ಕನಕದಾಸರು 16ನೇ ಶತಮಾನದಲ್ಲಿ ಶ್ರೀರಂಗಪಟ್ಟಣದ ಆದಿ ರಂಗ ಶಿವನ ಸಮುದ್ರದ ಬಳಿಯ ಮಧ್ಯ ರಂಗ ಮತ್ತು ತಮಿಳುನಾಡಿನ ಅಂತ್ಯ ರಂಗನ ದರ್ಶನಾರ್ಥಿಯಾಗಿ ಬಂದಾಗ ಮಾರ್ಗ ಮಧ್ಯೆ ಮಹದೇವಪುರದಲ್ಲಿ ಕೆಲಕಾಲ ತಂಗಿದ್ದರು. ಶ್ರೀರಂಗನಾಥನನ್ನು ಕಂಡಾಗ ‘ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರೂ ನಿನ್ನನೆಬ್ಬಿಸುವವರೊಬ್ಬರನೂ ಕಾಣೆ ರಂಗನಾಥ......’ ಎಂದು ಅವರು ಹಾಡಿರುವ ಕೀರ್ತನೆ ಪ್ರಸಿದ್ಧವಾಗಿದೆ. ‘ಮಹದೇವರಪುರ ಮಾರ್ಗವಾಗಿ ಮಧ್ಯರಂಗಕ್ಕೆ ತೆರಳಲು ಕನಕದಾಸರು ಕಾವೇರಿ ನದಿಯನ್ನು ದಾಟಲು ಮುಂದಾದರಂತೆ. ಶೂದ್ರ ಕುಲದ ಕನಕನನ್ನು ಅಂಬಿಗನು ದೋಣಿಗೆ ಹತ್ತಿಸಿಕೊಳ್ಳಲು ನಿರಾಕರಿಸಿದನಂತೆ. ಬಾಳೆ ಎಲೆಯ ಮೇಲೆ ತೇಲುತ್ತಾ ಹರಿ ನಾಮ ಸ್ಮರಣೆ ಮಾಡುತ್ತಾ ಕನಕದಾಸರು ನದಿಯನ್ನು ದಾಟಿದರಂತೆ. ನದಿಯನ್ನು ದಾಟುವಾಗ ಮಧ್ಯೆ ಸಿಕ್ಕಿದ ಬಂಡೆಯ ಮೇಲೆ ಕುಳಿತು ಬಟ್ಟೆ ಶುಚಿಗೊಳಿಸಿಕೊಂಡು ಕೆಲಕಾಲ ಅಲ್ಲೇ ಧ್ಯಾನ ಮಾಡಿದರಂತೆ....’– ಎಂಬ ದೃಷ್ಟಾಂತ ಈ ಭಾಗದಲ್ಲಿ ಜನಜನಿತವಾಗಿದೆ.