ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ: ಅನ್ಯ ರಾಜ್ಯದ ಮಕ್ಕಳಿಗೆ ‘ಕನ್ನಡ ಪಾಠ’

14 ಮಕ್ಕಳನ್ನು ಶಾಲೆಗೆ ಕರೆ ತರಲು ಆಟೊ ರಿಕ್ಷಾಕ್ಕೆ ₹5 ಸಾವಿರ ನೀಡುವ ಶಿಕ್ಷಕರು
Published : 22 ಆಗಸ್ಟ್ 2024, 6:11 IST
Last Updated : 22 ಆಗಸ್ಟ್ 2024, 6:11 IST
ಫಾಲೋ ಮಾಡಿ
Comments

ನಾಗಮಂಗಲ (ಮಂಡ್ಯ ಜಿಲ್ಲೆ): ಉತ್ತರ ಭಾರತದಿಂದ ಇಲ್ಲಿಗೆ ಉದ್ಯೋಗಕ್ಕಾಗಿ ಬಂದಿರುವ ಕಾರ್ಮಿಕರ ಮನ ಒಲಿಸಿರುವ ಶಿಕ್ಷಕರು 14 ಮಕ್ಕಳಿಗೆ ಕನ್ನಡ ಪಾಠ ಕಲಿಸಲು ಮುಂದಾಗಿದ್ದಾರೆ. 

ತಾಲ್ಲೂಕಿನ ಶ್ರೀರಾಮನಹಳ್ಳಿ ಸಮೀಪದ ಹೆಂಚಿನ ಕಾರ್ಖಾನೆ ಸೇರಿದಂತೆ ಸುತ್ತಮುತ್ತ ಕೆಲವೆಡೆ ಉತ್ತರಪ್ರದೇಶ, ಒಡಿಶಾ, ಬಿಹಾರ, ದೆಹಲಿ, ಅಸ್ಸಾಂ ರಾಜ್ಯಗಳಿಂದ 30ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳ ಹಿಂದೆಯೇ ಉದ್ಯೋಗ ಅರಸಿ ವಲಸೆ ಬಂದು ನೆಲೆಸಿವೆ. 

ಆ ಕುಟುಂಬಗಳ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿದೆ ಮನೆಯಲ್ಲೇ ಬಿಟ್ಟು ಹೋಗುತ್ತಿದ್ದರು. ಭಾಷಾ ಮಾಧ್ಯಮದ ತೊಡಕು ಮತ್ತು ಶಾಲೆಗೆ ಕಳಿಸಲು ಆರ್ಥಿಕ ಶಕ್ತಿ ಇಲ್ಲದ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. 

ಅದನ್ನು ಗಮನಿಸಿದ ಎಂ.ಹೊಸೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ವಿ.ಜಯರಾಮು ಮತ್ತು ಶಿಕ್ಷಕ ಜಿ.ಪ್ರಶಾಂತ್ ಅವರು ಕಾರ್ಖಾನೆಯ ಮಾಲೀಕರ ಜೊತೆಗೆ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವ ಕುರಿತು ಮಾತನಾಡಿದರು. ನಂತರ ಪೋಷಕರ ಮನವೊಲಿಸಿ ಆಪ್ತ ಸಮಾಲೋಚನೆ ನಡೆಸಿದರು.

ಒಂದನೇ ತರಗತಿಗೆ ನಾಲ್ವರು, ಎರಡನೇ ತರಗತಿಗೆ ಮೂವರು, ಮೂರನೇ ತರಗತಿಗೆ ಆರು ಮಕ್ಕಳು ಹಾಗೂ ನಾಲ್ಕನೇ ತರಗತಿಗೆ ಒಂದು ಮಗುವನ್ನು ದಾಖಲಿಸಿಕೊಳ್ಳಲಾಯಿತು. ಕನ್ನಡ ಮಾಧ್ಯಮದೊಂದಿಗೆ, ಅವರ ಮಾತೃ ಭಾಷೆ ಹಿಂದಿಯನ್ನೂ ಕಲಿಸುವ ಸಲುವಾಗಿ ಸ್ಮಾರ್ಟ್ ತರಗತಿಯನ್ನು ಹೊಂದಾಣಿಕೆ ಮಾಡಿಕೊಂಡಿದ್ದಾರೆ. 

ಆಟೊ ವ್ಯವಸ್ಥೆ:

ಶ್ರೀರಾಮನಹಳ್ಳಿಯಿಂದ ಮೂರು ಕಿ.ಮೀ ದೂರದ ಶಾಲೆಗೆ ಸುರಕ್ಷಿತವಾಗಿ ತೆರಳಲು ಮುಖ್ಯಶಿಕ್ಷಕರು ₹2,500 ಮತ್ತು ಶಿಕ್ಷಕ ಜಿ.ಪ್ರಶಾಂತ್ ₹2,500 ತಿಂಗಳಿಗೆ ಒಟ್ಟು ₹5,000 ನೀಡಿ ಆಟೊ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಸ್ಥಳೀಯ ಸಮಾಜ ಸೇವಾ ಸಂಸ್ಥೆಯಾದ ಮಾದಳ್ಳಿ ಬ್ರಿಗೇಡ್, ಎಲ್ಲ 14 ಮಕ್ಕಳಿಗೆ ಟ್ರ್ಯಾಕ್ ಸೂಟ್, ಬ್ಯಾಗ್, ನೋಟ್ ಬುಕ್ ಕೊಡಿಸಿದೆ.

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯ ನೀಡಲಾಗುತ್ತಿದೆ. ಈ ಸೌಲಭ್ಯ ನಮ್ಮ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಸೃಷ್ಟಿಸುವ ಭರವಸೆಯಿದೆ. ಸಹಕಾರ ನೀಡಿದ ಶಿಕ್ಷಕರಿಗೆ ಧನ್ಯವಾದಗಳು
– ರಾಮು ವಿದ್ಯಾರ್ಥಿಗಳ ಪೋಷಕ ಬಿಹಾರ.
ಮಾತೃಭಾಷೆ ಯಾವುದೇ ಆಗಿರಲಿ ಪ್ರತಿಯೊಂದು ಮಗುವಿಗೂ ಶಿಕ್ಷಣ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿ. ಅನ್ಯ ರಾಜ್ಯದ ಮಕ್ಕಳಿಗೆ ಕನ್ನಡ ಕಲಿಸಲು ಕಾರಣರಾದ ನಮ್ಮ ಶಿಕ್ಷಕರಿಗೆ ಅಭಿನಂದನೆಗಳು
– ಯೋಗೇಶ್ ಬಿಇಒ ನಾಗಮಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT