ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಗುದ್ಲಿಂಗನ ವ್ಯಥೆ!

Published 3 ಜುಲೈ 2024, 21:06 IST
Last Updated 3 ಜುಲೈ 2024, 21:06 IST
ಅಕ್ಷರ ಗಾತ್ರ

ಗುದ್ಲಿಂಗ ಮುಖ, ಮೂತಿಗೆಲ್ಲಾ ಬ್ಯಾಂಡೇಜ್ ಸುತ್ಕಂಡು ಕುಕ್ಕರಿಸಿದ್ದನ್ನು ನೋಡಿ ಮಾಲಿಂಗ ಕೇಳಿದ: ‘ಏನೋ ಇದು ನಿನ್ ಅವತಾರ? ಹೆಂಡ್ತಿ ಸರಿಯಾಗ್ ಕೊಟ್ಟಿರೋ ಹಾಗಿದೆ?’

‘ಹೆಂಡ್ತಿ ಅಲ್ಲಲೇ, ಮೊನ್ನೆ ಹಾಲಿನ್ ರೇಟ್ ಜಾಸ್ತಿ ಆಗದೆ ಅಂತ ಪಂಚಾಯಿತಿ ಆಫೀಸ್ ಮುಂದೆ ಹಸುಗಳನ್ನ ಕಟ್ಟಿ ಹಾಲು ಕರೆಯೋ ಪ್ರತಿಭಟನೆ ಹಮ್ಕಂಡಿದ್ವಿ. ಆಗ ಕಪಿಲೆ ಗುಮ್ಮಿ ಇಂಗಾಗದೆ?’

‘ಓ ಇಂಗಾ ಸಮಾಚಾರ? ಅವಳ್ಯಾಕ್ ಗುಮ್ಮುದ್ಲು ಅಂತೀನಿ?’ ಕೇಳಿದ ಕಲ್ಲೇಶಿ.

‘ತೆನೆಯೋರು, ಕಮಲದೋರು ಒಟ್ಟಿಗೆ ಸ್ಟ್ರೈಕ್ ಮಾಡಕ್ ಒಂಟಿದ್ವಲ್ಲ, ಈ ತೆನೆ ಕಡೆಯೋರ ಕಪಿಲೆ ಕಮಲದ ಕಡೆಯೋರ ಭದ್ರೆ ಮೇಲೆ ಕಾಲ್ ಕೆರ‍್ಕಂಡು, ಗುಟುರು ಹಾಕ್ತಾ ಕೊಂಬಲ್ಲಿ ತಿವಿಯಕ್ ಬಂದ್ಲು. ನಾನು ಬಿಡ್ಸಣ ಅಂತ ಓಗಿದ್ದಕ್ಕೆ ಅವಳು ನಂಗೆ ಗುಮ್ಮಿಬಿಟ್ಳು’.

‘ಹಳೇ ದ್ವೇಷ ಇರಕಿಲ್ವಾ? ನೀವು ಮನುಷ್ಯರು ನಿಮ್ ಅನುಕೂಲಕ್ಕೆ ಮೈತ್ರಿ ಮಾಡ್ಕಂಡು ಸ್ವಾಭಿಮಾನ ಬುಡ್ತೀರ ಅಂದ್ರೆ ಪ್ರಾಣಿಗಳು ಬಿಟ್ಟಾವಾ?’

‘ನಾನೇ ಪರವಾಗಿಲ್ಲ, ನನ್ ಕುಟ್ಟೆ ಬಂದಿದ್ದೊರ‍್ಗೆ ಇನ್ನೂ ಶಾನೆ ಏಟಾಗೈತೆ. ಕಮಲದೋರ ಚೆಲ್ವ ಹಸು ಇಡ್ಕಂಡ್ ಇರ‍್ಬೇಕಾದ್ರೆ ಅದು ಯಾವ್ದೋ ಹೆಂಗ್ಸು ಹೊತ್ಗಂಡು ಓಗ್ತಿದ್ದ ಹೊರೆಗೆ ಬಾಯ್ ಹಾಕಿದೆ. ಆ ವಮ್ಮ ಇದೆಲ್ಲಾ ಚೆಲ್ವುಂದೇ ಇಕ್ಮತ್ತು ಅಂತ ಹಲ್ ಉದರ‍್ಸಿದೆ. ಇನ್ನು ಶಂಕ್ರ ಹಾಲು ಕರೆಯೋಕೆ ಓದ್ನಾ, ಆ ಪಮ್ಮಿ ಹಸ ಎರಡೂ ಕಾಲೆತ್ತಿ ಜಾಡ್ಸಿ ಒದ್ಲು ನೋಡು, ಶಂಕ್ರ ಹಾರಿ ಬಿದ್ದೋನು ಇನ್ನೂ ಕೋಮಾನಾಗೇ ಅವ್ನೆ’

‘ಮಾಲುಸ್ಕಂಡಿರೋ ಹಸುಗೆ ಕೈ ಆಕುದ್ರೆ ಇನ್ನೇನ್ ಮಾಡುತ್ತೆ ತಗೋ?’

‘ಪಂಚಾಯಿತಿ ಆಫೀಸ್ ಮುಂದೆ ಗಲೀಜಾಯ್ತು ಅಂತ ನಮ್ ಕೈಲೇ ಗಂಜಲ, ಸಗಣಿ ಬಾಚುಸುದ್ರು’ ಎಂದು ಮುಖ ಕಿವಿಚಿದ ಗುದ್ಲಿಂಗ. ‘ಮಂಜುಮೆಲ್ ಬಾಯ್ಸ್’ ಅಲ್ಲ, ಗಂಜಲಸ್ಮೆಲ್ ಬಾಯ್ಸ್ ಎಂದು ನಕ್ಕು ಎಲ್ಲ ಮೂಗು ಮುಚ್ಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT