ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಸಿ ವ್ಯಾಲಿ | ಕರಾರಿನಂತೆ ಸಂಸ್ಕರಿಸಿದ ನೀರು ಹರಿಸಿ: ಸಚಿವ ಬೈರತಿ ಸುರೇಶ್‌ ಸಭೆ

Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ಅಕ್ಷರ ಗಾತ್ರ

ಕೋಲಾರ: ಕೆ.ಸಿ.ವ್ಯಾಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಒಟ್ಟು 126 ಕೆರೆ ತುಂಬಿಸಲು ಈ ಹಿಂದೆ ಆಗಿರುವ ಕರಾರಿನಂತೆ ಹರಿಸಬೇಕು ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್, ಕೋಲಾರ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೆ.ಸಿ ವ್ಯಾಲಿ ಸಂಸ್ಕರಣ ಘಟಕದಿಂದ ಕರಾರಿನಂತೆ 310 ದಶಲಕ್ಷ ಲೀಟರ್ ಹರಿಸಿ ಕೆರೆ ತುಂಬಿಸಬೇಕು ಎಂದರು.

‘ಕಳೆದ ಕೆಲ ತಿಂಗಳಿನಿಂದ 140 ದಶಲಕ್ಷ ಲೀಟರ್ ಅನ್ನು ಮಾತ್ರ ನೀಡಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ವರ್ಷದಿಂದ ಸತತ ಬರಗಾಲವಿದ್ದು, ಮಳೆ ಪ್ರಮಾಣ ಕೂಡ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೇರವಾಗಿ ಕೋಲಾರ ಜಿಲ್ಲೆ ಮತ್ತು ಚಿಂತಾಮಣಿ ತಾಲ್ಲೂಕಿನ ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹೊಸಕೋಟೆ ಮತ್ತು ಆನೇಕಲ್ ಪಟ್ಟಣಗಳಿಗೆ ಬಿಡುತ್ತಿರುವುದು ಸರಿಯಾದ ಕ್ರಮವಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಕೆ.ಸಿ.ವ್ಯಾಲಿ ತ್ಯಾಜ್ಯ ನೀರನ್ನು ಸಂಸ್ಕರಿಸುವ ಎರಡು ಘಟಕಗಳ ಯಂತ್ರೋಪಕರಣಗಳು ಹೊಸದು. ಅದರಲ್ಲಿ ಒಂದು ದುರಸ್ಥಿಯಲ್ಲಿದೆ ಎಂದು ಹೇಳುತ್ತೀರಿ. ಇನ್ನೊಂದು ಯಂತ್ರದ ಮೂಲಕ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿಗೆ ಹರಿಸುವುದನ್ನು ಬಿಟ್ಟು ಆನೇಕಲ್ ತಾಲ್ಲೂಕಿಗೆ ಏಕೆ ಹರಿಸುತ್ತಿದ್ದಿರಿ’ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿ ಸಣ್ಣ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ ಅನ್ನು ತರಾಟೆಗೆ ತೆಗೆದುಕೊಂಡರು.

ಶಾಸಕರಿಂದಲೂ ಆಕ್ಷೇಪ: 108 ದಶಲಕ್ಷ ಲೀಟರ್ ತ್ಯಾಜ್ಯ ನೀರು ಸಂಸ್ಕರಿಸುವ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಾರಣ ನೀಡಿ ಅದನ್ನೇ ಆನೇಕಲ್‍ಗೆ ಪೂರೈಸುತ್ತಿದ್ದಿರಿ ಎಂದು ಕೋಲಾರ ಜಿಲ್ಲೆಯ ಶಾಸಕರು ಒಟ್ಟಾಗಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲೆ ರೇಗಿದರು.

ಆಗ ಮಧ್ಯ ಪ್ರವೇಶಿಸಿದ ಬೈರತಿ ಸುರೇಶ್‌ ಮತ್ತು ಸುಧಾಕರ್, ಈ ಕುರಿತು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಮನೋಹರ್ ಪ್ರಸಾದ್ ಅವರನ್ನು ಪ್ರಶ್ನಿಸಿದರು.

ಆಗ ಅಧ್ಯಕ್ಷರು, ‘ತ್ಯಾಜ್ಯ ನೀರನ್ನು ಸಂಸ್ಕರಿಸಿ ಸಣ್ಣ ನೀರಾವರಿ ಇಲಾಖೆಯ ಕೆ.ಸಿ ವ್ಯಾಲಿ ಘಟಕಕ್ಕೆ ಹರಿಸುವುದು ನಮ್ಮ ಕೆಲಸ. ಯಾವ ಜಿಲ್ಲೆಗೆ, ಯಾವ ತಾಲ್ಲೂಕಿಗೆ ಎಷ್ಟು ನೀರು ಬೀಡಬೇಕು ಅಥವಾ ಹರಿಸುವ ಕೆಲಸ ನಮ್ಮದಲ್ಲ’ ಎಂದು ಸ್ಪಷ್ಟ ಪಡಿಸಿದರು.

ಈ ಹಂತದಲ್ಲಿ ಸಚಿವರು, ಶಾಸಕರು, ‘ಮೊದಲು ಕೋಲಾರ ಜಿಲ್ಲೆಗೆ ನೀರು ಹರಿಸಿ. ನಂತರ ಬೇಕಿದ್ದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮತ್ತು ಆನೇಕಲ್‍ಗೆ ನೀಡಲಿ’ ಎಂದು ತಾಕೀತು ಮಾಡಿದರು.

218 ದಶಲಕ್ಷ ಲೀಟರ್ ಸಂಸ್ಕರಣ ಘಟಕದ ಉನ್ನತಿಕರಣ ಕಾಮಗಾರಿಯನ್ನು ಬೆಂಗಳೂರು ಜಲಮಂಡಳಿ ಕೈಗೆತ್ತಿಕೊಂಡಿರುವುದು ಸಭೆಯಲ್ಲಿ ತಿಳಿದ ನಂತರ ಅದನ್ನು ಅದಷ್ಟು ಬೇಗ ಪೂರ್ಣಗೊಳಿಸುವಂತೆ ಬೈರತಿ ಸುರೇಶ್‌ ಸೂಚಿಸಿದರು.

ಕೋಲಾರ ತಾಲ್ಲೂಕಿನ ನರಸಾಪುರ ಕೆರೆ ನಂತರ ಮಾಲೂರು ಕೆರೆಗಳು, ತದನಂತರ ಬಂಗಾರಪೇಟೆ, ಕೆ.ಜಿ.ಎಫ್, ಮುಳಬಾಗಿಲು ಮತ್ತು ಶ್ರೀನಿವಾಸಪುರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಬೇಕು ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ಕೊತ್ತೂರು ಜಿ.ಮಂಜುನಾಥ್‌, ಸಮೃದ್ದಿ ಮಂಜುನಾಥ, ಎಂ.ಎಲ್.ಅನಿಲ್ ಕುಮಾರ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್, ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಸಣ್ಣ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ರಾಘವನ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಬೋಸರಾಜು ಜೊತೆ ಮಾತುಕತೆ

ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರಿಗೆ ಕರೆ ಮಾಡಿದ ಬೈರತಿ ಸುರೇಶ್‌ ಸಣ್ಣ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್‌ ಮತ್ತು ಅಧಿಕಾರಿಗಳು ಮಾಡಿರುವ ಅಚಾತುರ್ಯವನ್ನು ಗಮನಕ್ಕೆ ತಂದರು. ಮೂಲ ಒಪ್ಪಂದವನ್ನು ಉಲ್ಲಂಘಿಸಿ ತಮ್ಮ ಇಲಾಖೆಯ ಮುಖ್ಯ ಎಂಜಿನಿಯರ್‌ ಹಾಗೂ ಅಧಿಕಾರಿಗಳು ಕೋಲಾರ ಜಿಲ್ಲೆಗೆ ಹರಿಯುವ ಸಂಸ್ಕರಿಸಿದ ತ್ಯಾಜ್ಯ ನೀರಿನ ದೊಡ್ಡಕೊಳವೆಯಲ್ಲಿ ರಂಧ್ರವನ್ನು ಮಾಡಿ ಅದರ ಮೂಲಕ ಹೊಸಕೋಟೆ ತಾಲ್ಲೂಕಿನ ಕೆರೆಗಳಿಗೆ ಹರಿಸುತ್ತಿದ್ದಾರೆ ಎಂದು ಹೇಳಿದರು. ಈ ಬಗ್ಗೆ ಅಧಿಕಾರಿಗಳ ಸಭೆಯನ್ನು ಕರೆದು ಪರಿಶೀಲಿಸುವುದಾಗಿ ಬೋಸರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT