ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಷುಗರ್‌: ಜೂ.23ಕ್ಕೆ ಬಾಯ್ಲರ್‌ಗೆ ಅಗ್ನಿಸ್ಪರ್ಶ

ರೈತ ಮುಖಂಡರ ಸಭೆಯಲ್ಲಿ ಅಧ್ಯಕ್ಷ ಸಿ.ಡಿ.ಗಂಗಾಧರ ಮಾಹಿತಿ: ಜುಲೈ ಮೊದಲನೇ ವಾರ ಕಾರ್ಖಾನೆ ಆರಂಭ
Published 13 ಜೂನ್ 2024, 14:31 IST
Last Updated 13 ಜೂನ್ 2024, 14:31 IST
ಅಕ್ಷರ ಗಾತ್ರ

ಮಂಡ್ಯ: ‘ಮೈಷುಗರ್ ಕಾರ್ಖಾನೆಯ ಜೂ.23ರಂದು ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಗುತ್ತಿದ್ದು, ಜುಲೈ ಮೊದಲನೇ ವಾರದಲ್ಲಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮೈಷುಗರ್‌ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ತಿಳಿಸಿದರು.

ನಗರದ ಮೈಷುಗರ್ ಕಾರ್ಖಾನೆಯಲ್ಲಿ ಗುರುವಾರ ನಡೆದ ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಕೂಳೆ ಕಬ್ಬು ಹೆಚ್ಚಿರುವುದರಿಂದ ಇಳುವರಿ ಬಗ್ಗೆ ಗಮನಿಸಿಕೊಂಡು ರೈತರು ಮತ್ತು ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ಟನ್‌ ಕಬ್ಬಿಗೆ ₹3,151 ದರ ನಿಗದಿ ಮಾಡಲಾಗಿದೆ. ಇದು ಕಡಿಮೆ ಎಂಬುದನ್ನು ರೈತರು ಹೇಳಿದ್ದಾರೆ. ಅವರ ಒತ್ತಾಯವನ್ನು ಪರಿಗಣಿಸಿ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುವುದೋ ಕಾದು ನೋಡೋಣ ಎಂದರು.

‘ಸೀನಿಯಾರಿಟಿ’ ಪ್ರಕಾರವೇ ಕಬ್ಬು ಕಟಾವು ಬರಬೇಕು. ರೈತರು ಕಟಾವು ಮಾಡುವವರ ಹತ್ತಿರ ಹೋದರೆ ಅವರು ಹೆಚ್ಚು ಹಣ ಕೇಳುವ ಸಂಭವವಿದೆ. ಹಾಗಾಗಿ ರೈತರಿಗೆ ಹಾಗೂ ಕಟಾವು ಮಾಡುವವರಿಗೂ ಯಾವುದೇ ಸಂಬಂಧವಿಲ್ಲ. ನಾನೇ ಪರಿಶೀಲನೆ ನಡೆಸುತ್ತೇನೆ. ಏನಾದರೂ ಫೀಲ್ಡ್‌ಮನ್‌ ವಿರುದ್ಧ ಯಾವುದೇ ದೂರು ಬಂದರೆ ಆ ತಕ್ಷಣವೇ ಮನೆಗೆ ಕಳುಹಿಸುತ್ತೇನೆ. ರೈತರ ಪರವಾಗಿ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.

ಕಟಾವು ಮಾಡಲು ಪೈಪೋಟಿಗೆ ಬೀಳಬೇಡಿ. ಕಾರ್ಖಾನೆ ಆರಂಭಿಸಿದ ನಂತರ ಕಬ್ಬು ಒಣಗುವುದನ್ನು ಬಿಡಬಾರದು. ಫೀಲ್ಡ್‌ಮನ್‌ ಸಂಪರ್ಕದಲ್ಲಿರಬೇಕು. ಆಲೆಮನೆಯವರು ಕಬ್ಬು ನುರಿಸುತ್ತಿರುವುದು ಕಾರ್ಖಾನೆ ವ್ಯಾಪ್ತಿಯದ್ದಾಗಿದೆ. ಆದರೆ ಲೈಸೆನ್ಸ್‌ ಇದ್ದವರಿಗೆ ಮನವಿ ಮಾಡುತ್ತೇನೆ, ಆದರೆ ಅನಧಿಕೃತವಾಗಿ ಏನಾದರೂ ನಡೆದರೆ ಆಲೆಮೆನೆಯನ್ನೇ ಸೀಜ್‌ ಮಾಡಿಸುತ್ತೇನೆ ಎಂದು ತಿಳಿಸಿದರು.

ಶೌಚಾಲಯ ಕಲ್ಪಿಸಿ: ಕಬ್ಬು ತೆಗೆದುಕೊಂಡು ಬರುವವರಿಗೆ ಶೌಚಾಲಯ, ಕುಡಿಯುವ ನೀರು, ಎತ್ತುಗಳಿಗೆ ನೀರು ಕುಡಿಸಲು ನೀರಿನ ತೊಟ್ಟಿ ಕಟ್ಟಿಸಿಕೊಡುವುದು. ರಾತ್ರಿಯ ಸಮಯದಲ್ಲಿ ಮಲಗಲು ಸ್ಥಳಾವಕಾಶ ಕಲ್ಪಿಸಿ ರೈತರಿಗೆ ನೆರವಾಗಿಬೇಕು ಎಂದು ಕನ್ನಡಸೇನೆ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಸಿ.ಮಂಜುನಾಥ್, ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್‌, ರೈತ ಮುಖಂಡರಾದ ಚಂದ್ರಶೇಖರ್‌ ಇಂಡುವಾಳು, ನಾಗರಾಜು, ಕೀಲಾರ ಕೃಷ್ಣ ಒತ್ತಾಯಿಸಿದಾಗ, ಅಧ್ಯಕ್ಷ ಸಿ.ಡಿ.ಗಂಗಾಧರ ಅವರು ಒಪ್ಪಿಗೆ ಸೂಚಿಸಿ ಭರವಸೆ ನೀಡಿದರು.

ರೈತ ಮುಖಂಡ ಕೆ.ಬೋರಯ್ಯ ಮಾತನಾಡಿ, ಕಾರ್ಖಾನೆಯನ್ನು ಸುಸ್ಥಿತಿಯಲ್ಲಿಡಬೇಕಾದರೆ ಹೊರಗಿನಿಂದ ಕಬ್ಬು ತಂದು ಅರೆಯುವಿಕೆ ಆಗಬೇಕು. ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್‌ ಅವರು ನಮಗೆ ಬೇಡ. ಏಕೆಂದರೆ ರೈತರ ಕಷ್ಟಗಳನ್ನು ಕೇಳುತ್ತಿಲ್ಲ. ಜವಾಬ್ದಾರಿಯುತವಾಗಿ ಮೈಷುಗರ್‌ ಕಾರ್ಖಾನೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ನಮಗೆ ಬೇಡ ಎಂದು ಸಭೆಗೆ ಮಾಹಿತಿ ನೀಡಿದರು.

ಸಾಮಾನ್ಯ ಸಭೆ ನಡೆಸಿ: ರೈತ ಮುಖಂಡರಾದ ಸುನಂದಾ ಜಯರಾಂ ಮಾತನಾಡಿ, ಕಬ್ಬು ಕಟಾವು ಆದ ನಂತರ ಅದನ್ನು ಶೇ 10ರಷ್ಟು ಕಡಿತಗೊಳಿಸುವ ಕೆಲಸ ನಿಲ್ಲಬೇಕು. ಇಷ್ಟು ಪ್ರಮಾಣದಲ್ಲಿ ಬೇಡ ಎಂಬುದನ್ನು ಹೇಳಿರುವುದಕ್ಕೆ ಅಧ್ಯಕ್ಷರು ಒಪ್ಪಿಗೆ ನೀಡಿರುವುದು ಸಂತಸ ತಂದಿದೆ, ತುರ್ತಾಗಿ ಸಾಮಾನ್ಯ ಸಭೆ ನಡೆಯಬೇಕು ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರವು ಆದಾಯ ತೆರಿಗೆ ಮತ್ತು ರಾಜ್ಯ ಸರ್ಕಾರ ವಾಣಿಜ್ಯ ತೆರಿಗೆ ಇವೆರಡನ್ನು ಕಾರ್ಖಾನೆಗೆ ವಿಧಿಸಿರುವುದನ್ನು ರದ್ದು ಪಡಿಸಿದರೆ, ಕಾರ್ಖಾನೆ ಮತ್ತಷ್ಟು ಚೆನ್ನಾಗಿ ನಡೆಯಲು ಸಹಕಾರಿ ಆಗಲಿದೆ ಎನ್ನವು ಅಭಿಪ್ರಾಯವನ್ನು ರೈತ ಮುಖಂಡರು ಚರ್ಚೆ ನಡೆಸಿದ್ದಾರೆ. ಅದು ಆಗಬೇಕು. ಕಾರ್ಖಾನೆ ನಡೆಯುವುದಕ್ಕೆ ಸುಮಾರು 2 ಲಕ್ಷ ಟನ್‌ ಕಬ್ಬು ಅರೆಯಲು ಒಪ್ಪಿಗೆ ಪಡೆಯಲಾಗಿದೆ. ಎಂದು ಹೇಳಿದರು.

ಮುಖಂಡರಾದ ಶಿವಶಂಕರ್‌ ಸಂಪಹಳ್ಳಿ, ಪಣಕನಹಳ್ಳಿ ಬೋರಲಿಂಗೇಗೌಡ, ನಾಗೇಂದ್ರ, ನಾರಾಯಣ್‌, ಪ್ರಕಾಶ್‌ ಸೊಳ್ಳೇಪುರ, ಎಂ.ವಿ.ಕೃಷ್ಣ ಭಾಗವಹಿಸಿದ್ದರು.

‘ಶಿಫಾರಸು ಮಾಡಬೇಡಿ’ ಮುಖ್ಯ ಕಬ್ಬು ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್‌ ಮಾತನಾಡಿ ಎರಡು ಲಕ್ಷ ಟನ್‌ ಕಬ್ಬು ಸೀನಿಯಾರಿಟಿ ಪ್ರಕಾರ ಕಾರ್ಖಾನೆಗೆ ಸರಬರಾಜು ಮಾಡಬೇಕು. ಆದ್ಯತೆ ಮೇರೆಗೆ ಕಬ್ಬು ಅರೆಯಲಾಗುವುದು ಯಾವುದೇ ಒತ್ತಡ ಅಥವಾ ಶಿಫಾರಸ್ಸಿಗೆ ಮಣಿಯದೇ ಹಂತ–ಹಂತವಾಗಿ ನಮ್ಮ ಫೀಲ್ಡ್‌ಮನ್‌ ಗುರುತಿಸಿದ ನಂತರ ಕಬ್ಬು ಕಟಾವು ಮಾಡಿಸಿ ಸರಬರಾಜು ಮಾಡಲಾಗವುದು ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

 ₹249 ಕೋಟಿ ಸಾಲ

ಮೈಷುಗರ್ ಕಾರ್ಖಾನೆ ಸಾಲವು ₹249 ಕೋಟಿ ಬಾಕಿ ಸಾಲವಿದೆ. ಇನ್ನೂ ಐದು ತಿಂಗಳೊಳಗೆ ಸಾಲ ಕಡಿಮೆ ಮಾಡಿಸಲು ಕ್ರಮವಹಿಸುತ್ತೇನೆ. ಇದು ನನ್ನ ಜವಾಬ್ದಾರಿಯಾಗಿದ್ದು ಅಕ್ಟೋಬರ್‌ ತಿಂಗಳೊಳಗೆ ಸಾಲವನ್ನು ಯಾವ ರೀತಿ ಕಡಿಮೆ ಮಾಡಿಕೊಳ್ಳಬೇಕೋ ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಮಟ್ಟದಲ್ಲಿಯಾದರೂ ಗಮನ ಸೆಳೆದು ಸಾಲ ಕಡಿಮೆ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಮೈಷುಗರ್‌ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT