ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಸಿಇಎ ಸದಸ್ಯರಾಗಿ ಎಚ್‌.ಡಿ. ಕುಮಾರಸ್ವಾಮಿ ನೇಮಕ

Published 3 ಜುಲೈ 2024, 16:11 IST
Last Updated 3 ಜುಲೈ 2024, 16:11 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ವ್ಯವಹಾರಗಳ ಮಹತ್ವದ ಸಂಪುಟ ಸಮಿತಿಯ (ಸಿಸಿಇಎ) ಸದಸ್ಯರಾಗಿ ಭಾರಿ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯ ನಂತರ ತಮ್ಮ ಬದಲಾದ ರಾಜಕೀಯ ನಡೆ ಪ್ರತಿಬಿಂಬಿಸುವ ರೀತಿಯಲ್ಲಿ ಮಿತ್ರಪಕ್ಷಗಳ ಸಚಿವರನ್ನು ಒಳಗೊಂಡಂತೆ ಉನ್ನತ ಮಟ್ಟದ ಎಂಟು ಸಂಪುಟ ಸಮಿತಿಗಳನ್ನು ಬುಧವಾರ ಪುನರ್ ರಚಿಸಿದ್ದಾರೆ.

ಭದ್ರತೆ, ನೇಮಕಾತಿಗಳು ಮತ್ತು ವಸತಿಗಾಗಿ ಸಂಪುಟ ಸಮಿತಿಗಳನ್ನು ಹೊರತುಪಡಿಸಿ, ಆರ್ಥಿಕ ವ್ಯವಹಾರಗಳು, ಸಂಸದೀಯ ವ್ಯವಹಾರಗಳು, ರಾಜಕೀಯ ವ್ಯವಹಾರಗಳು, ಹೂಡಿಕೆ ಮತ್ತು ಬೆಳವಣಿಗೆ ಮತ್ತು ಕೌಶಲ, ಉದ್ಯೋಗ ಮತ್ತು ಜೀವನೋಪಾಯದ ಐದು ಕ್ಯಾಬಿನೆಟ್ ಸಮಿತಿಗಳಲ್ಲಿ ಮಿತ್ರಪಕ್ಷಗಳ ಸದಸ್ಯರಿದ್ದಾರೆ. 

ಜೆಡಿಯು, ಜೆಡಿಎಸ್‌, ಟಿಡಿಪಿ, ಆರ್‌ಎಲ್‌ಡಿ ಮತ್ತು ಎಚ್‌ಎಎಂ ಪಕ್ಷಗಳ ಸಚಿವರು ವಿವಿಧ ಸಮಿತಿಗಳ ಸದಸ್ಯರಾಗಿದ್ದಾರೆ.

ಪ್ರಧಾನಿ ನೇತೃತ್ವದ 11 ಸದಸ್ಯರ ಸಮಿತಿಯಲ್ಲಿ ಕುಮಾರಸ್ವಾಮಿಯೂ ಭಾಗವಾಗಿದ್ದಾರೆ. ಹಿರಿಯ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಶಿವರಾಜ್ ಚೌಹಾಣ್, ಎಸ್. ಜೈಶಂಕರ್, ಪೀಯೂಷ್ ಗೋಯಲ್ ಮತ್ತು ಧರ್ಮೇಂದ್ರ ಪ್ರಧಾನ್, ಜೆಡಿಯುನ ರಾಜೀವ್ ರಂಜನ್ ಲಲನ್ ಸಿಂಗ್ ಕೂಡ ಸಮಿತಿಯಲ್ಲಿದ್ದಾರೆ. 

ರಾಜನಾಥ್ ಸಿಂಗ್, ಅಮಿತ್‌ ಶಾ, ನಿರ್ಮಲಾ ಮತ್ತು ಜೈಶಂಕರ್ ಇತರರು ಸದಸ್ಯರಾಗಿರುವ ಪ್ರಧಾನಿ ನೇತೃತ್ವದ ಭದ್ರತೆಯ ಸಂಪುಟ ಸಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರಧಾನಮಂತ್ರಿ ಮತ್ತು ಗೃಹ ಸಚಿವರು ಸಂಪುಟದ ನೇಮಕಾತಿ ಸಮಿತಿಯಲ್ಲಿ ಮುಂದುವರಿದಿದ್ದಾರೆ.

ರಾಜನಾಥ್ ಅವರು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯ ಮುಖ್ಯಸ್ಥರಾಗಿ ಮುಂದುವರಿದಿದ್ದಾರೆ, ಇದರಲ್ಲಿ ಹಿಂದಿನ ಸದಸ್ಯರಾದ ಗೋಯಲ್ ಮತ್ತು ಪ್ರಲ್ಹಾದ್ ಜೋಶಿ ಅವರನ್ನು ಕೈಬಿಡಲಾಗಿದೆ. ಅನುರಾಗ್ ಠಾಕೂರ್ ಮತ್ತು ಅರ್ಜುನ್ ಮುಂಡಾ ಸಂಪುಟದಲ್ಲಿ ಇಲ್ಲ. ಟಿಡಿಪಿಯ ಕೆ. ರಾಮಮೋಹನ್ ನಾಯ್ಡು ಮತ್ತು ಲಲನ್ ಸಿಂಗ್ ಜೊತೆಗೆ ಶಾ, ಜೆ.ಪಿ. ನಡ್ಡಾ, ನಿರ್ಮಲಾ, ವೀರೇಂದ್ರ ಕುಮಾರ್, ಜುಯಲ್ ಓರಂ, ಕಿರಣ್ ರಿಜಿಜು ಮತ್ತು ಸಿ.ಆರ್. ಪಾಟೀಲ್ ಸಮಿತಿಯ ಸದಸ್ಯರಾಗಿದ್ದಾರೆ.

ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಗೆ ಮೋದಿ ಮುಖ್ಯಸ್ಥರಾಗಿದ್ದಾರೆ. ಸಂಪುಟ ದರ್ಜೆಯನ್ನು ಹೊಂದಿರದ ಕೌಶಲಾಭಿವೃದ್ಧಿ ರಾಜ್ಯ ಸಚಿವ ಜಯಂತ್ ಚೌಧರಿ ಅವರನ್ನು ಕೌಶಲ, ಉದ್ಯೋಗ ಮತ್ತು ಜೀವನೋಪಾಯದ ಸಂಪುಟ ಸಮಿತಿಯಲ್ಲಿ ವಿಶೇಷ ಆಹ್ವಾನಿತರನ್ನಾಗಿ ಸೇರಿಸಲಾಗಿದೆ. 12 ಸದಸ್ಯರ ಸಮಿತಿಯಲ್ಲಿ ಗಡ್ಕರಿ, ಮಾಂಡವಿಯಾ ಮತ್ತು ಗಜೇಂದ್ರ ಶೇಖಾವತ್ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ಎಲ್‌ಜೆಪಿಯ (ಆರ್‌ವಿ) ಚಿರಾಗ್‌ ಪಾಸ್ವಾನ್‌ ಅವರು ಹೂಡಿಕೆ ಮತ್ತು ಬೆಳವಣಿಗೆಯ ಸಂಪುಟ ಸಮಿತಿಯ ಸದಸ್ಯರಾಗಿದ್ದಾರೆ. ಮೋದಿ ಅವರ ನೇತೃತ್ವದ ಆರು ಸದಸ್ಯರ ವಸತಿ ಸಂಪುಟ ಸಮಿತಿಯಲ್ಲಿ ನಗರಾಭಿವೃದ್ಧಿ ಸಚಿವ ಎಂ.ಎಲ್. ಖಟ್ಟರ್, ಅಮಿತ್‌ ಶಾ, ಗಡ್ಕರಿ, ನಿರ್ಮಲಾ ಮತ್ತು ಗೋಯಲ್ ಸದಸ್ಯರಾಗಿದ್ದು, ಜಿತೇಂದ್ರ ಸಿಂಗ್ ವಿಶೇಷ ಆಹ್ವಾನಿತರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT