ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌: ಆಹಾರ ಪದಾರ್ಥಗಳ ಕೃತಕ ಬಣ್ಣಕ್ಕೆ ಕಡಿವಾಣ; ನಗರಸಭೆಯ ಕಾರ್ಯಾಚರಣೆ ಫಲ

ಕೃಷ್ಣಮೂರ್ತಿ
Published : 23 ಸೆಪ್ಟೆಂಬರ್ 2024, 6:17 IST
Last Updated : 23 ಸೆಪ್ಟೆಂಬರ್ 2024, 6:17 IST
ಫಾಲೋ ಮಾಡಿ
Comments

ಕೆಜಿಎಫ್‌: ಗ್ರಾಹಕರನ್ನು ಸೆಳೆಯಲು ಆಹಾರ ಪದಾರ್ಥಗಳಿಗೆ ಕೃತಕ ಬಣ್ಣಗಳನ್ನು ಲೇಪಿಸಿ, ಮಾರಾಟ ಮಾಡುತ್ತಿದ್ದ ದಂಧೆಯು ನಗರದಲ್ಲಿ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಇದರಿಂದಾಗಿ ರಾಬರ್ಟ್‌ಸನ್ ಪೇಟೆ ಸೇರಿದಂತೆ ತಾಲ್ಲೂಕಿನ ಇತರ ಪಟ್ಟಣಗಳಲ್ಲಿ ಬಣ್ಣರಹಿತ ಆಹಾರ ಪದಾರ್ಥಗಳು ಗ್ರಾಹಕರಿಗೆ ಸಿಗುತ್ತಿವೆ. 

ನಗರಸಭೆ ಅಧಿಕಾರಿಗಳ ನಿರಂತರ ಕಾರ್ಯಾಚರಣೆ ಪರಿಣಾಮದಿಂದಾಗಿ ರಸ್ತೆ ಬದಿ ವ್ಯಾಪಾರಿಗಳಿಂದ ಮೊದಲ್ಗೊಂಡು ಆಕರ್ಷಕ ವಿನ್ಯಾಸ ಮಾಡಿದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ಆಹಾರ ಪದಾರ್ಥಗಳಿಗೆ ಲೇಪಿಸಲಾಗುತ್ತಿದ್ದ ಕೃತಕ ಬಣ್ಣಗಳ ಬಳಕೆಗೆ ಸ್ವಲ್ಪ ಕಡಿವಾಣ ಬಿದ್ದಂತೆ ಕಂಡುಬರುತ್ತಿದೆ. ಇದರಿಂದಾಗಿ ಒಂದೆರಡು ತಿಂಗಳಿನಿಂದ ಗ್ರಾಹಕರಿಗೆ ಹೋಟೆಲ್, ರೆಸ್ಟೊರೆಂಟ್ ಮತ್ತು ಬೀದಿಬದಿ ಹೋಟೆಲ್‌ಗಳಲ್ಲಿ ಬಣ್ಣರಹಿತವಾದ ಆಹಾರಗಳು ಲಭ್ಯವಾಗುತ್ತಿವೆ. 

ಇದಕ್ಕೂ ಮುನ್ನ ಪಾನಿಪುರಿ ಅಂಗಡಿಯಲ್ಲಿ ಬಳಸಲಾಗುವ ಕಡಲೆ, ಬಟಾಣಿ ಮತ್ತು ಪಾನಿಗೆ ಕೃತಕ ಬಣ್ಣ ಬಳಸಲಾಗುತ್ತಿತ್ತು. ಗೋಬಿ ಮಂಚೂರಿ ಸೇರಿದಂತೆ ಚೈನೀಸ್‌ ಪದಾರ್ಥಗಳಿಗೆ ಕೃತಕ ಬಣ್ಣವನ್ನು ಎಗ್ಗಿಲ್ಲದೆ ಬಳಕೆಯಾಗುತ್ತಿತ್ತು. ಸ್ವೀಟ್‌ಗಳು ಆಕರ್ಷಣೆಯಾಗಿ ಕಾಣುವಂತೆ ಮಾಡಲು ಸಿಹಿ ಅಂಗಡಿಗಳ ಮಾಲೀಕರೂ ಕೃತಕ ಬಣ್ಣಗಳ ಮೊರೆ ಹೋಗುತ್ತಿದ್ದದ್ದು ಉಂಟು. 

ಈಚೆಗೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಲವಾರು ಸಲ ಸಿಹಿತಿಂಡಿ ತಯಾರಿಸುವ ಅಂಗಡಿಗಳು, ಹೋಟೆಲ್‌ಗಳು ಮತ್ತು ಬೀದಿಬದಿ ವ್ಯಾಪಾರಿಗಳ ಅಂಗಡಿಗಳು ಮತ್ತು ಅವುಗಳನ್ನು ತಯಾರಿಸುವ ಸ್ಥಳಗಳ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಅವಧಿ ಮೀರಿದ ಬಣ್ಣದ ಸೀಸೆಗಳು, ಕೆಟ್ಟುಹೋದ ಪದಾರ್ಥಗಳು, ನಿಷೇಧಿತ ಸಿಂಥೆಟಿಕ್ ಬಣ್ಣದ ಡಬ್ಬಿಗಳು ಯಥೇಚ್ಛವಾಗಿ ಕಂಡುಬಂದಿದ್ದವು. ಮಾಂಸಾಹಾರ ಪದಾರ್ಥ ಮಾರಾಟ ಮಾಡುವ ವ್ಯಾಪಾರಿಗಳು ಬಣ್ಣವಿಲ್ಲದ ತಿಂಡಿಗಳನ್ನು ತಯಾರಿಸುವುದನ್ನೇ ಮರೆತಂತಿದ್ದರು. ಚಿಕ್ಕನ್‌ ಕಬಾಬ್‌, ಶೊವರ್ಮಾ ಸೇರಿದಂತೆ ಇನ್ನಿತರ ಮಾಂಸಾಹಾರಗಳಿಗೆ ಸಿಂಥೆಟಿಕ್ ಬಣ್ಣಗಳನ್ನು ಬಳಸುತ್ತಿದ್ದದ್ದು ಕಂಡುಬಂದಿತ್ತು. 

ನಗರಸಭೆ ಅಧಿಕಾರಿಗಳ ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಕ್ರಮದಿಂದಾಗಿ ಬಹುತೇಕ ಅಂಗಡಿಗಳಲ್ಲಿ ಸಿಂಥೆಟಿಕ್ ಬಣ್ಣ ರಹಿತ ಮತ್ತು ಸ್ವಾಭಾವಿಕ ಬಣ್ಣಗಳನ್ನು ಮಾತ್ರವೇ ತಾವು ತಯಾರಿಸುವ ಆಹಾರದಲ್ಲಿ ಬಳಸುತ್ತಿದ್ದೇವೆ ಎಂಬ ಫಲಕಗಳನ್ನು ವರ್ತಕರು ತಮ್ಮ ಅಂಗಡಿಗಳ ಮುಂದೆ ಹಾಕಿದ್ದಾರೆ. 

ಸಿಂಥೆಟಿಕ್ ಮತ್ತು ಸ್ವಾಭಾವಿಕ ಬಣ್ಣಗಳ ಬಗ್ಗೆ ವರ್ತಕರು ಮತ್ತು ಗ್ರಾಹಕರಿಗೆ ಅರಿವು ಮೂಡಿಸಿರುವುದು ಮತ್ತು ದಂಡದ ಪ್ರಮಾಣವನ್ನು ಹೆಚ್ಚಿಸುವ ಬೆದರಿಕೆ ಹಾಕಿದ್ದ ಪರಿಣಾಮ ಕೃತಕ ಬಣ್ಣದ ಬಳಕೆಗೆ ವರ್ತಕರು ತಿಲಾಂಜಲಿ ನೀಡಿದ್ದಾರೆ. ಕದ್ದುಮುಚ್ಚಿ ಬಣ್ಣ ಹಾಕುತ್ತಿರುವ ಗಲ್ಲಿ ವ್ಯಾಪಾರಿಗಳ ಮೇಲೂ ಕ್ರಮ ಕೈಗೊಳ್ಳಲು ನಗರಸಭೆ ಮುಂದಾಗಿದೆ. ನಗರಸಭೆಯ ಕಾರ್ಯಾಚರಣೆಯಿಂದಾಗಿ ಬಣ್ಣಗಳಲ್ಲಿ ಹೊಳೆಯುತ್ತಿದ್ದ ತಿಂಡಿ ತಿನಿಸುಗಳು ಈಗ ಸ್ವಾಭಾವಿಕ ಬಣ್ಣಕ್ಕೆ ಬಂದಿದೆ. ಗ್ರಾಹಕರು ಕೂಡ ಅದಕ್ಕೆ ಹೊಂದಿಕೊಂಡಿದ್ದಾರೆ ಎಂದು ನಗರಸಭೆ ಆಯುಕ್ತ ಪವನ್‌ಕುಮಾರ್ ಹೇಳುತ್ತಾರೆ.

ಬಣ್ಣವಿದ್ದ ಮಾಂಸಾಹಾರ ಪದಾರ್ಥಗಳನ್ನು ವಶಪಡಿಸಿಕೊಂಡ ನಗರಸಭೆ ಸಿಬ್ಬಂದಿ
ಬಣ್ಣವಿದ್ದ ಮಾಂಸಾಹಾರ ಪದಾರ್ಥಗಳನ್ನು ವಶಪಡಿಸಿಕೊಂಡ ನಗರಸಭೆ ಸಿಬ್ಬಂದಿ
ನಗರದಲ್ಲಿ ಲಭ್ಯವಾಗುತ್ತಿರುವ ಬಣ್ಣರಹಿತ ಶವೊರ್ಮ
ನಗರದಲ್ಲಿ ಲಭ್ಯವಾಗುತ್ತಿರುವ ಬಣ್ಣರಹಿತ ಶವೊರ್ಮ

ಅಂಗಡಿ ಮಾಲೀಕರಿಗೆ ಮನವರಿಕೆ

ನಗರಸಭೆ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಹಲವು ಅಂಗಡಿ ಮಾಲೀಕರು ಮತ್ತು ಆಹಾರ ತಯಾರಕರು ‘ತಾವು ಉಪಯೋಗಿಸುತ್ತಿರುವ ಸಿಂಥೆಟಿಕ್ ಬಣ್ಣ ಸಹಜವಾದ ಬಣ್ಣವಾಗಿದೆ. ಅದು ಬ್ರಾಂಡೆಡ್ ಕಂಪನಿಯದ್ದು ಅದನ್ನು ಆಹಾರ ಪದಾರ್ಥಗಳಲ್ಲಿ ಬಳಸುವುದರಿಂದ ಆರೋಗ್ಯ ಮೇಲೆ ಯಾವುದೇ ದುಷ್ಪರಿಣಾಮವಾಗದು ಎಂದು ಹೇಳಲಾಗುತ್ತಿದೆ’ ಎಂಬಂಥ ಮುಗ್ದವಾದ ಉತ್ತರ ನೀಡಿದ್ದರು.  ಆಗ ಅಧಿಕಾರಿಗಳು ಎಲ್ಲ ಸಿಂಥಿಟೆಕ್ ಬಣ್ಣ ಸೇರಿದಂತೆ ಎಲ್ಲ ಕೃತಕ ಬಣ್ಣಗಳ ಬಳಕೆಗೆ ರಾಜ್ಯ ಸರ್ಕಾರವು ನಿಷೇಧ ಹೇರಿದೆ. ಸ್ವಾಭಾವಿಕ ಬಣ್ಣಗಳನ್ನು ಬಳಸಲು ಮಾತ್ರವೇ ಅವಕಾಶವಿದೆ ಎಂದು ಹೋಟೆಲ್ ರೆಸ್ಟೊರೆಂಟ್ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. 

ದಂಡದಿಂದ ₹1 ಲಕ್ಷ ಸಂಗ್ರಹ

ಹಲವಾರು ವರ್ಷಗಳಿಂದ ತಾವು ಮಾರುತ್ತಿರುವ ಆಹಾರ ಪದಾರ್ಥಗಳಲ್ಲಿ ಸಿಂಥೆಟಿಕ್ ಸೇರಿದಂತೆ ಇನ್ನಿತರ ರಾಸಾಯನಿಕ ಬಣ್ಣಗಳನ್ನು ಸಹಜವಾಗಿ ಬಳಸುತ್ತಿದ್ದೇವೆ ಎಂದು ವ್ಯಾಪಾರಿಗಳು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದರು.  ಉದ್ಧಟತನ ಪ್ರದರ್ಶಿಸಿದ ವ್ಯಾಪಾರಿಗಳಿಗೆ ದಂಡ ವಿಧಿಸಿದರು. ಕೃತಕ ಬಣ್ಣ ನಿಯಂತ್ರಣಕ್ಕೆ ನಗರಸಭೆ ಅಧಿಕಾರಿಗಳು ಕೈಗೊಂಡ ಕಾರ್ಯಾಚರಣೆಯಿಂದಾಗಿ ಒಂದೆರಡು ತಿಂಗಳಲ್ಲಿ ನಗರಸಭೆ ಖಾತೆಗೆ ದಂಡದ ರೂಪದಲ್ಲಿ ₹1 ಲಕ್ಷಕ್ಕೂ ಹೆಚ್ಚು ಹಣ ಹರಿದುಬಂದಿದೆ. 

ಇಷ್ಟು ದಿನ ಮಾಂಸಾಹಾರಕ್ಕೆ ಬಣ್ಣ ಹಾಕುತ್ತಾರೆ ಎಂಬ ವಿಷಯ ಗೊತ್ತಿರಲಿಲ್ಲ. ಬಣ್ಣ ಬದಲಾದ ಬಗ್ಗೆ ವಿಚಾರಿಸಿದಾಗ ಗೊತ್ತಾಯಿತು.
-ಯೋಗೇಶ್‌ ಕಾಲೇಜು ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT