ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಡಾಂಬರು ಕಾಣದ ಗ್ರಾಮೀಣ ರಸ್ತೆ, ತಪ್ಪಿಲ್ಲ ಜನರಿಗೆ ಅವಸ್ಥೆ

ಮುಳಬಾಗಿಲು: 374 ಗ್ರಾಮಗಳಲ್ಲಿ ಶೇ 50 ಗ್ರಾಮಗಳಲ್ಲಿ ಇಲ್ಲ ಸೂಕ್ತ ರಸ್ತೆ
Published 1 ಜುಲೈ 2024, 7:10 IST
Last Updated 1 ಜುಲೈ 2024, 7:10 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಹಲವೆಡೆ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ‌ಹಾಳಾಗಿವೆ.

ಡಾಂಬರು ಹಾಕಿದ್ದ ಬಹುತೇಕ ರಸ್ತೆಗಳು ಕಚ್ಚಾ ರಸ್ತೆಗಳಾಗಿವೆ. ಇಲ್ಲಿ ರಸ್ತೆ ಇತ್ತು ಎಂಬುದನ್ನೇ ಮರೆಮಾಚಿಸುವಂತೆ ಅಲ್ಲಲ್ಲಿ ಎದ್ದುಬಂದಿರು ಜಲ್ಲಿಕಲ್ಲುಗಳು, ಡಾಂಬರು ಕರಗಿ ಹೋಗಿವೆ. ಇದರಿಂದಾಗಿ ಗ್ರಾಮೀಣ ಭಾಗಗಳಲ್ಲಿ ಜನರು ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಸಂಚರಿಸಲು ಪರದಾಡುವಂತಾಗಿದೆ. ವಾಹನಗಳಿದ್ದರೂ ಅವುಗಳನ್ನು ಈ ರಸ್ತೆಯಲ್ಲಿ ಹೇಗೆ ಓಡಿಸುವುದು ಎಂಬ ಚಿಂತೆ ವಾಹನ ಸವಾರರದ್ದು.

ತಾಲ್ಲೂಕಿನಲ್ಲಿ ಒಟ್ಟು 374 ಗ್ರಾಮಗಳಿದ್ದು ಸುಮಾರು ಶೇ 50ರಷ್ಟು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಕೆಲವು ಕಡೆ ಕಲ್ಲು ಜಲ್ಲಿಯಿಂದ ಕೂಡಿದ್ದರೆ, ಕೆಲವು ರಸ್ತೆಗಳು ಗುಂಡಿಗಳಿಂದ ಕೂಡಿದ್ದರೆ, ಕೆಲವು ರಸ್ತೆಗಳಲ್ಲಿ ಡಾಂಬರು ಅಲ್ಲಲ್ಲಿ ಕಿತ್ತು ಬಂದಿದೆ. ಮತ್ತೆ ಕೆಲವು ರಸ್ತೆಗಳು ಇದುವರೆಗೂ ಡಾಂಬರಿನ ಮುಖವನ್ನೇ ಕಂಡಿಲ್ಲ. ಕೆಲವು ರಸ್ತೆಗಳಲ್ಲಿ ಡಾಂಬರು ಹಾಕಿದ್ದರೂ ಇಲ್ಲದಂತೆಯೇ ಇದೆ.

ತಾಲ್ಲೂಕಿನ ಐದೂ ಹೋಬಳಿಗಳಲ್ಲಿ ಬಹುತೇಕ ಗ್ರಾಮಾಂತರ ಭಾಗಕ್ಕೆ ಸಂಚಾರ ಕಲ್ಪಿಸುವ ರಸ್ತೆಗಳು ಜನರ ಸಂಚರಿಸಲಾಗದಂತಹ ಸ್ಥಿತಿ ತಲುಪಿವೆ. ಕೆಲವು ಗ್ರಾಮಾಂತರ ರಸ್ತೆಗಳು ಮೃತ್ಯು ಮಾರ್ಗಗಳಂತೆಯೇ ಇವೆ.

ಬೈರಕೂರು, ದುಗ್ಗಸಂದ್ರ, ಆವಣಿ, ತಾಯಲೂರು, ಕಸಬಾ ಹೋಬಳಿಯ ಸಂಪರ್ಕ ರಸ್ತೆಗಳು ಒಂದಲ್ಲಾ ಒಂದು ರೀತಿಯಲ್ಲಿ ತನ್ನ ಮೂಲ ರೂಪವನ್ನೇ ಕಳೆದುಕೊಂಡಿವೆ. ಕೆಲವು ರಸ್ತೆಗಳು ಓಡಾಡಲೇ ಆಗದ ರೀತಿಯಲ್ಲಿ ಇದ್ದರೆ, ಮತ್ತೆ ಕೆಲವು ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ. ಕೆರಸಿಮಂಗಲ, ಮರವೇಮನೆ, ನಗವಾರ, ಮಲ್ಲೆಕುಪ್ಪ, ಸೂರುಕುಂಟೆ , ಬೈಯಪ್ಪನಹಳ್ಳಿ, ಬಾಳಸಂದ್ರ, ಅಣೆಹಳ್ಳಿ, ಪೆರಮಾಕನಹಳ್ಳಿ, ಸೂರುಕುಂಟೆ, ಮಲ್ಲೆಕುಪ್ಪ, ಟಿ.ಕುರುಬರಹಳ್ಳಿ, ಗೋಣಿಕೊಪ್ಪ, ಪಿಚ್ಚಗುಂಟ್ಲಹಳ್ಳಿ, ಮಿಣಜೇನಹಳ್ಳಿ, ಗುಡಿಪಲ್ಲಿಯ ಮೂಲಕ ಗೂಕುಂಟೆ, ಎಂ.ಚಮಕಲಹಳ್ಳಿ ಮತ್ತಿತರರ ಭಾಗದ ರಸ್ತೆಗಳಂತೂ ಓಡಾಡಲು ಆಗದಂತೆ ಇವೆ. ಹೀಗಾಗಿ ಸರ್ಕಾರ ತಾಲ್ಲೂಕಿನ ಗ್ರಾಮಾಂತರ ಭಾಗದ ರಸ್ತೆಗಳನ್ನು ಉತ್ತಮ ಪಡಿಸಬೇಕೆಂಬುದು ಜನರ ಬೇಡಿಕೆ.

ಡಾಂಬರು ಇದ್ದೂ ಇಲ್ಲದ ಕೆರಸಿಮಂಗಲ ರಸ್ತೆ: ಸುಮಾರು ಎರಡು ವರ್ಷಗಳ ಹಿಂದೆ ನಂಗಲಿಗೆ ಕೇವಲ 2 ಕಿ.ಮೀ. ದೂರದಲ್ಲಿರುವ ಕೆರಸಿಮಂಗಲಕ್ಕೆ ಕೆರೆಯ ಕಟ್ಟೆಯ ಕೆಳಗೆ ರಸ್ತೆ ನಿರ್ಮಾಕ್ಕೆ ಜಲ್ಲಿ ಕಲ್ಲುಗಳನ್ನು ಹಾಕಲಾಗಿತ್ತು. ಸುಮಾರು 300ಮೀಟರ್ ಡಾಂಬರು ಕೂಡಾ ಹಾಕಲಾಗಿತ್ತು. ಆದರೆ ಏಕಾಏಕಿ ಹಣ ಸಾಕಾಗುತ್ತಿಲ್ಲ ಎಂದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಕಾಮಗಾರಿ ನಿಂತು ಎರಡು ವರ್ಷಗಳಾಗಿದ್ದು,  ಹಾಕಿದ್ದ ಡಾಂಬರು ಕಿತ್ತು ಬಂದಿದ್ದರೆ ಜಲ್ಲಿ ಕಲ್ಲುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ವಾಹನ ಸವಾರರು ಪ್ರಾಣದ ಹಂಗು ತೊರೆದು ಸಂಚರಿಸುವ ಸ್ಥಿತಿ ಉಂಟಾಗಿದೆ.

ಭರವಸೆಯಲ್ಲೇ ಸಂಚಾರ: ತಾಲ್ಲೂಕಿನ ಮುಷ್ಟೂರು ಗ್ರಾಮದಿಂದ ಮರವೇಮನೆ ಗ್ರಾಮಕ್ಕೆ ₹ 83 ಲಕ್ಷ ವೆಚ್ಚದಲ್ಲಿ ಡಾಂಬರು ರಸ್ತೆಗೆ ಅನುಮೋದನೆಯಾಗಿದೆ ಎಂದು ಈ ಹಿಂದಿನ ಸರ್ಕಾರದಲ್ಲಿ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಆದರೆ ಭರವಸೆ ಕೇವಲ ಸುಳ್ಳಾಗಿ ಜನ ಕಲ್ಲುಗಳು, ಗುಂಡಿಗಳು, ಮರಳು ಮಿಶ್ರಿತ ಮಣ್ಣಿನಲ್ಲಿಯೇ ಓಡಾಡ ಬೇಕಾದ ಸ್ಥಿತಿಯಲ್ಲಿ ಇದ್ದಾರೆ.

ಆಂಧ್ರದ್ದು ಸಿಮೆಂಟ್ ರಸ್ತೆ ಕರ್ನಾಟಕದ್ದು ಗುಂಡಿಗಳ ರಸ್ತೆ: ರಾಜ್ಯದ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶ ಆಲಲುಪ್ಪಂ ಮೂಲಕ ರಾಜ್ಯದ ತಿಪ್ಪದೊಡ್ಡಿ ಗ್ರಾಮಕ್ಕೆ ಸಂಚರಿಸಲು ಎರಡೂ ರಾಜ್ಯಗಳ ರಸ್ತೆಗಳಿವೆ. ಇವುಗಳಲ್ಲಿ ಸುಮಾರು 200 ಮೀಟರ್ ಆಂಧ್ರಪ್ರದೇಶದ ರಸ್ತೆ ಸಿಮೆಂಟ್ ರಸ್ತೆಯಾಗಿ ಸುಸಜ್ಜಿತವಾಗಿದ್ದರೆ, ಇನ್ನರ್ಧ ರಾಜ್ಯದ ರಸ್ತೆ ಗುಂಡಿಗಳಿಂದ ಕೂಡಿದೆ. ಮಳೆಗಾಲ ಬಂದರೆ ರಸ್ತೆಯನ್ನೇ ಬಿಟ್ಟು ನೆರೆಯ ಗ್ರಾಮಗಳ ಮೂಲಕ ತಿಪ್ಪದೊಡ್ಡಿ, ಕೆ.ಉಗಿಣಿ ಕಡೆಗೆ ಸಂಚರಿಸಬೇಕಾಗಿದೆ.

ಕೆ.ಬೈಯಪ್ಪನಹಳ್ಳಿ ರಸ್ತೆಗಿಲ್ಲ ಮೋಕ್ಷ:  ಕೆ.ಬೈಯಪ್ಪನಹಳ್ಳಿ ಮೂಲ ಆಂಧ್ರದ ತೀರ್ಥಂ ಕಡೆಗೆ ಹೋಗುವ ರಸ್ತೆ ಸ್ವಲ್ಪ ಭಾಗ ಸುಸಜ್ಜಿತವಾದ ಡಾಂಬರಿನಿಂದ ಕೂಡಿದೆ. ಆದರೆ, ಇದೇ ರಸ್ತೆಯ ಕೆಲಭಾಗದಲ್ಲಿ ಡಾಂಬರು ಕಿತ್ತುಬಂದಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಸ್ವಲ್ಪ ಯಾಮಾರಿದರೆ ಸಾಕು ಕೈಕಾಲು ಮುರಿಯುವುದು ಖಚಿತ.

ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಭಾಗದ ರಸ್ತೆಗಳನ್ನು ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ವಿವಿಧ ಗ್ರಾಮಗಳ ಜನರ ಆಗ್ರಹ.

ಸೂರುಕುಂಟೆ ರಸ್ತೆ ಅರ್ಧಕ್ಕೆ ಕಿತ್ತು ನಾಶವಾಗಿದೆ
ಸೂರುಕುಂಟೆ ರಸ್ತೆ ಅರ್ಧಕ್ಕೆ ಕಿತ್ತು ನಾಶವಾಗಿದೆ
ನಂಗಲಿ ಕೆರಸಿಮಂಗಲ ಕಟ್ಟೆಯ ಕೆಳಗಿನ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದು ಬಂದಿವೆ
ನಂಗಲಿ ಕೆರಸಿಮಂಗಲ ಕಟ್ಟೆಯ ಕೆಳಗಿನ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದು ಬಂದಿವೆ
ತಾಲ್ಲೂಕಿನ ಅರ್ಧದಷ್ಟು ರಸ್ತೆಗಳು ಹಾಳಾಗಿವೆ. ಸರ್ಕಾರ ಗ್ರಾಮೀಣ ರಸ್ತೆಗಳ ನಿರ್ಮಾಣ ಮತ್ತು ರಿಪೇರಿಗೆ ವಿಶೇಷ ಗಮನ ನೀಡಬೇಕಿದೆ.
ಪ್ರಭಾಕರ್ ಅಂಬ್ಲಿಕಲ್ ಯಲುವಹಳ್ಳಿ
ಮಳೆಗೆ ಬಹುತೇಕ ರಸ್ತೆಗಳು ಹಾಳಾಗಿವೆ. ಚುನಾವಣಾ ನೀರಿಸಂಹಿತೆ ಇದ್ದ ಕಾರಣ ಕಾಮಗಾರಿ ಅರರ್ಧಕ್ಕೆ ನಿಂತಿವೆ. ಶಾಸಕರ ಅನುದಾನ ಹಾಗೂ ನರೇಗಾ ಯೋಜನೆ ಅಡಿ ಶೀಘ್ರದಲ್ಲೇ ರಸ್ತೆ ಕಾಮಗಾರಿ ಆರಂಭವಾಗಲಿದೆ.
ಬಿ.ಆರ್. ಮುನಿವೆಂಕಟಪ್ಪ ಗ್ರೇಡ್‌– 2 ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT