ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | 686 ಮಂದಿಗೆ ಪರೀಕ್ಷೆ; 57 ಡೆಂಗಿ ಪ್ರಕರಣ

ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ನಿಯಂತ್ರಣ; ಇಬ್ಬರಿಗೆ ಮಲೇರಿಯಾ, 22 ಮಂದಿಗೆ ಚಿಕುನ್‌ ಗುನ್ಯಾ
Published 4 ಜುಲೈ 2024, 7:05 IST
Last Updated 4 ಜುಲೈ 2024, 7:05 IST
ಅಕ್ಷರ ಗಾತ್ರ

ಕೋಲಾರ: ಮಳೆಗಾಲ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡೆಂಗಿ ಜ್ವರ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದೆ.

ಇದೇ ವರ್ಷದ ಜನವರಿಯಿಂದ ಜೂನ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ 686 ಮಂದಿಯ ರಕ್ತಪರೀಕ್ಷೆಗಳನ್ನು ಮಾಡಿದ್ದು, ಇದರಲ್ಲಿ 57 ಪ್ರಕರಣಗಳಲ್ಲಿ ಡೆಂಗಿ ಇರುವುದು ದೃಢಪಟ್ಟಿದೆ. ಎಲ್ಲೂ ಸಾಮೂಹಿಕ ಜ್ವರದಿಂದ ಬಳಲುತ್ತಿರುವ ಪ್ರಕರಣ ಕಂಡುಬಂದಿಲ್ಲ.

ಆರೋಗ್ಯ ಇಲಾಖೆಯು ಜ್ವರದಿಂದ ಬಳಲುತ್ತಿರುವವರು ಮತ್ತು ಸಂಶಯಾಸ್ಪದ ಪ್ರಕರಣಗಳ ಮೇಲೆ ಕಣ್ಗಾವಲು ಇರಿಸಿ ಪರೀಕ್ಷೆ ಮಾಡುತ್ತಿದೆ. ರಕ್ತದ ಮಾದರಿ ಸಂಗ್ರಹಿಸಿ ಅವುಗಳನ್ನು ಕೋಲಾರ ನಗರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಪಾಸಿಟಿವ್‌ ಬಂದರಷ್ಟೇ ಅವುಗಳನ್ನು ಆರೋಗ್ಯ ಇಲಾಖೆ ಡೆಂಗಿ ಎಂದು ದೃಢಪಡಿಸಿ ವರದಿ ರವಾನೆ ಮಾಡುತ್ತದೆ. ಈಚೆಗೆ ತುರ್ತು ಕಿಟ್‌ ನೀಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಪರೀಕ್ಷೆ ನಡೆಸಿ 10 ನಿಮಿಷದಲ್ಲಿ ಫಲಿತಾಂಶ ತಿಳಿದುಕೊಳ್ಳಬಹುದಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿಯೂ ಡೆಂಗಿ ಪ್ರಕರಣಗಳು ವರದಿಯಾಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಂಡವರು ಕಡ್ಡಯಾವಾಗಿ ಮಾಹಿತಿ ನೀಡಬೇಕು ಎಂದು ಈಗಾಗಲೇ ಇಲಾಖೆ ಎಲ್ಲ ಆಸ್ಪತ್ರೆಗಳ ಮುಖ್ಯಸ್ಥರಿಗೆ ಸೂಚಿಸಿದೆ. 

ಈಗ ಸಂಗ್ರಹಿಸುತ್ತಿರುವ ರಕ್ತದ ಮಾದರಿಯಲ್ಲಿ ಡೆಂಗಿ, ಮಲೇರಿಯಾ, ಚಿಕುನ್‌ ಗುನ್ಯಾ ಪತ್ತೆ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 22 ಚಿಕುನ್‌ ಗುನ್ಯ ಪ್ರಕರಣ ಹಾಗೂ ಎರಡು ಮಲೇರಿಯಾ ಪ್ರಕರಣ ಪತ್ತೆಯಾಗಿವೆ.

‘ಜಿಲ್ಲೆಯಲ್ಲಿ ಮಲೇರಿಯಾ, ಡೆಂಗಿ ಹಾಗೂ ಚಿಕನ್ ಗುನ್ಯಾದಂತಹ ಸಮುದಾಯ ರೋಗಗಳು ತೀರಾ ಕಡಿಮೆ. ಹೊರ ರಾಜ್ಯಗಳಿಂದ ಬರುವವರಿಂದ ರೋಗಗಳು ಹರುಡುತ್ತಿವೆ. ಆದ್ದರಿಂದ ಆರೋಗ್ಯ ಇಲಾಖೆಯು ಇಂತಹವರನ್ನು ಗಮನಿಸಿ ರಕ್ತ ಪರೀಕ್ಷೆ ನಡೆಸುತ್ತಿದೆ. ಶ್ರೀನಿವಾಸಪುರ ತಾಲ್ಲೂಕಿನ ಮಾವಿನ ಮಂಡಿಯಲ್ಲಿ ಉತ್ತರಪ್ರದೇಶದ ಇಬ್ಬರಿಗೆ ಮಲೇರಿಯಾ ದೃಢ ಪಟ್ಟ ಹಿನ್ನಲೆ, ಸುತ್ತಮುತ್ತ 72ಕ್ಕೂ ಅಧಿಕ ವ್ಯಕ್ತಿಗಳಿಗೆ ರಕ್ತ ಪರೀಕ್ಷೆ ನಡೆಸಲಾಯಿತು. ಉಳಿದವರಲ್ಲಿ ಕಾಣಿಸಿಕೊಂಡಿಲ್ಲ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಗ್ರಾಮಗಳಲ್ಲಿ ಆಶ್ರಿತ ರೋಗಗಳ ನಿಯಂತ್ರಣ ಸಂಬಂಧ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸುವ ಜೊತೆಗೆ ನಿಗಾ ವಹಿಸಿದ್ದಾರೆ. ಹಳ್ಳಿಗಳಿಗೆ ತೆರಳಿ ಲಾರ್ವಾ ಸರ್ವೆ ಕೆಲಸ ಮಾಡುತ್ತಿದ್ದಾರೆ. ಪ್ರತಿ ಗ್ರಾಮಕ್ಕೆ, ಬಡಾವಣೆಗಳಿಗೆ ತಿಂಗಳಿಗೆ ಎರಡು ಬಾರಿ ತೆರಳಿ ಸರ್ವೆ ನಡೆಸಲಾಗುತ್ತಿದೆ. ನಿಂತ ನೀರಲ್ಲಿ 15 ದಿನಗಳೊಗೊಮ್ಮೆ ಮೊಟ್ಟೆ ಇರುತ್ತದೆ. ಮರಿಯಾಗುವುದರೊಳಗೆ ನಾಶ ಮಾಡುವುದು ನಮ್ಮ ಉದ್ದೇಶ’ ಎಂದರು.

 ಈಡಿಸ್ ಎಂಬ ಸೊಳ್ಳೆಯಿಂದ ಡೆಂಗಿ ಹರಡುತ್ತದೆ. ಈ ಸೊಳ್ಳೆಯು ಡೆಂಗಿ ಇದ್ದವರಿಗೆ ಕಚ್ಚಿ ಆರೋಗ್ಯವಂತರಿಗೆ ಕಚ್ಚಿದರೆ ವಾರದ ಮೇಲೆ ಡೆಂಗಿ. ಮೈಕೈ ನೋವು, ತಲೆನೋವು, ಜ್ವರ, ಸ್ನಾಯು ಮತ್ತು ಕೀಲುಗಳ ನೋವು ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಕೋಲಾರ ನಗರದಲ್ಲಿ ಅಧಿಕ ಡೆಂಗಿ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರಯೋಗಾಲಯ 15 ದಿನಗಳಿಗೊಮ್ಮೆ ಲಾರ್ವಾ ಸರ್ವೆ
ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಣದಲ್ಲಿದೆ. ಅಲ್ಲೊಂದು ಇಲ್ಲೊಂದು ಪತ್ತೆಯಾಗುತ್ತಿದೆ. ಉಳಿದ ಜಿಲ್ಲೆಗಳ ರೀತಿ ಒಂದೇಕಡೆ ಹೆಚ್ಚು ಪ್ರಕರಣ ಇಲ್ಲ. ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ
ಡಾ.ರವಿಕುಮಾರ್ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಜಿಲ್ಲೆಯಲ್ಲಿ ಡೆಂಗಿ ಪತ್ತೆ ಪ್ರಕರಣ
ತಾಲ್ಲೂಕು; ಪ್ರಕರಣ ಶ್ರೀನಿವಾಸಪುರ; 05 ಮುಳಬಾಗಿಲು; 07 ಬಂಗಾರಪೇಟೆ; 11 ಕೆಜಿಎಫ್‌; 07 ಕೋಲಾರ; 19 ಮಾಲೂರು; 08 ಒಟ್ಟು; 57
ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೂಚಿಸಿರುವ ಕ್ರಮಗಳು
* ಮನೆಗಳಲ್ಲಿ ವಾರಗಟ್ಟಲೇ ನೀರು ಶೇಖರಣೆ ಮಾಡಿಡಬಾರದು * ಚರಂಡಿಗಳು ಹಳೆಯ ಟೈರ್‌ಗಳು ತೆಂಗಿನ ಚಿಪ್‌ಗಳಲ್ಲಿ ತೊಟ್ಟಿಗಳಲ್ಲಿ ನೀರು ಬಹಳ ಕಾಲದವರೆಗೆ ಸಂಗ್ರಹಗೊಳ್ಳದಂತೆ ನೋಡಿಕೊಳ್ಳಬೇಕು * ದಿನ ಬಳಕೆಯ ತೊಟ್ಟಿ ಮತ್ತು ಡ್ರಂಗಳನ್ನು ವಾರಕ್ಕೊಮ್ಮೆ ತೊಳೆದು ಒಣಗಿಸಿ ಡ್ರೈ ಡೇ ಆಚರಿಸಬೇಕು * ನೀರಿನ ಟ್ಯಾಂಕ್ ಹಾಗೂ ಓವರ್ ಹೆಡ್ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು * ಮನೆಯ ಸುತ್ತಮುತ್ತ ಘನ ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು * ವಾತಾವರಣದ ಏರಿಳಿತ ಸೊಳ್ಳೆಗಳ ಉತ್ಪತ್ತಿ ಪ್ರಮಾಣ ಹೆಚ್ಚಿಸಿದ್ದು ಹಗಲು ಹೊತ್ತಿನಲ್ಲಿ ಸೊಳ್ಳೆಗಳು ಕಚ್ಚದ ಹಾಗೆ ನೋಡಿಕೊಳ್ಳಬೇಕು * ನಗರಸಭೆಯಿಂದ ಫಾಗಿಂಗ್‌ ಮಾಡಬೇಕು * ಕುದಿಸಿ ಆರಿಸಿದ ನೀರು ಕುಡಿಯಬೇಕು * 2–3 ದಿನಗಳ ನಂತರವೂ ಜ್ವರ ಬಿಡದಿದ್ದರೆ ತಪ್ಪದೇ ಪರೀಕ್ಷೆ ಮಾಡಿಸಿಕೊಳ್ಳಬೇಕು
ಸೊಳ್ಳೆ ಉತ್ಪತ್ತಿ ತಾಣ ನಾಶಮಾಡುವ ದಿನ
ರಾಜ್ಯದಾದ್ಯಂತ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ರಾಜ್ಯ ಸರ್ಕಾರ ಪ್ರತಿ ಶುಕ್ರವಾರ ನಗರ ಗ್ರಾಮೀಣ ಪ್ರದೇಶದಲ್ಲಿ ಈಡೀಸ್ ಸೊಳ್ಳೆ ಉತ್ಪತ್ತಿಯಾಗುವ ತಾಣಗಳನ್ನು ನಾಶಪಡಿಸುವ ದಿನವನ್ನಾಗಿ ಆಚರಿಸಲು ಸೂಚನೆ ನೀಡಿದೆ. ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದ್ದು ಶುಕ್ರವಾರ ಮನೆ ಶಾಲೆ ಕಾಲೇಜು ಅಂಗನವಾಡಿ ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಗಲಿನಲ್ಲಿ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದೆ.
ಹೆಚ್ಚಿದ ಸೊಳ್ಳೆ ಕಾಟ; ನಗರಸಭೆ ವಿರುದ್ಧ ಆಕ್ರೋಶ
ಕೋಲಾರ ನಗರದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದ್ದು ಸೊಳ್ಳೆಗಳ ಕಾಟ ವಿಪರೀತಗೊಂಡಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ನಗರಸಭೆ ಅಧಿಕಾರಿಗಳು ಸಿಬ್ಬಂದಿ ಗಾಢ ನಿದ್ರೆಯಲ್ಲಿದ್ದಾರೆ ಎಂದು ನಿವಾಸಿಗಳು ಆಕ್ರೋಶಪಡಿಸುತ್ತಿದ್ದಾರೆ. ‘ತ್ಯಾಜ್ಯ ವಿಲೇವಾರಿ ಕೂಡ ಸರಿಯಾಗಿ ನಡೆಯುತ್ತಿಲ್ಲ. ಬಡಾವಣೆ ರಸ್ತೆಗಳಲ್ಲಿ ರಾಶಿ ರಾಸಿ ಕಸ ಬಿದ್ದಿರುತ್ತದೆ. ಖಾಲಿ ನಿವೇಶನ ಸ್ವಚ್ಛಗೊಳಿಸುತ್ತಿಲ್ಲ. ಚರಂಡಿಗಳು ಕಟ್ಟಿಕೊಂಡು ರಸ್ತೆಗೆ ಹರಿಯುತ್ತಿದ್ದರೂ ಕೇಳುವವರಿಲ್ಲ’ ಎಂದೂ ದೂರುತ್ತಿದ್ದಾರೆ. ಸೊಳ್ಳೆ ಕಾಟ ಹೆಚ್ಚುತ್ತಿದ್ದು ಜಿಲ್ಲೆಯಲ್ಲಿ ಹೆಚ್ಚು ಡೆಂಗಿ ಪ್ರಕರಣ ಇರುವುದು ಕೋಲಾರದಲ್ಲೇ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಕೂಡ ಮಾಡುತ್ತಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT