ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಜೆ ಮುಂದೆ ಬ್ಯಾಂಡ್ ಸದ್ದು ಕ್ಷೀಣ

ನಗರ ಸಂಚಾರ
ಫಾಲೋ ಮಾಡಿ
Comments

ಕಲಬುರ್ಗಿ: ಮದುವೆ, ಮುಂಜಿ ಮೊದಲಾದ ಶುಭ ಕಾರ್ಯಗಳಿರಲಿ, ಮೆರವಣಿಗೆ, ಜಾತ್ರೆ, ಪಲ್ಲಕ್ಕಿ ಉತ್ಸವವಿರಲಿ. ಈ ಕಾರ್ಯಕ್ರಮಗಳಿಗೆ ರಾಜ ಗಾಂಭೀರ್ಯ ಸಿಗಬೇಕಾದರೆ ಬ್ಯಾಂಡ್ ಮೇಳ ಬೇಕೆ ಬೇಕು. ಮಂಗಳವಾದ್ಯಗಳ ಸಾಲಿಗೆ ಸೇರುವ ಬ್ಯಾಂಡ್ ತನ್ನದೇ ಶಬ್ದ ವೈಖರಿಯಿಂದ ಸಮಾರಂಭಗಳಿಗೆ ಕಳೆ ನೀಡುತ್ತದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಂತೂ ಮದುವೆಗೆ ಬ್ಯಾಂಡ್, ಬ್ಯಾಂಜೋ ಮೇಳ ಇರಲೇ ಬೇಕು.

ಇಂದು ಆಧುನಿಕ ಧ್ವನಿವರ್ಧಕ, ಡಿಜೆಯಂಥ ಹಾಡು ಕುಣಿತಕ್ಕೆ ಯುವ ಜನರು ಹೆಚ್ಚು ಆಕರ್ಷಿತರಾಗುವುದರಿಂದ ಸಾಂಪ್ರದಾಯಿಕ ಬ್ಯಾಂಡ್ ಮೇಳದವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕಿದೆ.

ಕಲಬುರ್ಗಿ ನಗರದಲ್ಲಿ 60ಕ್ಕಿಂತಲೂ ಹೆಚ್ಚು ಬ್ಯಾಂಡ್ ಕಂಪೆನಿಗಳಿವೆ. ಸಾಂಪ್ರದಾಯಿಕವಾಗಿ ಇದೇ ವೃತ್ತಿಯನ್ನು ನಡೆಸಿಕೊಂಡು ಬರುತ್ತಿರುವ ಇವರು ಕುಲಕಸುಬು ಎಂಬ ಕಾರಣಕ್ಕೆ ಈ ಕಾಯಕ ಮುಂದುವರಿಸುತ್ತಿದ್ದಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಗೂ ತೆರಳಿ ಬ್ಯಾಂಡ್ ನುಡಿಸುತ್ತಾರೆ. ಸಾಮಾನ್ಯವಾಗಿ ಒಂದು ಕಾರ್ಯಕ್ರಮಕ್ಕೆ ಇವರು ₨4-ರಿಂದ 5ಸಾವಿರ ಪಡೆದುಕೊಳ್ಳುತ್ತಾರೆ. ಬ್ಯಾಂಜೋ ಆದರೆ ₨6 ಸಾವಿರ ಪಡೆಯುತ್ತಾರೆ.

ಒಂದು ಬ್ಯಾಂಡ್ ಮೇಳದಲ್ಲಿ ಐದು ಜನರಿರುತ್ತಾರೆ. ಒಂದೇ ರೀತಿಯ ಸಮವಸ್ತ್ರ ಧರಿಸಿ ಶಿಸ್ತುಬದ್ಧವಾಗಿ ವಾದ್ಯೋಪಕರಣ ನುಡಿಸುವ ಇವರು ಕಾರ್ಯಕ್ರಮಗಳಿಗೆ ಮೆರುಗು ನೀಡುತ್ತಾರೆ. ಬ್ಯಾಂಡ್, ಡೋಲು, ತಾಸೆ, ಟ್ರಂಪೆಟ್, ಕ್ಲಾರ್ನೆಟ್ ಹಾಗೂ ಗೆಜ್ಜೆ ಇವು ಬ್ಯಾಂಡ್ ಮೇಳದಲ್ಲಿ ನುಡಿಸುವ ಸಂಗೀತೋಪಕರಣಗಳು. ಈ ವಾದ್ಯೋಪಕರಣಗಳ ಮೂಲಕ ಇವರು ಸಿನೆಮಾ, ಜನಪದ ಹಾಡುಗಳನ್ನು, ಭಜನೆ ಪದಗಳನ್ನು ಸುಶ್ರಾವ್ಯವಾಗಿ ನುಡಿಸುತ್ತಾ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.

ಬ್ಯಾಂಡ್ ಮೇಳ ಮನಸ್ಸಿಗೆ ಮುದ ನೀಡಿದರೆ. ನೂರಾರು ಡೆಸಿಬಲ್ ಸಾಮರ್ಥ್ಯದ ಶಬ್ದ ಹೊರಹೊಮ್ಮಿಸುವ ಡಿಜೆ ಮನುಷ್ಯನ ಆರೋಗ್ಯಕ್ಕೂ ಕಂಟಕವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವವರಿಗೆ ಡಿಜೆ ಮಾರಕವಾಗಿ ಪರಿಣಮಿಸಬಹುದು. ಇದೇ ಕಾರಣಕ್ಕೆ ಮಹಾರಾಷ್ಟ್ರ ಸೇರಿದಂತೆ ಕೆಲವು ಮಹಾನಗರಗಳಲ್ಲಿ ಮೆರವಣಿಗೆ ವೇಳೆ ಡಿಜೆಯನ್ನು ನಿಷೇಧಿಸಲಾಗಿದೆ. ಆದರೆ ಕಲಬುರ್ಗಿಯಲ್ಲಿ ಇದರ ಬಳಕೆ ವಿಪರೀತವಾಗಿದೆ. ಮಹಾತ್ಮರ ಜಯಂತಿ ಇರಲಿ ಇತರ ಕಾರ್ಯಕ್ರಗಳಿರಲಿ ಡಿಜೆಯ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಮಧ್ಯರಾತ್ರಿ 12 ಗಂಟೆ ದಾಟಿದ ಬಳಿಕವೂ ಇಲ್ಲಿ ಇದು ಮಾಮೂಲಾಗಿದೆ.

ಆದರೆ ಬ್ಯಾಂಡ್ ಮೇಳ ಎಂದೂ ಜನರ ನೆಮ್ಮದಿ ಕೆಡಿಸುವುದಿಲ್ಲ. ಹಿಂದೆ ಬ್ಯಾಂಡ್ ಮೇಳವನ್ನೇ ಕುಲಕಸುಬನ್ನಾಗಿ ಸ್ವೀಕರಿಸಿ ಬದುಕು ಸಾಗಿಸುತ್ತಿದ್ದವರು ಇಂದು ಉಪವೃತ್ತಿಯಾಗಿ ಆಟೊ ರಿಕ್ಷಾ ಚಾಲನೆ, ಗೌಂಡಿ ಕೆಲಸ, ಪೇಂಟಿಂಗ್ ಮೊದಲಾದವುದಗಳಿಗೆ ಮೊರೆ ಹೋಗಬೇಕಾದ ಪರಿಸ್ಥಿತಿಯಿದೆ.

‘ಬೇಸಿಗೆ ಕಾಲದಲ್ಲಿ ಎರಡೊ ಮೂರೋ ತಿಂಗಳು ಸೀಸನ್ ಇರುತ್ತದೆ. ಈ ಸಂದರ್ಭದಲ್ಲಿ ಕೈತುಂಬ ಕೆಲಸ. ಉಳಿದ ಕಾಲದಲ್ಲಿ ಬ್ಯಾಂಡ್ ನುಡಿಸುವುದರ ಜೊತೆಗೆ ಬೇರೆ ಕಸುಬು ನಡೆಸುವ ಅನಿವಾರ್ಯ ಇದೆ’ ಎನ್ನುತ್ತಾರೆ ಬ್ಯಾಂಡ್ ನುಡಿಸುವ ಅಭಿಷೇಕ್.

‘ಒಂದು ಬ್ಯಾಂಡ್ ಕಂಪೆನಿಯಲ್ಲಿ15-ರಿಂದ 20 ಮಂದಿ ಕೆಲಸ ಮಾಡುತ್ತಾರೆ. ಇವರಲ್ಲಿ ₨6ಸಾವಿರ ದಿಂದ ₨15ಸಾವಿರ ವರೆಗೆ ಸಂಬಳ ಪಡೆಯುವವರಿದ್ದಾರೆ. ಇವರಿಗೆಲ್ಲ ಸಂಬಳ ನೀಡಿ ಉಳಿದ ಖರ್ಚು ಭರಿಸಿದಾಗ ಸಿಗುವ ಲಾಭ ಅಷ್ಟಕಷ್ಟೆ. ಈಗ ಡಿಜೆ ಬಂದು ನಮ್ಮ ಹೊಟ್ಟೆ ಮೇಲೆ ಹೊಡೆತ ಬಿದ್ದಿದೆ’ ಎನ್ನುತ್ತಾರೆ ಶ್ರೀ ಸರಸ್ವತಿ ಬ್ಯಾಂಡ್ ಕಂಪೆನಿಗಳ ಮಾಲಕರ ಸಂಘದ ಅಧ್ಯಕ್ಷ ಹನುಮಂತ ಬಜಂತ್ರಿ.

‘ಈ ಹಿಂದೆ ಜಿಲ್ಲಾಧಿಕಾರಿಗೆ ನಾವು ಮನವಿ ಸಲ್ಲಿಸಿದ್ದರಿಂದ ಇಲ್ಲಿ ಡಿಜೆ ಬಳಕೆಗೆ ನಿರ್ಬಂಧ ಹೇರಲಾಗಿತ್ತು. ಈಗ ಮತ್ತೆ ಡಿಜೆ ಬಳಕೆ ಅವ್ಯಾಹತವಾಗಿ ನಡೆಯುತ್ತಿದೆ. ಮೊದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯುತ್ತಿದ್ದ ಕಾರ್ಯಕ್ರಮಗಳ ಮೆರವಣಿಗೆಗೆ ನಮ್ಮನ್ನು ಕರೆಯುತ್ತಿದ್ದರು. ಈಗ ಅದನ್ನೂ ನಿಲ್ಲಿಸಿದ್ದಾರೆ. ನಮಗೆ ಪ್ರೋತ್ಸಾಹವೇ ನೀಡುವವರಿಲ್ಲ’
ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT