ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಗದ ಎಫ್‌ಆರ್‌ಪಿ, ಎಸ್‌ಎಪಿ: ದುಃಸ್ಥಿತಿಯಲ್ಲಿ ಕಬ್ಬು ಬೆಳೆಗಾರ- ಡಿ.ರವಿಂದ್ರನ್

ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನ; ಡಿ.ರವಿಂದ್ರನ್ ಕಳವಳ
Published : 30 ಸೆಪ್ಟೆಂಬರ್ 2024, 5:18 IST
Last Updated : 30 ಸೆಪ್ಟೆಂಬರ್ 2024, 5:18 IST
ಫಾಲೋ ಮಾಡಿ
Comments

ಕಲಬುರಗಿ: ‘ತಮಿಳುನಾಡು, ಕೇರಳ ರಾಜ್ಯಗಳಿಗಿಂತ ಉತ್ತಮ ಇಳುವರಿ ಇದ್ದರೂ ಕರ್ನಾಟಕದ ಕಬ್ಬು ಬೆಳೆಗಾರರು ಇಳುವರಿಗೆ ತಕ್ಕಂತೆ ಎಫ್‌ಆರ್‌ಪಿ (ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ) ಪಡೆಯುತ್ತಿಲ್ಲ. ರಾಜ್ಯ ಸರ್ಕಾರದಿಂದಲೂ ಎಸ್‌ಎಪಿ (ರಾಜ್ಯ ಸಲಹಾ ಬೆಲೆ) ದೊರೆಯುತ್ತಿಲ್ಲ. ನ್ಯಾಯಯುತವಾದ ಬೆಲೆ ಪಡೆಯದ ಕಬ್ಬ ಬೆಳೆಗಾರರು ದುಃಸ್ಥಿತಿಗೆ ತಲುಪಿದ್ದಾರೆ’ ಎಂದು ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಿ.ರವಿಂದ್ರನ್ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಆಯೋಜಿಸಿದ್ದ ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಶೇ 8.5ರಷ್ಟು ಇಳುವರಿ ಹೊಂದಿರುವ ತಮಿಳುನಾಡು ಬೆಳೆಗಾರರು ಪ್ರತಿ ಟನ್‌ ಕಬ್ಬಿಗೆ ₹2,750, ಕೇರಳದವರು ₹2,870 ಪಡೆಯುತ್ತಿದ್ದಾರೆ. ಶೇ 10ಕ್ಕೂ ಅಧಿಕ ಇಳುವರಿ ಹೊಂದಿರುವ ಕರ್ನಾಟಕದ ಬೆಳೆಗಾರರು ಬಹಳ ಕಡಿಮೆ ಬೆಲೆ ಪಡೆಯುತ್ತಿದ್ದಾರೆ. ಆದರೂ ಎಸ್‌ಎಪಿ ಕಾಯ್ದೆ ಜಾರಿ ಮಾಡುವಂತೆ ದೊಡ್ಡ ಮಟ್ಟದ ಹೋರಾಟಗಳು ಯಾಕೆ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಕರ್ನಾಟಕದಲ್ಲಿ ಪ್ರಸ್ತುತ ಸುಮಾರು 74 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ 13 ಸಹಕಾರಿ ತತ್ವದ ಕಾರ್ಖಾನೆಗಳು ಬಿಟ್ಟರೆ ಬಹುತೇಕವು ಖಾಸಗಿ ಒಡೆತನದಲ್ಲಿವೆ. ಖಾಸಗಿಯವರು ಬೆಳೆಗಾರರಿಗೆ ನ್ಯಾಯಯುತವಾದ ಬೆಲೆ ಕೊಡದೆ ಮೋಸ ಮಾಡುತ್ತಿದ್ದಾರೆ. ಬೆಳೆ ವೆಚ್ಚ ಅಂದಾಜು ಸಮಿತಿ ಪ್ರಕಾರ ಒಂದು ಟನ್ ಕಬ್ಬ ಬೆಳೆಯಲು ₹ 2,700ರಿಂದ ₹2,900 ವೆಚ್ಚವಾಗುತ್ತದೆ. ಬೆಳೆಗಾರರು ಕಡಿಮೆ ದರ ಪಡೆದು ಸಂಕಷ್ಟಕ್ಕೆ ಸಿಲುಕುವುದಕ್ಕಿಂತ ನ್ಯಾಯಯುತ ಬೆಲೆ ಪಡೆಯಲು ಹೋರಾಟ ಮಾಡಬೇಕು’ ಎಂದು ಸಲಹೆ ನೀಡಿದರು.

‘ಕಬ್ಬು ಬೆಳೆಗಾರರ ಹಿತಕಾಯಲು ಹರಿಯಾಣ, ಪಂಜಾಬ್ ಮಾದರಿಯಲ್ಲಿ ಎಸ್‌ಎಪಿ ಕಾಯ್ದೆಯನ್ನು ಜಾರಿಗೆ ತರಬೇಕು. ಶೇ 9.5ರಷ್ಟು ಇಳುವರಿ ಇರುವ ಪ್ರತಿ ಟನ್‌ ಕಬ್ಬಿಗೆ ₹5,500 ಬೆಲೆ ನಿಗದಿ ಮಾಡಬೇಕು. ಕಬ್ಬಿನ ಉಪ ಉತ್ಪನ್ನಗಳ ಮೂಲಕ ಗಳಿಸುವ ಲಾಭದಲ್ಲಿ ಶೇ 50ರಷ್ಟು ಲಾಭಾಂಶವನ್ನು ಕಡ್ಡಾಯವಾಗಿ ರೈತರಿಗೆ ಪಾವತಿ ಮಾಡುವಂತೆ ಕಾನೂನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಟಿ.ಯಶವಂತ ಮಾತನಾಡಿ, ‘ರಾಜ್ಯ ಸರ್ಕರವು ಎಫ್‌ಆರ್‌ಪಿ ಜತೆಗೆ ಎಥೆನಾಲ್‌ ಇರುವ ಕಡೆ ಪ್ರತಿ ಟನ್‌ಗೆ ₹150 ಹಾಗೂ ಎಥೆನಾಲ್‌ ಇಲ್ಲದ ಕಾರ್ಖಾನೆಯವರು ₹100 ನೀಡಬೇಕು ಎಂಬ ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರದ ಕಾರ್ಖಾನೆಗಳ ಮಾಲೀಕರ ಪರವಾದ ಧೋರಣೆ ಹಾಗೂ ಕಾರ್ಖಾನೆಗಳ ಮಾಲೀಕರು ರಾಜಕೀಯದ ಮೇಲೆ ಹೊಂದಿರುವ ಹಿಡಿತದಿಂದಾಗ ಎಥೆನಾಲ್ ಮೇಲಿನ ಹಣ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಕಬ್ಬು ಬೆಳೆಗಾರ ಸಂಘ ಕಟ್ಟಿ ಹೋರಾಟ ಮಾಡಬೇಕಾಯಿತು’ ಎಂದರು.

ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು.

ಸಮ್ಮೇಳನದಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂ.ಬಿ. ಸಜ್ಜನ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ, ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸುಧಾಮ್ ಧನ್ನಿ, ಪ್ರಾಂತ ಕೃಷಿ ಕೂಲಿಕಾರ ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಎಂಪಳ್ಳಿ, ಶ್ರೀಮಂತ ಬಿರಾದಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT