ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌ | ಅಂಗನವಾಡಿ ಅವ್ಯವಸ್ಥೆ: ಶಾಸಕಿ ಗರಂ

Published : 7 ಅಕ್ಟೋಬರ್ 2024, 14:07 IST
Last Updated : 7 ಅಕ್ಟೋಬರ್ 2024, 14:07 IST
ಫಾಲೋ ಮಾಡಿ
Comments

ಕೆಜಿಎಫ್‌: ಇಲ್ಲಿನ ಊರಿಗಾಂಪೇಟೆಯಲ್ಲಿರುವ ಅಂಗನವಾಡಿ ಕೇಂದ್ರದ ಅವ್ಯವಸ್ಥೆ ಕಂಡು ಶಾಸಕಿ ರೂಪಕಲಾ ಶಶಿಧರ್, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಸರ್ಕಾರದ ಮಾರ್ಗಸೂಚಿಯಂತೆ ಮಕ್ಕಳಿಗೆ ಆಹಾರ ಧಾನ್ಯ ನೀಡಲಾಗುತ್ತಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. 

ಊರಿಗಾಂಪೇಟೆ ಬಡಾವಣೆಗೆ ಬಂದಿದ್ದ ಅವರು, ಸಮೀಪದಲ್ಲಿದ್ದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ಅಂಗನವಾಡಿ ಕೇಂದ್ರವು ಶಿಥಿಲವಾಸ್ಥೆಯಲ್ಲಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತೆಯರು ತಾಯಿ ಮನಸ್ಸಿನಿಂದ ಕೆಲಸ ಮಾಡಬೇಕು. ಯಾಂತ್ರಿಕವಾಗಿ ಕೆಲಸ ಮಾಡಬಾರದು. ಅಂಗನವಾಡಿ ಕೇಂದ್ರವನ್ನು ಈ ರೀತಿಯಾಗಿ ಇಟ್ಟುಕೊಂಡರೆ, ಯಾರು ತಾನೆ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಸೇರಿಸುತ್ತಾರೆ. ಈ ವಿಚಾರದಲ್ಲಿ ಸಿಡಿಪಿಒ ಸಹ ಜವಾಬ್ದಾರರು. ಅಂಗನವಾಡಿ ಕೇಂದ್ರ ಹೇಗೆ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು. 

ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಿಸಬೇಕಿದೆ. ಅಲ್ಲಿವರೆಗೆ ಊರಿಗಾಂಪೇಟೆ ಪೊಲೀಸ್ ಔಟ್ ಪೋಸ್ಟ್ ಕಟ್ಟಡವನ್ನು ತಾತ್ಕಾಲಿಕವಾಗಿ ನೀಡಬೇಕು ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಕೋರಿದರು. 

ಬಳಿಕ ಅಂಚೆ ಕಚೇರಿಗೆ ತೆರಳಿದ ಅವರು, ಅಂಚೆ ಕಚೇರಿ ಸಿಬ್ಬಂದಿ ಸರ್ಕಾರದ ವಿವಿಧ ಸೌಲಭ್ಯಗಳ ಫಲಾನುಭವಿಗಳಿಂದ ತಲಾ ₹50 ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಬಂದಿವೆ. ಜೊತೆಗೆ ಫಲಾನುಭವಿಗಳು ತಮ್ಮ ಹಣ ಪಡೆಯಲು ಇಂದು, ನಾಳೆ ಎಂದೆಲ್ಲಾ ಸತಾಯಿಸಲಾಗುತ್ತಿದೆ ಎಂಬ ಆರೋಪಗಳು ವ್ಯಕ್ತವಾಗಿವೆ. ಮುಂದಿನ ದಿನಗಳಲ್ಲಿ ಈ ರೀತಿ ತಪ್ಪುಗಳು ಆಗಬಾರದು ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. 

ಪ್ರತಿ ಬಾರಿ ಮಳೆ ಬಂದಾಗ ರಾಜಕಾಲುವೆ ತುಂಬಿ ಕೊಳಚೆ ನೀರು ಬಡಾವಣೆಗೆ ನುಗ್ಗುತ್ತಿದೆ. ಬಡಾವಣೆಯಲ್ಲಿ 250 ಕುಟುಂಬಗಳು ವಾಸಿಸುತ್ತಿದ್ದು, ಮಳೆ ಬಂದರೆ ನರಕಯಾತನೆ ಅನುಭವಿಸುತ್ತೇವೆ. ಮಳೆ ಬಂದರೆ, ಕೊಳಚೆ ನೀರಿನಲ್ಲಿ ಹಾವು, ಝರಿ ಸೇರಿದಂತೆ ಇನ್ನಿತರ ಕ್ರಿಮಿಕೀಟಗಳು ಮನೆಯೊಳಕ್ಕೆ ಬರುತ್ತಿವೆ ಎಂದು ನಿವಾಸಿಗಳು ಮನವಿ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ರೂಪಕಲಾ, ಪೊಲೀಸರ ನೆರವಿನೊಂದಿಗೆ ಎರಡು ದಿನಗಳಲ್ಲಿ ಒತ್ತುವರಿ ತೆರವುಗೊಳಿಸಬೇಕು ಎಂದು ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡಿದರು. 

ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಉಪಾಧ್ಯಕ್ಷ ಜರ್ಮನ್‌ ಜೂಲಿಯಸ್‌, ಆಯುಕ್ತ ಪವನ್‌ಕುಮಾರ್‌, ದೇವಿಗಣೇಶ್‌, ಮಂಜುನಾಥ್‌, ರಾಜೇಶ್‌, ತ್ಯಾಗರಾಜ್‌, ಹೇಮಲತಾ ಹಾಜರಿದ್ದರು.

ಹತ್ತು ಗಂಟೆಯಾದರೂ ಒಂದು ಮಗುವು ಕೇಂದ್ರಕ್ಕೆ ಬಂದಿಲ್ಲ. ಮಕ್ಕಳಿಗೆ ಕೊಡುವ ಧಾನ್ಯ ಮತ್ತು ಆಹಾರ ಚಾರ್ಟ್ ಇದೆ. ಅದನ್ನು ಸರಿಯಾಗಿ ಕೊಡಲಾಗುತ್ತಿದೆಯೇ ಎಂಬ ಅನುಮಾನವಿದೆ. ಹಾಜರಾತಿಯಲ್ಲಿರುವ ಮಕ್ಕಳು ಮತ್ತು ಕೇಂದ್ರಕ್ಕೆ ಬರುವ ಮಕ್ಕಳ ಸಂಖ್ಯೆಗೆ ತಾಳೆಯಾಗುತ್ತಿಲ್ಲ. ಮಳೆಯಿಂದ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಬಿದ್ದಿದೆ. ಈ ಬಗ್ಗೆ ಸಿಡಿಪಿಒ ಗಮನಕ್ಕೆ ಯಾಕೆ ತಂದಿಲ್ಲ. ಕೇಂದ್ರವನ್ನು ಶುದ್ಧವಾಗಿಯೂ ಇಟ್ಟುಕೊಂಡಿಲ್ಲ. ನಿಮ್ಮ ಮನೆಯನ್ನು ಹೀಗೆಯೇ ಇಟ್ಟುಕೊಳ್ಳುವಿರಾ. ನಿಮ್ಮ ಮನೆ ಮಕ್ಕಳಿಗೂ ಹೀಗೆ ಆರೈಕೆ ಮಾಡುವಿರಾ ಎಂದು ಅಂಗನವಾಡಿ ಕಾರ್ಯಕರ್ತೆಯನ್ನು ಶಾಸಕಿ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT