ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ: ತೆಂಗಿಗೆ ಕಪ್ಪುತಲೆ ಹುಳು ಬಾಧೆ

ಮಜ್ಜಿಗೆಪುರ, ಹೊಂಗಹಳ್ಳಿ, ಹುಲಿಕೆರೆ, ಬೆಳಗೊಳದ ರೈತರು ಕಂಗಾಲು
Published : 11 ಸೆಪ್ಟೆಂಬರ್ 2024, 5:36 IST
Last Updated : 11 ಸೆಪ್ಟೆಂಬರ್ 2024, 5:36 IST
ಫಾಲೋ ಮಾಡಿ
Comments

ಶ್ರೀರಂಗಪಟ್ಟಣ: ತಾಲ್ಲೂಕಿನ ಮಜ್ಜಿಗೆಪುರ, ಹೊಂಗಹಳ್ಳಿ, ಹುಲಿಕೆರೆ, ಬೆಳಗೊಳ ಮತ್ತು ಆಸುಪಾಸಿನಲ್ಲಿ ತೆಂಗಿನ ಮರಗಳಿಗೆ ಕಪ್ಪು ತಲೆ ಹುಳು ಬಾಧೆ ಕಾಣಿಸಿಕೊಂಡಿದ್ದು ರೈತರನ್ನು ಕಂಗಾಲು ಮಾಡಿದೆ.

ಮಜ್ಜಿಗೆಪುರ ಗ್ರಾಮದ ಬಾಲಕೃಷ್ಣ, ಎಂ.ಎನ್‌. ಶ್ರೀನಿವಾಸ್‌ ಸೇರಿದಂತೆ 20ಕ್ಕೂ ಹೆಚ್ಚು ರೈತರ ತೆಂಗಿನ ಮರಗಳಲ್ಲಿ ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಂಡಿದೆ. ಬೆಳಗೊಳ, ಹುಲಿಕೆರೆ, ಹೊಂಗಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಸಹಸ್ರಾರು ತೆಂಗಿನ ಮರಗಳಿಗೆ  ಹರಡಿದೆ. ಮಜ್ಜಿಗೆಪುರದ ಎಲ್ಲ ತೆಂಗಿಗೂ ವ್ಯಾಪಿಸಿದ್ದು,  ಅಕ್ಷರಶಃ ಒಣಗಿದಂತೆ ಕಾಣುತ್ತಿವೆ.

‘ತೆಂಗಿನ ಮರಗಳ ಸುಳಿಯಲ್ಲಿ ಒಂದೆರಡು ಗರಿಗಳು ಬಿಟ್ಟರೆ ಇಡೀ ಮರ ಬೂದು ಬಣ್ಣಕ್ಕೆ ತಿರುಗಿದೆ. ಪರಿಣಾಮವಾಗಿ ತೆಂಗಿನ ಮರಗಳಲ್ಲಿ ಫಲ ನಿಲ್ಲುತ್ತಿಲ್ಲ. ಮುಷ್ಠಿ ಗಾತ್ರದ ಕುರುಬೆ (ಎಳನೀರು)ಗಳು ಉದುರುತ್ತಿವೆ. ಎಳನೀರು ಮತ್ತು ತೆಂಗಿನ ಪ್ರತಿ ತಿಂಗಳು ಆದಾಯ ಪಡೆಯುತ್ತಿದ್ದ ರೈತನಿಗೆ ಬಿಡಿಗಾಸೂ ಸಿಗದಂತಾಗಿದೆ’ ಎಂದು ರೈತರು ದೂರಿದ್ದಾರೆ.

ಒಂದು ವರ್ಷದ ಹಿಂದೆ ಎದುರಾದ ತೀವ್ರ ತರನಾದ ಬರಗಾಲದ ಬಳಿಕ ಈ ಭಾಗದಲ್ಲಿ ಕಪ್ಪು ತಲೆಹುಳು ಬಾಧೆ ಶರವೇಗದಲ್ಲಿ ಹರಡಿದೆ. ಗಾಳಿಯ ಮೂಲಕ ಮರದಿಂದ ಮರಕ್ಕೆ ಹರಡುವ ಕಪ್ಪುತಲೆ ಹುಳುಗಳು ತೆಂಗಿನ ಗರಿಗಳ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಹಾಗಾಗಿ ಗರಿಗಳು ಒಣಗಿದ ಪೊರಕೆಯಂತಾಗುತ್ತವೆ. ಹುಳುಗಳು ಸತ್ವವನ್ನು ಹೀರುವುದರಿಂದ ಫಲ ಕಟ್ಟುತ್ತಿಲ್ಲ.

 ‘ಏಳೆಂಟು ತಿಂಗಳಿಂದ ನಮ್ಮ ತೋಟದಲ್ಲಿ ಒಂದೂ ತೆಂಗಿನ ಕಾಯಿ ಸಿಕ್ಕಿಲ್ಲ. ಕಪ್ಪುತಲೆ ಹುಳು ಬಾಧೆ ಈ ಪರಿ ಹರಡಿದ್ದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ’ ಎಂದು ಇದೇ ಗ್ರಾಮದ ಬಾಲಕೃಷ್ಣ ದೂರುತ್ತಾರೆ.

‘ನಮ್ಮ ತೋಟದಲ್ಲಿ 70 ತೆಂಗಿನ ಮರಗಳಿದ್ದು ವರ್ಷಕ್ಕೆ 3 ಸಾವಿರ ತೆಂಗಿನ ಕಾಯಿಗಳು ಸಿಗುತ್ತಿದ್ದವು. ಈಗ 100 ಕಾಯಿ ಸಿಗುತ್ತಿಲ್ಲ. ಭಾರಿನಷ್ಟ ಉಂಟಾಗುತ್ತಿದೆ’
ಎಂ.ಎನ್‌. ಶ್ರೀನಿವಾಸ್‌ ಮಜ್ಜಿಗೆಪುರ

‘ಬೇರಿಗೆ ಕೀಟನಾಶಕ ಕಟ್ಟಿ’

‘ಮಜ್ಜಿಗೆಪುರ ಮತ್ತು ಆಸಿಪಾಸಿನ ಗ್ರಾಮಗಳ ವ್ಯಾಪ್ತಿಯಲ್ಲಿ ತೆಂಗು ಬೆಳೆಗೆ ಕಪ್ಪುತಲೆ ಹುಳು ಬಾಧೆ ಕಾಣಿಸಿಕೊಂಡಿರುವ ವಿಷಯ ಗೊತ್ತಾಗಿದೆ. ಗೊಬ್ಬರ ಮತ್ತು ತೇವಾಂಶದ ಕೊರತೆ ಇದ್ದರೆ ಈ ರೋಗ ಬೇಗ ಹರಡುತ್ತದೆ. ಬಾಧೆ ಕಾಣಿಸಿಕೊಂಡರೆ 10. ಮಿ.ಲೀ ಎಕ್ಸಾಕೊನೊಜೋಲ್‌ ಕೀಟನಾಶಕಕ್ಕೆ 100 ಮಿ.ಲೀ. ನೀರು ಬೆರೆಸಿ ಮರದ ಜೀವಂತ ಬೇರಿಗೆ ಕಟ್ಟಬೇಕು. ಬೇವಿನ ಹಿಂಡಿ ಹಾಕಿದರೂ ರೋಗ ಬಾಧೆ ಹತೋಟಿಗೆ ಬರುತ್ತದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಗಾಯತ್ರಿ ಹೇಳಿದ್ದಾರೆ. ‘ತೆಂಗಿನ ಮರದ ಬೇರಿಗೆ ಕೀಟನಾಶಕ ಕಟ್ಟಿದ ನಂತರ ಮೂರು ತಿಂಗಳ ವರೆಗೆ ಆ ಮರಗಳ ತೆಂಗಿನ ಕಾಯಿ ಮತ್ತು ಎಳನೀರು ಬಳಸಬಾರದು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT