ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಟಿಇಟಿಗೆ 520 ಮಂದಿ ಗೈರು

ಜಿಲ್ಲೆಯ 14 ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ
Published 30 ಜೂನ್ 2024, 14:31 IST
Last Updated 30 ಜೂನ್ 2024, 14:31 IST
ಅಕ್ಷರ ಗಾತ್ರ

ಕೋಲಾರ: ನಗರದ 14 ಕೇಂದ್ರಗಳಲ್ಲಿ ಭಾನುವಾರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆದಿದ್ದು, ಎರಡು ಅವಧಿಯ ಪರೀಕ್ಷೆ ಸೇರಿ ಒಟ್ಟು 520 ಮಂದಿ ಗೈರಾಗಿದ್ದರು.

ಬೆ‌ಳಿಗ್ಗೆ ನಡೆದ ಮೊದಲ ಅಧಿವೇಶನದ ಪರೀಕ್ಷೆಯ ಪತ್ರಿಕೆ-1ಕ್ಕೆ ನೋಂದಾಯಿಸಿದ್ದ 2,141 ಮಂದಿ ಪೈಕಿ 1,891 ಅಭ್ಯರ್ಥಿ ಹಾಜರಾಗಿ 251 ಮಂದಿ ಗೈರಾಗಿದ್ದರು. ಮಧ್ಯಾಹ್ನ ನಡೆದ 2ನೇ ಅಧಿವೇಶನದ ಪತ್ರಿಕೆ-2ಕ್ಕೆ ನೋಂದಾಯಿಸಿದ್ದ 3,394 ಮಂದಿ ಪೈಕಿ 3,125 ಮಂದಿ ಹಾಜರಾಗಿದ್ದು, 269 ಮಂದಿ ಗೈರಾಗಿದ್ದರು.

ಪತ್ರಿಕೆ-1ರ (1ರಿಂದ 5ನೇ ತರಗತಿ ಬೋಧಿಸುವ ಶಿಕ್ಷಕರು) ಪರೀಕ್ಷೆ 9 ಕೇಂದ್ರಗಳಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಪತ್ರಿಕೆ-2ರ (6ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರು) ಪರೀಕ್ಷೆ ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ 14 ಕೇಂದ್ರಗಳಲ್ಲಿ ನಡೆಯಿತು.

ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.

ಎರಡೂ ಅವಧಿಯ ಟಿಇಟಿ ಪರೀಕ್ಷೆಗಳು ಯಾವುದೇ ಗೊಂದಲ ಹಾಗೂ ಅವ್ಯವಹಾರ ಇಲ್ಲದೆ ಸುಗಮವಾಗಿ ನಡೆದಿವೆ. ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿತ್ತು.
ಕೃಷ್ಣಮೂರ್ತಿ, ಡಿಡಿಪಿಐ

ಗೋಪ್ಯ ಸಾಮಗ್ರಿಗಳನ್ನು ಖಜಾನೆಯಲ್ಲಿ ಸಂರಕ್ಷಿಸಲು ಜಿಲ್ಲಾಧಿಕಾರಿಗಳೇ ರಚಿಸಿದ್ದ ತ್ರಿಸದಸ್ಯ ಸಮಿತಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಯನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ತಲುಪಿಸುವ ಕಾರ್ಯ ನಡೆಸಿದ್ದು, ಸಮಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಡಿಡಿಪಿಐ ಕೃಷ್ಣಮೂರ್ತಿ ಇದ್ದರು

ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ಡಿಡಿಪಿಐ ಕೃಷ್ಣಮೂರ್ತಿ ವಿವಿಧ ಕೇಂದ್ರಗಳಿಗೆ ತೆರಳಿ ಪರಿಶೀಲಿಸಿದರು. ಪರೀಕ್ಷಾ ಉಸ್ತುವಾರಿಯನ್ನು ಡಿಡಿಪಿಐ, ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ ವಹಿಸಿದ್ದು, ಡಯಟ್ ಪ್ರಾಂಶುಪಾಲ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು.

ಕೈಕೊಟ್ಟ ವಿದ್ಯುತ್!

ತುರ್ತು ದುರಸ್ತಿ ಕಾರ್ಯದಿಂದಾಗಿ ಕೋಲಾರ ನಗರದಲ್ಲಿ ವಿದ್ಯುತ್‌ ಇರಲಿಲ್ಲ. ಬೆಳಿಗ್ಗೆ 9 ಗಂಟೆಗೆ ಹೋದ ವಿದ್ಯುತ್‌ ಬಂದಿದ್ದೇ ಸಂಜೆ 6 ಗಂಟೆಗೆ. ಹೀಗಾಗಿ ಪರೀಕ್ಷೆಗೂ ವಿದ್ಯುತ್‌ ಕೈಕೊಟ್ಟಿತು. ಈ ಕಾರಣ ಪರೀಕ್ಷಾ ಕೇಂದ್ರಗಳಲ್ಲಿ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಾರದರ್ಶಕವಾಗಿ ಯಾವುದೇ ಅವ್ಯವಹಾರ ನಡೆಯದಂತೆ ಎಲ್ಲಾ ಕೇಂದ್ರಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮರಾ ವ್ಯವಸ್ಥೆ ಮತ್ತು ವೆಬ್ ಕಾಸ್ಟಿಂಗ್‍ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT