ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಪರಮಾತ್ಮ ಆಡಿಸಿದಂತೆ…

Published 1 ಜುಲೈ 2024, 19:01 IST
Last Updated 1 ಜುಲೈ 2024, 19:01 IST
ಅಕ್ಷರ ಗಾತ್ರ

‘ಸೋರುತಿಹುದು ಮನೆಯ ಮಾಳಿಗೆ...’ ಷರೀಫಜ್ಜನ ಹಾಡನ್ನು ಹಾಡುತ್ತಾ ಒಳ ಬಂದೆ.

‘ಬಂದ್ರಾ, ಬನ್ನಿ, ಬನ್ನಿ’ ಎಂದ ಹೆಂಡತಿ, ‘ನಮ್ಮ ಮನೆಯ ಮಾಳಿಗೆಯೂ ಸೋರುತಿದೆ, ನೋಡಿದಿರಾ?’ ಕೇಳಿದಳು. 

‘ದೇಶದಲ್ಲಿ ನೀಟ್‌-ನೆಟ್‌ ಪೇಪರ್‌ಗಳೇ ಸೋರುತ್ತಿವೆ. ನಮ್ಮ ಮನೆ ಯಾವ ಲೆಕ್ಕ ಬಿಡಮ್ಮ?’ ಹೇಳಿದೆ ಉಡಾಫೆಯಿಂದ. 

‘ನಮ್ಮ ದೇವರ ಮನೆಯೂ ಸೋರುತ್ತಿದೆ’ 

‘ಅಂಥ ಅಯೋಧ್ಯೆ ಶ್ರೀರಾಮದೇವರ ದೇಗುಲವೇ ಸೋರುತ್ತಿದೆಯಂತೆ, ಇನ್ನು ನಮ್ಮ ದೇವರ ಮನೆ ಸೋರದಿರುತ್ತದೆಯೇ’ 

‘ಏನಾಗಿದೆ ರೀ ನಿಮಗೆ’ ಎಂದು ರೇಗಿದ ಪತ್ನಿ, ‘ನಮ್ಮನೆ ಆವರಣದಲ್ಲಿರೋ ಗೋಡೆ ಕುಸಿದಿದೆ, ಅದಾದರೂ ಗೊತ್ತಿದೆಯಾ?’ 

‘ದೊಡ್ಡ ದೊಡ್ಡ ಸೇತುವೆಗಳೇ ಕುಸಿಯುತ್ತಿವೆ....’ ಎನ್ನುತ್ತಿದ್ದಂತೆ ಬಾಯಿ ಮುಚ್ಚಿದ ಹೆಂಡತಿ, ‘ನಮ್ಮ ಊರಿನಲ್ಲಿ ಬಸ್‌ಸ್ಟ್ಯಾಂಡ್‌ ಬಿಲ್ಡಿಂಗ್ ಕೂಡ ಸೋರುತ್ತಿದೆಯಂತೆ ’ ಎಂದಳು.  

‘ಏರ್‌ಪೋರ್ಟ್‌ಗಳೇ ಸೋರುತ್ತಿವೆ. ನಿಮ್ಮೂರಿನ ಬಸ್‌ಸ್ಟ್ಯಾಂಡ್‌ ಏನ್‌ ಮಹಾ’ ಎಂದೆ. 

‘ಒಂದಾದರೂ ಒಳ್ಳೆಯ ಸುದ್ದಿ ಹೇಳ್ರಿ’ 

‘ಆ ಪರಮಾತ್ಮ ಏನು ಹೇಳಿಸುತ್ತಿದ್ದಾನೋ ಅದನ್ನೇ ನಾನು ಹೇಳುತ್ತಿದ್ದೇನೆ’ ಎಂದೆ.

‘ಯಪ್ಪಾ, ನಿಮ್ಮ ವೇದಾಂತ ಕೇಳುವುದಕ್ಕಾಗ್ತಿಲ್ಲ ನನಗೆ. ಅದಿರಲಿ. ನಮ್ಮ ಇಂಡಿಯಾ ಟಿ20 ವಿಶ್ವಕಪ್‌ ಗೆದ್ದಿದೆ. ಅದಕ್ಕಾದರೂ ಖುಷಿ ಪಡಿ’. 

‘ಖುಷಿಯ ವಿಚಾರವೇ, ಆದರೆ ಇನ್ನು ಮುಂದೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ರವೀಂದ್ರ ಜಡೇಜ ಟಿ20 ಮ್ಯಾಚ್‌ಗಳಲ್ಲಿ ಇಂಡಿಯನ್‌ ಜೆರ್ಸಿಯಲ್ಲಿ ಕಾಣಲ್ವಲ್ಲ’ ಎಂದೆ.

‘ಇದರಲ್ಲಿಯೂ ಬೇಸರವನ್ನೇ ನೋಡಬೇಡಿ. ಯುವಕರಿಗೂ ಅವಕಾಶ ಸಿಗಲಿ ಅನ್ನೋದು ಅವರ ಆಸೆ’. 

‘ಎಲ್ಲರೂ ಹೀಗೇ ಯೋಚನೆ ಮಾಡಬೇಕು ಎಂದು ಪರಮಾತ್ಮ ನನ್ನಲ್ಲಿ ಹೇಳಿಸುತ್ತಿದ್ದಾನೆ’. 

‘ಅದೇನಾದರೂ ನಿಜವಾದರೆ, ಶೇ 90ರಷ್ಟು ರಾಜಕಾರಣಿಗಳು ರಿಟೈರ್ಡ್‌ ಆಗಬೇಕಾಗುತ್ತೆ’ ನಕ್ಕಳು ಹೆಂಡತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT