ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಆಹಾರ ಕಲಬೆರಕೆ, ಅನೈರ್ಮಲ್ಯ ದೂರು; ನಡೆಯದ ತಿನಿಸುಗಳ ಗುಣಮಟ್ಟ ಪರೀಕ್ಷೆ

ಸಿಬ್ಬಂದಿ ಕೊರತೆ ನೆಪ
Published 23 ಜುಲೈ 2024, 5:31 IST
Last Updated 23 ಜುಲೈ 2024, 5:31 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಕೆಲ ಹೋಟೆಲ್‌, ರೆಸ್ಟೋರೆಂಟ್‌, ದರ್ಶಿನಿ, ಫಾಸ್ಟ್‌ ಫುಡ್‌ ಕೇಂದ್ರ, ಆಹಾರ ಪದಾರ್ಥ ಮಾರಾಟ ಮಳಿಗೆ, ಹಣ್ಣಿನಂಗಡಿ, ದಿನಸಿಯಂಗಡಿ, ಮಾಲ್‌, ನೀರಿನ ಘಟಕ ಹಾಗೂ ರಸ್ತೆ ಬದಿ ತಿನಿಸು ಅಂಗಡಿಗಳಲ್ಲಿ ಅನೈರ್ಮಲ್ಯ, ಕಲಬೆರಕೆ, ಅವಧಿ ಮೀರಿದ ಪದಾರ್ಥ ಮಾರಾಟ, ಕೃತಕ ಬಣ್ಣ ಬಳಕೆ, ಬಳಸಿದ ಅಡುಗೆ ಎಣ್ಣೆಯನ್ನೇ ಪದೇಪದೇ ಬಳಸುವುದು ಸಂಬಂಧ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದರೂ ಜಿಲ್ಲಾಡಳಿತ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಲಕ್ಷ್ಯ ಆಕ್ರೋಶಕ್ಕೆ ಕಾರಣವಾಗಿದೆ.

ಈಚೆಗೆ ಈ ಸಂಬಂಧ ದೂರುಗಳು ಹೆಚ್ಚಿದ ಕಾರಣ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟ, ಸ್ವಚ್ಛತೆ ಕಾಪಾಡಲು ರಾಜ್ಯದಾದ್ಯಂತ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ದರ್ಶನಿಗಳಲ್ಲಿ ತಪಾಸಣೆ ನಡೆಸುವಂತೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಕೂಡ ನಿರ್ದೇಶನ ನೀಡಿದ್ದಾರೆ.

ಅಲ್ಲದೇ, ಗೋಬಿ ಮಂಚೂರಿ ಹಾಗೂ ಕಬಾಬ್‌ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆ ನಿಷೇಧ ಹೇರಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದಾಗ್ಯೂ ರಸ್ತೆ ಬದಿ ಅಂಗಡಿಗಳಲ್ಲಿ ಅವ್ಯಾವಹತವಾಗಿ ಬಳಕೆ ಮುಂದುವರಿದಿದೆ.

ಜಿಲ್ಲೆಯಲ್ಲಿ ಕಲಬೆರಕೆ ತಪಾಸಣಾ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಕಲಬೆರಕೆ ಮುಕ್ತ ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳ ಪೂರೈಕೆ ಸಂಬಂಧ ನಿಗಾ ವಹಿಸಬೇಕಾದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಹೀಗಾಗಿ, ಕಳೆದ ಆರು ತಿಂಗಳಿಂದ ಮಾದರಿ ಸಂಗ್ರಹ ಕಾರ್ಯ ಕುಂಟುತ್ತಾ ಸಾಗಿದೆ. ಕೆಜಿಎಫ್‌ ನಗರಸಭೆ ಆಯುಕ್ತರು ಈಚೆಗೆ ಕೆಲ ಆಹಾರ ಪದಾರ್ಥ ಅಂಗಡಿ ಮಳಿಗೆ ಮೇಲೆ ದಾಳಿ ನಡೆಸಿ ಚುರುಕು ಮುಟ್ಟಿಸಿದ್ದು ಹೊರತುಪಡಿಸಿ ಉಳಿದ ಕಡೆ ನಿರ್ಲಕ್ಷ್ಯ ಮುಂದುವರಿದಿದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸುತ್ತಮುತ್ತ ಸೇರಿದಂತೆ ತಳ್ಳೋ ಗಾಡಿಗಳಲ್ಲಿ ತಿಂಡಿ, ಪಾನಿಪುರಿ, ಗೋಬಿ ಮಂಚೂರಿ, ಕತ್ತರಿಸಿದ ಹಣ್ಣಿನ ಮಾರಾಟ ಹೆಚ್ಚಿನ ಕಡೆ ನಡೆಯುತ್ತಿದೆ. ಒಮ್ಮೆ ಎದ್ದಿದ ನೀರಿನಲ್ಲೇ ಪದೇಪದೇ ತಟ್ಟೆ ತೊಳೆಯುತ್ತಿರುತ್ತಾರೆ, ಅನೈರ್ಮಲ್ಯ ತಾಂಡವವಾಡುತ್ತಿದೆ. ಆದರೆ, ಕೇಳುವವರೇ ಇಲ್ಲ ಎಂಬುದು ಸಾರ್ವಜನಿಕರ ದೂರು. 

ಇಲಾಖೆ ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ ಆಹಾರ ತಯಾರಿಕೆ, ಗುಣಮಟ್ಟ, ಸುರಕ್ಷತೆ‌, ಪ್ಯಾಕಿಂಗ್, ಸಾಗಣೆ, ಅವಧಿ, ಮಾರಾಟದ ಬಗ್ಗೆ ತಪಾಸಣೆ ನಡೆಸಬೇಕು. ಅನುಮಾನ ಬಂದಲ್ಲಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು. ಕಳಪೆಯಾಗಿದ್ದರೆ, ಅಸುರಕ್ಷಿತವಾಗಿದ್ದರೆ ದಂಡ ವಿಧಿಸಿಬೇಕು, ನಂತರ ಕಾನೂನಾತ್ಮಕ ಕ್ರಮ ವಹಿಸಬೇಕು. ಆದರೆ, ಬೆರಳೆಣಿಕೆ ಪ್ರಕರಣ ತೋರಿಸಿ ಕೈತೊಳೆದುಕೊಂಡಿದ್ದಾರೆ. 

ಕಬಾಬ್
ಕಬಾಬ್

ಜಿಲ್ಲೆಯ ತಿನಿಸು ಕೇಂದ್ರಗಳಲ್ಲಿ 2024ರಲ್ಲಿ ನಡೆದಿರುವ ತಪಾಸಣೆ ಮಾಹಿತಿ

ತಾಲ್ಲೂಕು; ಕಾನೂನು ಬದ್ಧ ಮಾದರಿ ಸಂಗ್ರಹ; ಸಮೀಕ್ಷಾ ಮಾದರಿ ಸಂಗ್ರಹ ಬಂಗಾರಪೇಟೆ; 14; 40 ಕೋಲಾರ; 12; 43 ಮಾಲೂರು; 26; 31 ಮುಳಬಾಗಿಲು; 6; 8 ಶ್ರೀನಿವಾಸಪುರ; 6; 11 ಒಟ್ಟು; 64; 133 (ಜನವರಿಯಿಂದ ಜೂನ್‌ ಅಂತ್ಯದವರೆಗೆ)

ಅನೈರ್ಮಲ್ಯ; ಮುಲಾಜಿಲ್ಲದೇ ಕ್ರಮ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಹೋಟೆಲ್‌ ರೆಸ್ಟೋರೆಂಟ್‌ ದರ್ಶಿನಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಾಲೂರಿನ ಬೇಕರಿಯೊಂದರಲ್ಲಿ ಈಚೆಗೆ ಅವಧಿ ಮೀರಿದ ತಿನಿಸು ಮಾರಾಟ ಮಾಡುತ್ತಿದ್ದ ಪ್ರಕರಣ ಎಡಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಬೀದಿ ಬದಿ ಅಂಗಡಿಗಳ ಮೇಲೂ ನಿಗಾ ಇಡಲಾಗಿದೆ. ಕಬಾಬ್‌ ಹಾಗೂ ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಗರಸಭೆ ಪುರಸಭೆಗಳ ಪೌರಾಯುಕ್ತರಿಗೂ ಈ ಸಂಬಂಧ ಪರಿಶೀಲಿಸಲು ನಿರ್ದೇಶನ ನೀಡಿದ್ದೇನೆ. ದಿಢೀರ್‌ ದಾಳಿ ನಡೆಸಿ ಪರಿಶೀಲಿಸಲು ಹೇಳಿದ್ದೇನೆ. ಸ್ವಚ್ಛತೆ ಇಲ್ಲದಿದ್ದರೆ ಕಲುಷಿತವಾಗಿದ್ದರೆ ಕಲಬೆರಕೆಯಿಂದ ಕೂಡಿದ್ದರೆ ಅವಧಿ ಮೀರಿದ ಪದಾರ್ಥ ಮಾರಾಟ ಮಾಡುತ್ತಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಮತ್ತೊಮ್ಮೆ ಸಭೆ ನಡೆಸಿ ಪರಿಶೀಲಿಸುತ್ತೇನೆ –ಮಂಗಳಾ ಹೆಚ್ಚುವರಿ ಜಿಲ್ಲಾಧಿಕಾರಿ ಕೋಲಾರ

ಗುರಿ ತಪ್ಪಿದ ಇಲಾಖೆ!

ಪ್ರತಿ ತಿಂಗಳು ಇಂತಿಷ್ಟು ಮಾದರಿಗಳ ಪರೀಕ್ಷೆ ನಡೆಸುವ ಗುರಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ನೀಡಲಾಗಿದೆ. ಅದರಂತೆ ಪ್ರತಿ ತಾಲ್ಲೂಕಿನಲ್ಲಿ ಪ್ರತಿ ತಿಂಗಳು 5 ಕಾನೂನು ಬದ್ಧ ಮಾದರಿ ಹಾಗೂ 25 ಸಮೀಕ್ಷಾ ಮಾದರಿಗಳನ್ನು ಸಂಗ್ರಹಿಸಬೇಕಾಗುತ್ತದೆ. 2024ರಲ್ಲಿ ಜನವರಿಯಿಂದ ಜೂನ್ ಅಂತ್ಯದವರೆಗಿನ ಅಂಕಿ ಅಂಶ ಗಮನಿಸಿದರೆ ಮಾದರಿ ಸಂಗ್ರಹ ಕಾರ್ಯ ಅಮೆಗತಿಯಲ್ಲಿ ಸಾಗಿರುವುದು ಸಾಬೀತಾಗುತ್ತದೆ. ಜಿಲ್ಲೆಯ 5 ತಾಲ್ಲೂಕುಗಳಿಂದ6 ತಿಂಗಳಲ್ಲಿ 150 ಕಾನೂನುಬದ್ಧ ಮಾದರಿಗಳು ಹಾಗೂ 750 ಸಮೀಕ್ಷಾ ಮಾದರಿಗಳನ್ನು ಸಂಗ್ರಹಿಸಬೇಕಾಗಿತ್ತು. ಆದರೆ 64 ಕಾನೂನುಬದ್ಧ ಮಾದರಿ ಹಾಗೂ 133 ಸಮೀಕ್ಷಾ ಮಾದರಿ ಸಂಗ್ರಹಿಸಿಸಲಾಗಿದೆ.

ಇಲಾಖೆಯಲ್ಲಿ ಒಬ್ಬರೇ ಕಾಯಂ ಅಧಿಕಾರಿ!

ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ 8 ಕಾಯಂ ಹುದ್ದೆಗಳು ಮಂಜೂರಾಗಿದ್ದು ಕೇವಲ ಒಬ್ಬ ಅಧಿಕಾರಿ ಮಾತ್ರ ಇದ್ದಾರೆ. ಅದೂ ಜಿಲ್ಲಾ ಅಂಕಿತ ಅಧಿಕಾರಿ (ಡಾ.ರಾಕೇಶ್‌ ಸಿ.) ಮಾತ್ರ. ಇನ್ನುಳಿದ 7 ಹುದ್ದೆಗಳು ಖಾಲಿ ಇವೆ. ತಾಲ್ಲೂಕಿಗೆ ಒಬ್ಬ ಆಹಾರ ಸುರಕ್ಷತಾಧಿಕಾರಿ ಇರಬೇಕಿತ್ತು. ಸದ್ಯ ಒಬ್ಬರೂ ಇಲ್ಲ. ಹಿರಿಯ ಆಹಾರ ಸುರಕ್ಷತಾಧಿಕಾರಿ ಎಫ್‌ಡಿಎ ಕೂಡ ಇಲ್ಲ. ಒಬ್ಬಆಹಾರ ಸುರಕ್ಷತಾಧಿಕಾರಿಯನ್ನು (ಶ್ರೀನಿಧಿ) ಪ್ರಭಾರದ ಮೇಲೆ ನಿಯೋಜಿಸಲಾಗಿದೆ.

ಪೊಟ್ಟಣಕ್ಕೆ ಪೇಪರ್‌ ಬಳಕೆ

ಕರಿದ ಪೂರಿ ಹಾಕಲು ಬೋಂಡಾ ಬಜ್ಜಿ ಹಾಗೂ ಇನ್ನಿತರ ಬೇಕರಿ ಆಹಾರ ಪದಾರ್ಥ ಕಟ್ಟಿಕೊಡಲು ದಿನಪತ್ರಿಕೆ ಬಳಸುತ್ತಿರುವುದು ಕಂಡುಬರುತ್ತಿದೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಪತ್ರಿಕೆಗಳಲ್ಲಿ ಕಟ್ಟಿಕೊಡುವುದು ಅಪಾಯಕಾರಿ ಎನ್ನುತ್ತಾರೆ ವೈದ್ಯರು ಹಾಗೂ ಆಹಾರ ತಜ್ಞರು. ಪತ್ರಿಕೆಗಳನ್ನು ಮುದ್ರಿಸಲು ಬಳಸುವ ಇಂಕ್‌ನಲ್ಲಿ ಕಾರ್ಬನ್‌ಯುಕ್ತ ರಾಸಾಯನಿಕ ಅಂಶವಿರುತ್ತದೆ. ಕರಿದ ಪದಾರ್ಥ ಕಟ್ಟಿಕೊಡುವುದರಿಂದ ಆಹಾರದೊಂದಿಗೆ ರಾಸಾಯನಿಕ ಅಂಶ ಮಿಶ್ರಣವಾಗುತ್ತದೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT