಕನ್ಸಲ್ಟೆಂಟ್‌ ಕೋಚ್‌ ಆಗಿ ಲೀ ಹ್ಯುನ್

ನವದೆಹಲಿ: ‌ಮುಂದಿನ ತಿಂಗಳು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ಮರಳಲು ಸಜ್ಜಾಗಿರುವ ಪಿ.ವಿ. ಸಿಂಧು ಅವರು ತಮ್ಮ ನೆರವು ಸಿಬ್ಬಂದಿ ತಂಡವನ್ನು ಬಲಗೊಳಿಸಿದ್ದು ದಕ್ಷಿಣ ಕೊರಿಯಾದ ದಿಗ್ಗಜ ಆಟಗಾರ ಲೀ ಹ್ಯುನ್‌ ಇಲ್ ಅವರು ಹಂಗಾಮಿ ಕನ್ಸಲ್ಟೆಂಟ್ ಕೋಚ್ ಆಗಿ ಸೇರ್ಪಡೆಗೊಂಡಿದ್ದಾರೆ. ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರರಾದ ಹ್ಯುನ್‌ 2006ರಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ಗೆದ್ದುಕೊಂಡಿದ್ದರು. ಎರಡು ಬಾರಿ (2002 2014) ಏಷ್ಯನ್‌ ಗೇಮ್ಸ್‌ ತಂಡ ಸ್ವರ್ಣ ವಿಜೇತರಾಗಿದ್ದಾರೆ. ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಸಿಂಧು ಜೊತೆ ಒಂದೇ ತಂಡದಲ್ಲಿ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT