ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌ | ದಸರಾ ಒಳಗೆ ಫಲಾನುಭವಿಗಳಿಗೆ1,000 ನಿವೇಶನ ಹಂಚಿಕೆ: ಶಾಸಕಿ ಎಂ.ರೂಪಕಲಾ

Published : 17 ಸೆಪ್ಟೆಂಬರ್ 2024, 16:23 IST
Last Updated : 17 ಸೆಪ್ಟೆಂಬರ್ 2024, 16:23 IST
ಫಾಲೋ ಮಾಡಿ
Comments

ಕೆಜಿಎಫ್‌: ‘ರೋಜ್ಗರ್ಸ್‌ ಕ್ಯಾಂಪ್ ಬಳಿ ರಾಜೀವ್ ಗಾಂಧಿ ವಸತಿ ಮಂಡಳಿಯ ವತಿಯಿಂದ 1,000 ನಿವೇಶನ ರಚಿಸಲಾಗಿದ್ದು, ದಸರಾ ವೇಳೆಗೆ ಫಲಾನುಭವಿಗಳಿಗೆ  ವಿತರಿಸಲಾಗುವುದು’ ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು.

ನಿರ್ಮಾಣವಾಗುತ್ತಿರುವ ಬಡಾವಣೆ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ಶಾಸಕಿ, ‘ಬಡಾವಣೆಯಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ವಿದ್ಯುತ್, ನೀರು, ಚರಂಡಿ, ಬೀದಿ ದೀಪ ವ್ಯವಸ್ಥೆ ಮಾಡಿಯೇ ನಿವೇಶನ ಮಂಜೂರು ಮಾಡಲಾಗುವುದು. ನಿವೇಶನ ಪಡೆಯಲು ನಗರದಾದ್ಯಂತ 10 ಸಾವಿರ ಅರ್ಜಿಗಳು ಬಂದಿದ್ದು, ಈ ಪೈಕಿ 3,490 ಮಂದಿ ಅರ್ಹರಾಗಿದ್ದಾರೆ. ಅವರ ಪೈಕಿ 1,000 ಮಂದಿ ಮೊದಲ ಹಂತದಲ್ಲಿ ನಿವೇಶನ ಪಡೆಯಲಿದ್ದಾರೆ’ ಎಂದರು.

ನಗರದ ಎಲ್ಲ 35 ವಾರ್ಡ್‌ಗಳಲ್ಲೂ ನಿವೇಶನಕ್ಕೆ ಅರ್ಜಿ ಸಲ್ಲಿಸಿದವರಿದ್ದಾರೆ. ಗಣಿ ಪ್ರದೇಶದ ನಿವಾಸಿಗಳು ಕೂಡ ಇದ್ದಾರೆ. ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡಲಾಗುವುದು. ಪ್ರತಿ ವಾರ್ಡ್‌ನಲ್ಲಿ ಅರ್ಜಿಗೆ ಅನುಗುಣವಾಗಿ ಲಾಟರಿ ತೆಗೆಯಲಾಗುವುದು. ಊರಿಗಾಂ, ಮೈನಿಂಗ್ ಪ್ರದೇಶ ಮತ್ತು ನಾನ್‌ ಮೈನಿಂಗ್ ಪ್ರದೇಶದಲ್ಲಿ ಫಲಾನುಭವಿಗಳಿಂದಲೇ ಲಾಟರಿ ಚೀಟಿ ಎತ್ತಿಸಲಾಗುವುದು ಎಂದರು.

ಹಲವಾರು ವರ್ಷಗಳಿಂದ ನಗರದ ನಿವೇಶನ ರಹಿತರಿಗೆ ನಿವೇಶನ ನೀಡುವ ಪ್ರಕ್ರಿಯೆ ನಡೆದಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಾರಿಗೆ ಒಂದು ಸಾವಿರ ಜನರಿಗೆ ಒಂದೇ ಜಾಗದಲ್ಲಿ ಸೂರು ಒದಗಿಸುವ ಈ ಯೋಜನೆಯು ಫಲಪ್ರದವಾಗಲಿದೆ ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ಜನರ ಕುಂದುಕೊರತೆ ಆಲಿಸಲು ಇನ್ನು ಮುಂದೆ ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ ಮತ್ತು ಆಯುಕ್ತರ ಜೊತೆ ವಾರ್ಡ್‌ವಾರು ಸಭೆ ನಡೆಸಲಾಗುವುದು. ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಆಯುಕ್ತ ಪವನ್‌ಕುಮಾರ್‌, ನಗರಸಭೆ ಸದಸ್ಯರು, ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT