ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ | ಹೆಣ್ಣು ಭ್ರೂಣ ಲಿಂಗ ಪತ್ತೆ: ಮೂವರ ಬಂಧನ

‘ಡೆಕಾಯ್‌’ ಕಾರ್ಯಾಚರಣೆ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು
Published : 16 ಆಗಸ್ಟ್ 2024, 15:15 IST
Last Updated : 16 ಆಗಸ್ಟ್ 2024, 15:15 IST
ಫಾಲೋ ಮಾಡಿ
Comments

ನಾಗಮಂಗಲ: ಹಲವು ದಿನಗಳಿಂದ ಹೆಣ್ಣು ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ‌‌ಆರೋಪಿಗಳನ್ನು ಸೆರೆ ಹಿಡಿಯಲು ಆರೋಗ್ಯಾಧಿಕಾರಿಗಳ ತಂಡ ವಿಶೇಷ ಕಾರ್ಯಾಚರಣೆ ನಡೆಸಿ, ಮೂವರನ್ನು ಸ್ಥಳದಲ್ಲೇ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.

ತಾಲ್ಲೂಕಿನ ಬಿಂಡಿಗನವಲೆ ಹೋಬಳಿಯ ದೇವರ ಮಾವಿನಕೆರೆಯ ತೋಟದ ಮನೆಯ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿದ ಅಧಿಕಾರಿಗಳು, ಹಾಸನ ಜಿಲ್ಲೆಯ ಕೊಣನೂರಿನ ಮನೋಹರ್, ಮಂಡ್ಯದ ಗುತ್ತಲು ರಸ್ತೆಯ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ನಾಗಮಣಿ, ಮಾವಿನಕೆರೆಯ ತೋಟದ ಮನೆಯ ಮಾಲೀಕ ಧನಂಜಯ್ ಅವರನ್ನು ಬಂಧಿಸಿದರು.

ಕಾರ್ಯಾಚರಣೆ ವೇಳೆ, ಸ್ಕ್ಯಾನಿಂಗ್ ಮಾಡುತ್ತಿದ್ದ ಪಾಂಡವಪುರ ತಾಲ್ಲೂಕಿನ ಆರೋಪಿ ಅಭಿ ತಲೆಮರೆಸಿಕೊಂಡಿದ್ದು, ಆತ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಮತ್ತು ಪಾಂಡವಪುರ ತಾಲ್ಲೂಕಿನಲ್ಲಿ ನಡೆದಿದ್ದ ಹೆಣ್ಣು ಭ್ರೂಣ ಲಿಂಗ ಪತ್ತೆ ಪ್ರಕರಣದ ಆರೋಪಿಯೂ ಆಗಿದ್ದ ಎನ್ನಲಾಗಿದೆ. 

ವಾಹನದಲ್ಲಿದ್ದ ಅಬಾರ್ಷನ್ ಕಿಟ್‌ಗಳು ಮತ್ತು ಗ್ರಾಹಕರಿಂದ ಪಡೆದಿದ್ದ ₹43 ಸಾವಿರವನ್ನು ವಶಕ್ಕೆ ಪಡೆದಿದ್ದಾರೆ. ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಡೆಕಾಯ್‌’ ಗರ್ಭಿಣಿಯಿಂದ ಪತ್ತೆ:

ತೋಟದ ಮನೆಯಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲವನ್ನು ಸೆರೆ ಹಿಡಿಯಲು ‘ಡೆಕಾಯ್’ ಮಹಿಳೆಯನ್ನು (ಆರೋಗ್ಯ ಇಲಾಖೆಯಿಂದ ಕಾರ್ಯಾಚರಣೆಗಾಗಿ ಕಳುಹಿಸಿದ್ದ ಗರ್ಭಿಣಿ) ಮಂಡ್ಯದಿಂದ ಆತನ ಪತಿಯೊಂದಿಗೆ ಪೂರ್ವ ನಿಯೋಜಿತವಾಗಿ ವಾಹನವೊಂದರಲ್ಲಿ ಜಿ.ಪಿ.ಎಸ್ ಅಳವಡಿಸಿ ಬೆಳ್ಳೂರು ಕ್ರಾಸ್‌ಗೆ ಕಳುಹಿಸಿದ್ದರು.

ಮಹಿಳೆಯ ಪತಿಯನ್ನು ಅಲ್ಲಿಯೇ ಇಳಿಸಿದ ಏಜೆಂಟ್ ನಾಗಮಣಿ, ಮಹಿಳೆಯನ್ನು ಮತ್ತೊಂದು ವಾಹನದಲ್ಲಿ ತೋಟದ ಮನೆಗೆ ಕರೆದೊಯ್ದರು. ಅಲ್ಲಿ ಅಭಿ ಮೂಲಕ ಸ್ಯಾನಿಂಗ್ ಮಾಡಿಸಿ ಭ್ರೂಣ ಪತ್ತೆ ಮಾಡಿದರು. ನಂತರ ಆ ಮಹಿಳೆ ಹಾಗೂ ಭ್ರೂಣ ಲಿಂಗ ಪತ್ತೆಗೆ ಬಂದಿದ್ದ ಹಾಸನದ ದಂಪತಿಯನ್ನು ಒಂದೇ ವಾಹನದಲ್ಲಿ ಬೆಳ್ಳೂರು ಕ್ರಾಸ್‌ಗೆ ಕರೆತಂದ ಕೂಡಲೇ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದರು.  

ಆರೋಗ್ಯ ಇಲಾಖೆಯ ಉಪನಿರ್ದೇಶಕ ವಿವೇಕ್ ಅವರೊಂದಿಗೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಬೆಟ್ಟಸ್ವಾಮಿ, ಡಿಎಚ್‌ಒ ಡಾ‌.ಮೋಹನ್ ಕುಮಾರ್ ಮತ್ತು ಬೆಳ್ಳೂರು ಪಿ.ಎಸ್.ಐ ರವಿಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಜಾಲವನ್ನು ಬೇಧಿಸಲು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ
ಡಾ.ಮೋಹನ್‌ ಡಿಎಚ್‌ಒ ಮಂಡ್ಯ
ಸ್ಕ್ಯಾನಿಂಗ್ ಸೆಂಟರ್ ನಲ್ಲಿ ನಮೂದಿಸಿಕೊಂಡ ಗರ್ಭಿಣಿಯರು ಮೂರು ತಿಂಗಳಾದರೂ ಮತ್ತೆ ಬರದಿದ್ದರೆ ಅಂಥವರ ಮೇಲೆ ವಿಶೇಷ ನಿಗಾ ಇಟ್ಟಿದ್ದೇವೆ
ಡಾ.ರಮೇಶ್ ಟಿಎಚ್‌ಒ ನಾಗಮಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT