ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬದುಕು ಮಿನುಗಿಸಿದ ‘ಕರಿಮಣಿ’

ಫಾಲೋ ಮಾಡಿ
Comments

ಕಲಬುರ್ಗಿ: ಕರಿಮಣಿ, ಮಾಂಗಲ್ಯ ಸರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಇಂದಿನ ಫ್ಯಾಷನ್ ಯುಗದಲ್ಲೂ ಕರಿಮಣಿ ಸರ ತನ್ನ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿದೆ. ಇಂತಹ ಕರಿಮಣಿಗಳನ್ನು ಪೋಣಿಸುವ ಕಾಯಕದಲ್ಲೇ ಜೀವನ ನಿರ್ವಹಣೆ ಮಾರ್ಗ ಕಂಡುಕೊಂಡಿರುವವರು ಕಲಬುರ್ಗಿ ನಗರದಲ್ಲಿದ್ದಾರೆ.

ನಗರದ ಸರಾಫ್‌ ಬಜಾರ್‌ನ  ಚಿನ್ನದಂಗಡಿಗಳ ಮುಂಭಾಗವೇ ಇವರ ಕಾರ್ಯಕ್ಷೇತ್ರ. ಬಗೆ ಬಗೆಯ ಗಾತ್ರದ ಕರಿಮಣಿಗಳನ್ನು ಹರಡಿಕೊಂಡು, ಬಣ್ಣ ಬಣ್ಣದ ದಾರಗಳೊಂದಿಗೆ ಇವರು ಕುಳಿತಿರುತ್ತಾರೆ. ಗ್ರಾಹಕರು ತಾವು ತರುವ ಚಿನ್ನದ ತಾಳಿ, ಚಿನ್ನದ ಗುಂಡುಗಳನ್ನು ಪೋಣಿಸಿ ಮಾಲೆ ತಯಾರಿಸಿ ಕೊಡಲು ಇವರಿಗೆ ನೀಡುತ್ತಾರೆ. ಇಲ್ಲಿ ವಿಶ್ವಾಸವೇ ಮುಖ್ಯವಾಗುತ್ತದೆ.

ಗ್ರಾಹಕರು ವಿಶ್ವಾಸದಿಂದ ತಾವು ತಂದಂತಹ ಚಿನ್ನದ ವಸ್ತುಗಳನ್ನು ಇವರಿಗೆ ನೀಡುತ್ತಾರೆ. ಇವರೂ ಅಷ್ಟೆ ಜತನದಿಂದ ಚಿನ್ನದ ತಾಳಿ, ಗುಂಡುಗಳೊಂದಿಗೆ ಕರಿಮಣಿಗಳನ್ನು ಸೇರಿಸಿ ಸುಂದರವಾದ ಮಾಂಗಲ್ಯ ಸರ ತಯಾರಿಸಿಕೊಂಡುತ್ತಾರೆ.

ಬರೀ ಕರಿಮಣಿ ಮಾತ್ರವಲ್ಲ ಮಕ್ಕಳ ಕೊರಳಿಗೆ ಹಾಕುವ ದೃಷ್ಟಿ ಮಣಿ, ಹೈದರಾಬಾದ್ ಮುತ್ತುಗಳನ್ನೂ ದಾರದಲ್ಲಿ ಪೋಣಿಸಿ ಇವರು ಸುಂದರವಾದ ಮಾಲೆಗಳನ್ನು ತಯಾರಿಸುತ್ತಾರೆ. ಹಲವು ವರ್ಷಗಳಿಂದ ಇದೇ ವೃತ್ತಿಯನ್ನು ನಡೆಸುತ್ತಿದ್ದೇವೆ ಎನ್ನುವ ಇವರು ನಂಬಿದ ಈ ವೃತ್ತಿ ಎಂದೂ ಮೋಸ ಮಾಡಿಲ್ಲ ಎನ್ನುತ್ತಾರೆ. ಸರಾಫ್‌ ಬಜಾರ್‌ಗೆ ಬಂದು ಚಿನ್ನದ ಆಭರಣಗಳನ್ನು ಖರೀದಿಸಲು ಬರುವ ಗ್ರಾಹಕರು ಇವರಲ್ಲಿಗೆ ಬಂದು ಕರಿಮಣಿ, ಮುತ್ತಿನ ಸರ ಪೋಣಿಸಿಕೊಂಡು ಹೋಗುತ್ತಾರೆ. ಸುಮಾರು ಹದಿನೈದು ಮಂದಿ ಇಲ್ಲಿ ಇದೇ ವೃತ್ತಿ ನಡೆಸುತ್ತಾರೆ.

ಸೂಪರ್ ಮಾರ್ಕೆಟ್‌ನ ಕೆಲ ವ್ಯಾಪಾರಿಗಳು ಮಹಾರಾಷ್ಟ್ರದಿಂದ ಕರಿಮಣಿಗಳನ್ನು ತರಿಸುತ್ತಾರೆ. ಅವರಿಂದ ಮಣಿ ಖರೀದಿಸುವ ಇವರು ತಮ್ಮ ವೃತ್ತಿ ನಿರ್ವಹಿಸುತ್ತಾರೆ. ಈ ವೃತ್ತಿಯೇ ಇವರ ಜೀವನಾಧಾರವೂ ಹೌದು. ಪ್ರತಿ ದಿವಸ ಕೈತುಂಬ ಕೆಲಸ ಇರುತ್ತದೆ ಎನ್ನುತ್ತಾರೆ ಕರಿಮಣಿ ಪೋಣಿಸುವ ಕೆಲಸಗಾರರು.

‘ಒಂದು ಕರಿಮಣಿಸರ ಪೋಣಿಸಿ ಕೊಡಲು ₹40ರಿಂದ ₹80ರ ವರೆಗೆ ಪಡೆದುಕೊಳ್ಳುತ್ತೇವೆ. ಮಾಲೆಯ ಅಳತೆಗನುಸಾರವಾಗಿ ಬೆಲೆ ನಿಗದಿ ಮಾಡುತ್ತೇವೆ. ಒಂದು ಕರಿಮಣಿಯಲ್ಲಿ ಏಳು ಬಗೆಯ ಮಣಿಗಳು ಬರುತ್ತವೆ. ಒಂದು ಸೆಟ್ ಕರಿಮಣಿಗೆ ₹10ರಿಂದ ₹50ರ ವರೆಗಿದೆ. ಕೆಲವೊಂದು ಕರಿಮಣಿ ಸರಕ್ಕೆ ನಾಲ್ಕು ಸೆಟ್ ಕರಿಮಣಿ ಬಳಸುತ್ತೇವೆ.

ಮದುವೆ ಸೀಸನ್‌ನಲ್ಲಿ ಬಿಡುವಿಲ್ಲದಷ್ಟು ಕೆಲಸ ಇರುತ್ತದೆ. ಒಂದು ಕರಿಮಣಿ ಸರ ಪೋಣಿಸಲು 15ರಿಂದ20 ನಿಮಿಷಬೇಕು.  ಎಲ್ಲ ಸಮುದಾಯದವರು ಕರಿಮಣಿಸರ ಧರಿಸುವುದರಿಂದ ಇದಕ್ಕೆ ಬೇಡಿಕೆ ಹೆಚ್ಚಿದೆ. ಗ್ರಾಮೀಣ ಪ್ರದೇಶದ ಗ್ರಾಹಕರು ಹೆಚ್ಚಾಗಿ ಬರುತ್ತಾರೆ’ ಎನ್ನುತ್ತಾರೆ ಕರಿಮಣಿಸರ ಪೋಣಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಇಸ್ಮಾಯಿಲ್ ಪಟೇಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT