ಶನಿವಾರ, 8 ನವೆಂಬರ್ 2025
×
ADVERTISEMENT
ADVERTISEMENT

ಮುಚ್ಚಿದ ಶಾಲೆ, ದುರಸ್ತಿಯಾಗದ ಚರಂಡಿ: ಸೌಲಭ್ಯಗಳಿಂದ ವಂಚಿತ ಪೂರಮಾಕನಹಳ್ಳಿ

Published : 31 ಜನವರಿ 2025, 7:13 IST
Last Updated : 31 ಜನವರಿ 2025, 7:13 IST
ಫಾಲೋ ಮಾಡಿ
0
ಮುಚ್ಚಿದ ಶಾಲೆ, ದುರಸ್ತಿಯಾಗದ ಚರಂಡಿ: ಸೌಲಭ್ಯಗಳಿಂದ ವಂಚಿತ ಪೂರಮಾಕನಹಳ್ಳಿ

ಮಾಲೂರು ತಾಲ್ಲೂಕಿನ ದೊಡ್ಡ ಶಿವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂರಮಾಕನಹಳ್ಳಿಯಲ್ಲಿ ರಸ್ತೆ ಹಾಳಾಗಿ, ಜಲ್ಲಿಕಲ್ಲುಗಳು ಮೇಲೆ ಬಂದಿರುವುದು


ಮಾಲೂರು: ತಾಲ್ಲೂಕಿನ ಪೂರಮಾನಕಹಳ್ಳಿ ಗ್ರಾಮಸ್ಥರು ಹತ್ತಾರು ವರ್ಷಗಳಿಂದ ಸಾರಿಗೆ ಬಸ್, ಕನಿಷ್ಠ ಮೂಲ ಸೌಕರ್ಯಗಳು ಹಾಗೂ ಮಕ್ಕಳಿಗೆ ವಿದ್ಯೆ ಕಲಿಕೆಗೆ ಅಗತ್ಯವಿರುವ ಶಾಲೆ ಇಲ್ಲದ ಪರಿಸ್ಥಿತಿಯಲ್ಲಿದ್ದರೂ, ಈ ಗ್ರಾಮದ ಜನರ ಗೋಳು ಮಾತ್ರ ಯಾರಿಗೂ ಕೇಳದೆ ಇರುವುದು ವ್ಯವಸ್ಥೆಯ ಜಾಣ ಕುರುಡತನಕ್ಕೆ ಹಿಡಿದ ಕನ್ನಡಿಯಾಗಿದೆ. 

ADVERTISEMENT
ADVERTISEMENT

15 ವರ್ಷಗಳ ಹಿಂದೆ ಗ್ರಾಮದಲ್ಲಿ 1ರಿಂದ 5ನೇ ತರಗತಿವರೆಗಿನ ಪ್ರಾಥಮಿಕ ಶಾಲೆ ಇತ್ತು. ಶಾಲೆಯಲ್ಲಿ 15 ಮಕ್ಕಳು ಕಲಿಯುತ್ತಿದ್ದರು. ಆದರೆ, ಶಿಕ್ಷಕರ ಕೊರತೆ, ಮಕ್ಕಳ ಹಾಜರಾತಿ ಕಡಿಮೆ ಹಾಗೂ ಶಾಲೆ ಶಿಥಿಲಾವಸ್ಥೆ ತಲುಪಿದೆ ಎಂಬ ಕಾರಣಕ್ಕೆ ಸುಮಾರು 7–8 ವರ್ಷಗಳ ಹಿಂದೆಯೇ ಆ ಶಾಲೆಯನ್ನು ಮುಚ್ಚಲಾಗಿದೆ. ಆದರೆ, ಈವರೆಗೆ ಗ್ರಾಮದಲ್ಲಿ ಹೊಸ ಸರ್ಕಾರಿ ಶಾಲೆ ಆರಂಭವಾಗಿಲ್ಲ. ಇದರಿಂದಾಗಿ ಗ್ರಾಮದ ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕಾಗಿ ಸುಮಾರು 1.5 ಕಿ. ಮೀ ದೂರದಲ್ಲಿರುವ ಹರಿಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ದಾಖಲಾಗಿದ್ದರೆ, 6ರಿಂದ 8ನೇ ತರಗತಿ ಮಕ್ಕಳು 2 ಕಿ.ಮೀ ದೂರ ಇರುವ ದೊಡ್ಡ ಶಿವಾರ ಗ್ರಾಮದ ಪ್ರೌಢಶಾಲೆಯನ್ನು ಅವಲಂಬಿಸಿದ್ದಾರೆ. ಆದರೆ, ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳು ಪ್ರತಿನಿತ್ಯವೂ ಅಷ್ಟು ದೂರ ನಡೆದುಕೊಂಡೇ ಹೋಗಿಬರುವ ಅನಿವಾರ್ಯತೆ ಇದೆ. 

ತಾಲ್ಲೂಕಿನ ದೊಡ್ಡ ಶಿವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂರಮಾಕನಹಳ್ಳಿ ಗ್ರಾಮದಲ್ಲಿ ಸುಮಾರು 70 ಕುಟುಂಬಗಳಿದ್ದು, 162 ಮತದಾರಿದ್ದಾರೆ. ಗ್ರಾಮದಲ್ಲಿ ರೆಡ್ಡಿ ಸಮುದಾಯವರೇ ಹೆಚ್ಚಿದ್ದಾರೆ. ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ ಮತ್ತು ಬೀದಿ ದೀಪಗಳ ಸೌಲಭ್ಯ ಇಲ್ಲದೆ ಗ್ರಾಮಸ್ತರು ತೊಂದರೆ ಪಡುತ್ತಿದ್ದಾರೆ. ಗ್ರಾಮದಲ್ಲಿರುವ ಏಕೈಕ ಚರಂಡಿಯಲ್ಲಿ ಕೆಸರು ನಿಂತಿದ್ದು, ಕಲುಷಿತ ನೀರು ನಿಂತಲ್ಲೇ ನಿಂತು, ಗಬ್ಬು ನಾರುತ್ತಿದೆ. 

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ಹೀಗಾಗಿ, ಮಕ್ಕಳು ಸೇರಿದಂತೆ ಯಾರೇ ರೋಗ ರುಜಿನಗಳಿಗೆ ತುತ್ತಾದರೂ, ದೊಡ್ಡ ಶಿವಾರ ಗ್ರಾಮಕ್ಕೆ ಹೋಗಬೇಕಿದೆ. ಆದರೆ, ಈ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ದ್ವಿಚಕ್ರ ವಾಹನ ಚಲಾಯಿಸಲು ಹರಸಾಹಸ ಪಡಬೇಕಿದೆ.

ADVERTISEMENT

ಸರ್ಕಾರಿ ಬಸ್ ಕಾಣದ ಗ್ರಾಮ: ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಪೂರಮಾಕನಹಳ್ಳಿಗೆ ಕೆಎಸ್ಆರ್‌ಟಿಸಿ ಬಸ್ ಸೇವೆ ಕಲ್ಪಿಸಲಾಗಿಲ್ಲ. ಇದರಿಂದಾಗಿ ಗ್ರಾಮವು ಸರ್ಕಾರಿ ಬಸ್ ಸೇವೆಯಿಂದ ವಂಚಿತವಾಗಿದೆ. ಗ್ರಾಮಸ್ಥರು ಮಾಲೂರು ಅಥವಾ ಇನ್ನಿತರ ನಗರ ಪ್ರದೇಶಗಳಿಗೆ ಹೋಗಲು ಗ್ರಾಮದಿಂದ ಒಂದೂವರೆ ಕಿ.ಮೀ ಇರುವ ಹರಿಪುರ ಗ್ರಾಮಕ್ಕೆ ನಡೆದುಕೊಂಡು ಬರಬೇಕಿದೆ. ನಂತರ ಟೇಕಲ್ ಮುಖ್ಯ ರಸ್ತೆಯಿಂದ ಬಸ್ ಹಿಡಿದು ಮಾಲೂರಿಗೆ ತೆರಳಬೇಕು. ಅಥವಾ ಎರಡು ಕಿ.ಮೀ ದೂರದ ದೊಡ್ಡಶಿವಾರ ಗ್ರಾಮಕ್ಕೆ ನಡೆದುಕೊಂಡು ಬಂದು, ಕೋಲಾರ ಅಥವಾ ಮಾಲೂರಿಗೆ ಹೋಗುವ ಅನಿವಾರ್ಯತೆ ಇದೆ ಎನ್ನುತ್ತಾರೆ ಗ್ರಾಮಸ್ಥರು.

ರಸ್ತೆಯಿಂದ ಹೊರಬಂದ ಜಲ್ಲಿಕಲ್ಲು: ಪೂರಮಾಕನಹಳ್ಳಿಯಿಂದ ದೊಡ್ಡ ಶಿವಾರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 2 ಕಿ.ಮೀ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಯಲ್ಲಿನ ಜಲ್ಲಿಕಲ್ಲುಗಳು ಹೊರಗೆ ಚಾಚಿಕೊಂಡಿವೆ. ಇದರಿಂದ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸ ಸೇರಿ ಪ್ರತಿಯೊಂದಕ್ಕೂ ದೊಡ್ಡ ಶಿವಾರ ಗ್ರಾಮದ ಮೇಲೆ ಅವಲಂಬಿತರಾದ ಪೂರಮಾಕನಹಳ್ಳಿ ನಿವಾಸಿಗಳು, ಇದೇ ರಸ್ತೆಯಲ್ಲಿ ಓಡಾಡಬೇಕಾದ ದುಃಸ್ಥಿತಿ ಎದುರಾಗಿದೆ. ಜಲ್ಲಿಕಲ್ಲುಗಳು ಚುಚ್ಚಿ ಹಲವು ಬಾರಿ ದ್ವಿಚಕ್ರ ವಾಹನಗಳು ಪಂಚರ್ ಆಗಿರುವ ಉದಾಹರಣೆಗಳು ಸಾಕಷ್ಟಿವೆ

ಶ್ರೀನಿವಾಸ ರೆಡ್ಡಿ, ಪೂರಮಾಕನಹಳ್ಳಿ ನಿವಾಸಿ 

ಗ್ರಾಮದಲ್ಲಿ ಚರಂಡಿಗಳ ವ್ಯವಸ್ಥೆ ಸಂಪೂರ್ಣವಾಗಿ ಹಾದಿ ತಪ್ಪಿದ್ದು, ಕೊಳಚೆ ನೀರು ಮನೆ ಮುಂದೆಯೇ ಹರಿಯುತ್ತಿದೆ. ಸ್ವಚ್ಛತೆಯಂತೂ ಮರೀಚಿಕೆಯಾಗಿದೆ. ಇಲ್ಲಿಗೆ ಜನಪ್ರತಿನಿಧಿಗಳು ಮತ ಕೇಳಲು ಮಾತ್ರ ಬರುವರು
ನಾರಾಯಣಮ್ಮ, ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0