ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನವೀಯ ಮೌಲ್ಯಗಳಿದ್ದರೆ ಅದೇ ಧರ್ಮ: ಸಿದ್ಧಲಿಂಗ ಸ್ವಾಮೀಜಿ

ಸೇವಾ ಭಾರತಿ ರಜತಮಹೋತ್ಸವದಲ್ಲಿ ಅಭಿನವ ಸಿದ್ಧಲಿಂಗ ಸ್ವಾಮೀಜಿ ಹೇಳಿಕೆ
Published : 30 ಸೆಪ್ಟೆಂಬರ್ 2024, 5:19 IST
Last Updated : 30 ಸೆಪ್ಟೆಂಬರ್ 2024, 5:19 IST
ಫಾಲೋ ಮಾಡಿ
Comments

ಕಲಬುರಗಿ: ‘ಶರಣರ, ಅನುಭಾವಿಗಳ ಹಾಗೂ ವೈಚಾರಿಕರ ದೃಷ್ಟಿಯಲ್ಲಿ ಎಲ್ಲಿ ಮಾನವೀಯ ಮೌಲ್ಯಗಳಾದ ಪ್ರೀತಿ, ದಯೆ, ಅಂತಃಕರಣ ಇರುತ್ತವೆಯೋ, ಬಿದ್ದವರನ್ನು ಎತ್ತುವ, ಬಡವರಿಗೆ ತುತ್ತು ಅನ್ನ ಹಾಕುವ ಮನೋಭಾವ ಇರುತ್ತದೆಯೋ ಅದೇ ಧರ್ಮ’ ಎಂದು ಮುಗಳನಾಗಾಂವದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೇವಾ ಭಾರತಿ ಟ್ರಸ್ಟ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸೇವಾ ಭಾರತಿ ರಜತ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ದಯವಿಲ್ಲದ ಧರ್ಮವದಾವುದಯ್ಯ, ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸೇವಾ ಭಾರತಿ ಟ್ರಸ್ಟ್‌ ಬಡ, ಅನಾಥ ಮಕ್ಕಳಿಗೆ ದಾರಿದೀಪವಾಗುತ್ತಿದೆ’ ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ಹಾಗೂ ಸೇವಾ ಭಾರತಿ ರಜತ ಮಹೋತ್ಸವ ಸಮಾರೋಪ ಸಮಿತಿ ಅಧ್ಯಕ್ಷರೂ ಆದ ದಾಕ್ಷಾಯಣಿ ಎಸ್‌.ಅಪ್ಪ ಮಾತನಾಡಿ, ‘ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡುವ ಮೂಲಕ ಟ್ರಸ್ಟ್‌ ದೇಶದ ಭದ್ರ ಭವಿಷ್ಯಕ್ಕಾಗಿ ಕೊಡುಗೆ ನೀಡುತ್ತಿದೆ’ ಎಂದು ಬಣ್ಣಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಸೇವಾ ಭಾರತಿ ರಜತ ಮಹೋತ್ಸವ ಸಮಾರೋಪ ಸಮಿತಿ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ‘ವಿದ್ಯಾಭ್ಯಾಸದಿಂದಲೇ ಪ್ರಗತಿ ಸಾಧ್ಯ. ಸಂಸ್ಕಾರದ ಜೊತೆಗೆ ಅಕ್ಷರ ಜ್ಞಾನ ನೀಡುತ್ತಿರುವ ಟ್ರಸ್ಟ್‌ ಕಾರ್ಯ ಮುಂದುವರಿಯಲಿ. ಮುಂದಿನ 25 ವರ್ಷಗಳಲ್ಲಿ ಕೊಳಚೆ ಪ್ರದೇಶಗಳಲ್ಲಿ ಶಿಕ್ಷಣ ವಂಚಿತರ ಸಂಖ್ಯೆ ಶೂನ್ಯವಾಗಲಿ’ ಎಂದರು.

ಹುಬ್ಬಳ್ಳಿ ಸೇವಾ ಭಾರತಿ ಟ್ರಸ್ಟ್‌ ಕಾರ್ಯದರ್ಶಿ ರಘು ಅಕಮಂಚಿ ಮಾತನಾಡಿ, ‘ಕಲಬುರಗಿ ನಗರದ ಸ್ಲಂ ಪ್ರದೇಶದ ಮಕ್ಕಳಿಗಾಗಿ 25 ಕಡೆ ಉಚಿತ ಮನೆಪಾಠ ಹಾಗೂ ಸಂಸ್ಕಾರ ಕೇಂದ್ರಗಳನ್ನು ತೆರೆಯಲಾಗಿದೆ. 25 ವರ್ಷಗಳ ಈ ಅವಧಿಯಲ್ಲಿ ಅನೇಕರು ಎಂಜಿನಿಯರಿಂಗ್‌, ಮೆಡಿಕಲ್‌ ಸೀಟುಗಳನ್ನು ಪಡೆದಿದ್ದಾರೆ. ಶಾಲೆಯನ್ನು ಅರ್ಧಕ್ಕೆ ಬಿಡದೇ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ’ ಎಂದರು.

ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಅನಿಲಕುಮಾರ ಬಿಡವೆ ಮಾತನಾಡಿ, ‘ಮಕ್ಕಳು ಶಿವಸ್ವರೂಪಿ ಎಂದು ಭಾವಿಸಿ ಸೇವಾ ಭಾರತಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಹೇಳಿದರು.

ಸೇವಾ ಭಾರತಿ ಟ್ರಸ್ಟ್‌ ಹುಬ್ಬಳ್ಳಿ ಅಧ್ಯಕ್ಷ ಪೂರ್ಣಚಂದ್ರರಾವ ಘಂಟಸಾಲ, ಶ್ರೀಸಾಯಿ ಅರ್ಥ್‌ ಮೂವರ್ಸ್‌ ಮಾಲೀಕ ಅಭಿಲಾಷ ಹೇಮನೂರ, ಉದ್ಯಮಿ ಉಮೇಶ ತಳವಾರ ಉಪಸ್ಥಿತರಿದ್ದರು.

ಟ್ರಸ್ಟ್‌ ವಿಶ್ವಸ್ಥ ರಮೇಶ ಜಿ.ತಿಪ್ಪನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಜ ಬೀರಬಿಟ್ಟೆ ಪ್ರಾರ್ಥಿಸಿದರು. ನಾಗರಾಜ ಜಿ. ಸ್ವಾಗತಿಸಿದರು. ಗುರುರಾಜ ದೇಶಪಾಂಡೆ ನಿರೂಪಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT