ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಡೆಂಗಿ ಜ್ವರದ ಅಬ್ಬರ; ಜನ ತತ್ತರ

ಜಿಲ್ಲೆಯಲ್ಲಿ ಪ್ರಸಕ್ತ 202 ಡೆಂಗಿ ಪ್ರಕರಣಗಳು: ಮಂಡ್ಯ ತಾಲ್ಲೂಕಿನಲ್ಲೇ ಅತ್ಯಧಿಕ
Published : 8 ಜುಲೈ 2024, 6:46 IST
Last Updated : 8 ಜುಲೈ 2024, 6:46 IST
ಫಾಲೋ ಮಾಡಿ
Comments

ಮಂಡ್ಯ: ಜಿಲ್ಲೆಯಲ್ಲಿ ಡೆಂಗಿ ಜ್ವರದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಜನರಲ್ಲಿ ಆತಂಕ ತಂದೊಡ್ಡಿದೆ. ಆಸ್ಪತ್ರೆಗಳಲ್ಲಿ ಜ್ವರಪೀಡಿತ ಮಕ್ಕಳನ್ನು ತೋರಿಸಲು ತಾಯಂದಿರು ಸಾಲುಗಟ್ಟಿ ಕಾಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.  

ಇಲ್ಲಿಯವರೆಗೆ 202 ಡೆಂಗಿ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ. ಜೂನ್‌ ತಿಂಗಳೊಂದರಲ್ಲೇ 40ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಜನವರಿಯಿಂದ ಜೂನ್‌ ಅಂತ್ಯಕ್ಕೆ ಒಟ್ಟು 189 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 89 ಪ್ರಕರಣಗಳು ಮಂಡ್ಯ ತಾಲ್ಲೂಕಿನಲ್ಲೇ ಕಂಡುಬಂದಿವೆ. 

2021ರಲ್ಲಿ 238, 2022ರಲ್ಲಿ 297, 2023ರಲ್ಲಿ 338 ಡೆಂಗಿ ಪ್ರಕರಣಗಳು ದಾಖಲಾಗಿದ್ದವು. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಜಿಲ್ಲೆಯಲ್ಲಿ 3 ಮಲೇರಿಯಾ ಮತ್ತು 6 ಚಿಕುನ್‌ಗುನ್ಯ ಪ್ರಕರಣಗಳು ಈ ವರ್ಷ ದಾಖಲಾಗಿದ್ದು, ಸದ್ಯದ ಮಟ್ಟಿಗೆ ಈ ಎರಡೂ ಪ್ರಕರಣಗಳು ನಿಯಂತ್ರಣದಲ್ಲಿವೆ ಎನ್ನುತ್ತಾರೆ ವೈದ್ಯಾಧಿಕಾರಿಗಳು. 

9,484 ಮನೆಗಳಲ್ಲಿ ಲಾರ್ವಾ ಪತ್ತೆ: 

ಮಂಡ್ಯ ಜಿಲ್ಲೆಯಲ್ಲಿ 18,37,324 ಜನಸಂಖ್ಯೆ ಇದ್ದು, 4.50 ಲಕ್ಷ ಮನೆಗಳಿವೆ. ಇದುವರೆಗೆ 3.63 ಲಕ್ಷ ಮನೆಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ಲಾರ್ವಾ ಸಮೀಕ್ಷೆ (ಶೇ 80.86ರಷ್ಟು) ನಡೆಸಿದ್ದಾರೆ. 9,484 ಮನೆಗಳಲ್ಲಿ ಲಾರ್ವಾ ಪತ್ತೆಯಾಗಿದ್ದು, ಇವು ಡೆಂಗಿ ಜ್ವರ ಉಲ್ಬಣಿಸಲು ಕಾರಣ ಎನ್ನಲಾಗುತ್ತಿದೆ. 

ಸೊಳ್ಳೆ ನಿಯಂತ್ರಿಸಿ:

‘ಡೆಂಗಿ ಮತ್ತು ಚಿಕುನ್‌ಗುನ್ಯ ರೋಗಗಳು ಸೋಂಕು ಹೊಂದಿದ ಈಡಿಸ್‌ ಈಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ವೇಳೆಯಲ್ಲಿ ಕಚ್ಚುತ್ತವೆ. ಸೊಳ್ಳೆಗಳಿಂದ ಡೆಂಗಿ, ಚಿಕುನ್‌ಗುನ್ಯ, ಝೀಕಾ, ಮಿದುಳುಜ್ವರ, ಮಲೇರಿಯ ಮತ್ತು ಆನೆಕಾಲು ರೋಗಗಳು ಹರಡುತ್ತವೆ. ಸೊಳ್ಳೆಗಳನ್ನು ತಡೆಗಟ್ಟುವ ಮೂಲಕ ರೋಗವನ್ನು ನಿಯಂತ್ರಿಸುವುದು ಜನರ ಜವಾಬ್ದಾರಿಯಾಗಿದೆ’ ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್‌. ಕಾಂತರಾಜು.

ಲಕ್ಷಣಗಳು

ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗುಡ್ಡೆ ಹಿಂಭಾಗದಲ್ಲಿ ವಿಪರೀತ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ತೀವ್ರ ನೋವು, ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು ಕಾಣಿಸಿಕೊಳ್ಳುತ್ತವೆ. ಡೆಂಗಿ ಮತ್ತು ಚಿಕುನ್‌ಗುನ್ಯ ರೋಗಗಳಿಗೆ ಯಾವುದೇ ನಿರ್ದಿಷ್ಟ ಔಷಧ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳಿಗನುಗುಣವಾಗಿ ವೈದ್ಯರಿಂದ ಚಿಕಿತ್ಸೆ ಪಡೆಯಬಹುದು. ಉಚಿತ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆ ಸಂಪರ್ಕಿಸಬಹುದು. 

ಎಲಿಸಾ ಪರೀಕ್ಷೆಗೆ ₹300 ಮತ್ತು ರ‍್ಯಾಪಿಡ್‌ ಪರೀಕ್ಷೆಗೆ ₹250ರಂತೆ ಡೆಂಗಿ ಜ್ವರ ಪರೀಕ್ಷೆಗೆ ಸರ್ಕಾರ ದರ ನಿಗದಿಪಡಿಸಿದೆ. ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳು ಸೇರಿದಂತೆ ರಾಜ್ಯದಾದ್ಯಂತ ಏಕರೂಪದ ದರ ಕಡ್ಡಾಯಗೊಳಿಸಿ ಆದೇಶ ಮಾಡಿದೆ. 

‘ಸೊಳ್ಳೆ ತಾಣ ನಾಶಮಾಡಿ’

‘ಮನೆಯ ಒಳಗೆ ಮತ್ತು ಹೊರಗೆ ನೀರನ್ನು ಶೇಖರಿಸುವ ಸಿಮೆಂಟ್‌ ತೊಟ್ಟಿ ಮಣ್ಣಿನ ಮಡಕೆ ಉಪಯೋಗಿಸದ ಒರಳು ಕಲ್ಲು ಏರ್‌ ಕೂಲರ್‌ ಹೂವಿನ ಕುಂಡ ಬಳಸದ ಟೈರು ತೆಂಗಿನ ಚಿಪ್ಪು ಒಡೆದ ಬಾಟಲಿ ಘನತ್ಯಾಜ್ಯ ವಸ್ತುಗಳು ಮುಂತಾದ ವಸ್ತುಗಳಲ್ಲಿ ಸಂಗ್ರಹವಾಗುವ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನಿವಾಸಿಗಳು ಎಚ್ಚರ ವಹಿಸಬೇಕು’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್‌. 

ಸಾರ್ವಜನಿಕರು ಡ್ರಮ್‌ ತೊಟ್ಟಿಗಳಲ್ಲಿ ನೀರು ಸಂಗ್ರಹ ಮಾಡಿದ್ದರೆ ಅವುಗಳನ್ನು ಮುಚ್ಚಿಡಬೇಕು. ಸೊಳ್ಳೆ ತಾಣಗಳನ್ನು ನಾಶ ಮಾಡಲು ನಮ್ಮ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ಮನೆ–ಮನೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜ್ವರದ ಲಕ್ಷಣ ಕಂಡುಬಂದ ತಕ್ಷಣ ಆಸ್ಪತ್ರೆಗೆ ಬಂದು ತೋರಿಸಬೇಕು. ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ತಿಳಿಸಿದರು. 

ಡೆಂಗಿ ಹರಡುವ ಈಡಿಸ್ ಸೊಳ್ಳೆಯ ಪ್ರಾತಿನಿಧಿಕ ಚಿತ್ರ
ಡೆಂಗಿ ಹರಡುವ ಈಡಿಸ್ ಸೊಳ್ಳೆಯ ಪ್ರಾತಿನಿಧಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT