ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

371(ಜೆ) ಮೀಸಲಾತಿ: ಕಾರಟಗಿ ಬಂದ್‌ ಯಶಸ್ವಿ

371 (ಜೆ) ಪರಿಪೂರ್ಣ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ
Published 4 ಜುಲೈ 2024, 15:18 IST
Last Updated 4 ಜುಲೈ 2024, 15:18 IST
ಅಕ್ಷರ ಗಾತ್ರ

ಕಾರಟಗಿ: ‘ಹಿಂದುಳಿದ ಪ್ರದೇಶದ ಭಾಗದಲ್ಲಿ ಪ್ರಾಶಸ್ತ್ಯ ನೀಡಲು, ಪ್ರಾದೇಶಿಕ ಅಸಮಾನತೆಯ ನಿವಾರಣೆಯ ಹಿನ್ನೆಲೆಯಲ್ಲಿ ಜಾರಿಗೊಂಡ 371 (ಜೆ) ಕಲಂ ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗಬೇಕು. ಮೀಸಲಾತಿ ವಿರೋಧಿಸುವ ಸಂಘಟನೆಯನ್ನು ನಿಷೇಧಿಸಬೇಕು ಎಂದು ಕರೆ ನೀಡಿದ್ದ ಕಾರಟಗಿ ಬಂದ್ ಯಶಸ್ವಿಯಾಗಿದೆ.

ಆಗ್ರಹಿಸಿ ಜಾಗೃತ ಯುವಕ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಗುರುವಾರ ಬಂದ್‌ಗೆ ಕರೆ ನೀಡಲಾಗಿತ್ತು. 

ವ್ಯಾಪಾರ, ವಹಿವಾಟು ಸಂಪೂರ್ಣ ಬಂದ್‌ ಆಗಿತ್ತು. ವಿಶೇಷ ಎಪಿಎಂಸಿ, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ, ಶಾಲಾ, ಕಾಲೇಜು ಬಂದ್‌ ಆಗಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ವರ್ತಕರು, ಜನಪ್ರತಿನಿಧಿಗಳನ್ನೊಳಗೊಂಡ ಪ್ರತಿಭಟನಾ ಮೆರವಣಿಗೆ ವಿಶೇಷ ಎಪಿಎಂಸಿಯಿಂದ ಆರಂಭಗೊಂಡು ಕನಕದಾಸ ವೃತ್ತದ ಬಸ್‌ ನಿಲ್ದಾಣದ ಬಳಿ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು.

ಬಹಿರಂಗ ಸಭೆಯಲ್ಲಿ ಮಾತನಾಡಿದ ಹೈದರಾಬಾದ್–ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ರಜಾಕ್‌ ಉಸ್ತಾದ ಮಾತನಾಡಿ, ‘371 (ಜೆ) ಕಲಂ ಜಾರಿಯಿಂದ ನಮ್ಮ ಭಾಗದ ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗಕ್ಕೆ ಅನುಕೂಲವಾಗಿದ್ದರೂ ಸಮರ್ಪಕ ಅನುಷ್ಠಾನವಾಗದ್ದರಿಂದ ಸಮಸ್ಯೆಗಳು ಬರುತ್ತಿವೆ. ಇದರ ಅನುಷ್ಠಾನಕ್ಕೆ ಶಾಶ್ವತವಾದ ಪ್ರಾಧಿಕಾರ ಅಥವಾ ಸಮಿತಿ ರಚನೆಯಾಗಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಭಾಗದ ಯುವಕರಿಗೆ ಕೆಲಸ ದೊರೆಯುವುದನ್ನು ಸಹಿಸದ ಹಲವರು 371(ಜೆ) ವಿರುದ್ಧ ನ್ಯಾಯಾಲಯದ ಮೊರೆ ಹೋದರೆ, ಅನುಷ್ಠಾನ ಸಮಿತಿಯ ಉಸ್ತುವಾರಿ ವಹಿಸಿದ ಅನೇಕ ಸಚಿವರು ತಮ್ಮ ವಿಮೋಚನೆಗೆ ತಕ್ಕಂತೆ ಆದೇಶ ಹೊರಡಿಸಿದರು. ಇದರಿಂದ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದೇ ಸಮಸ್ಯೆ ಹೆಚ್ಚಾಗಿದೆ. ನಾವು ಸದಾ ಜಾಗೃತವಾಗಿದ್ದು ನಮ್ಮ ಹಕ್ಕು ಪಡೆಯಬೇಕಿದೆ. ಇದಕ್ಕಾಗಿ ವಿವಿಧೆಡೆ ಹೋರಾಟಗಳು ಈಗಾಗಲೇ ಆರಂಭವಾಗಿವೆ’ ಎಂದರು.

‘ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುವಲ್ಲಿ ಕೊಪ್ಪಳ ಸಹಾಯಕ ಆಯುಕ್ತರು ತಮ್ಮದೇ ಷರತ್ತು ವಿಧಿಸಿದ್ದಾರೆ. ಅವರು ನಿಯಮಾವಳಿ ಪ್ರಕಾರ ಪ್ರಮಾಣ ಪತ್ರ ನೀಡಬೇಕು ನೀಡಲಾಗದಿದ್ದರೆ ಅವರನ್ನು ಸರ್ಕಾರ ಕಿತ್ತೊಗೆಯಬೇಕು. ಈ ಬಗ್ಗೆ ಸಚಿವ, ಸಂಸದ, ಶಾಸಕರೊಂದಿಗೆ ಮಾತನಾಡುವೆ. ಎಸಿಗೆ ಸಂಶಯವಿದ್ದರೆ ಪರಿಹರಿಸಲು ನಾವು ಸಿದ್ದರಿದ್ದೇವೆ. ಇದಕ್ಕಾಗಿಯೇ ಮತ್ತೊಂದು ಹೋರಾಟ ಮಾಡಬೇಕಾದೀತು’ ಎಂದು ರಜಾಕ್‌ ಉಸ್ತಾದ ಆಕ್ರೋಶ ವ್ಯಕ್ತಪಡಿಸಿದರು.

ಸಾಹಿತಿ ಸಿದ್ದೂ ಬಿ.ಯಾಪಲಪರ್ವಿ, ಹೋರಾಟ ಸಮಿತಿಯ ಧನಂಜಯ ಗಂಗಾವತಿ ಮೊದಲಾದವರು ಮಾತನಾಡಿ, ಎಚ್ಚರಿಕೆ ನೀಡಲು ಈಗ ಹೋರಾಟ ಆರಂಭವಾಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ, ನ್ಯಾಯಯುತ ಮೀಸಲಾತಿಗೆ ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಚುರುಕುಗೊಳಿಸಲಾಗುವುದು ಎಂದರು.

ಸ್ಥಳಕ್ಕೆ ಆಗಮಿಸಿದ ಕೊಪ್ಪಳ ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿಯವರಿಗೆ ರಾಜ್ಯಪಾರು, ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸಲ್ಲಿಸಲಾಯಿತು.

ಬಹಿರಂಗ ಸಭೇಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ಕಾರ್ಯಕರ್ತರು
ಬಹಿರಂಗ ಸಭೇಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ಕಾರ್ಯಕರ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT