ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೂಜು ಅಡ್ಡೆಗೆ ದಾಳಿ: ಇಬ್ಬರ ಬಂಧನ

Published 13 ಜೂನ್ 2024, 16:12 IST
Last Updated 13 ಜೂನ್ 2024, 16:12 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನ ಗೊರೂರು ಗ್ರಾಮದ ಶ್ರೀನಿಧಿ ಫಾರಂ ಮುಂಭಾಗ ಜೂಜು ಅಡ್ಡೆ ಮೇಲೆ ದಕ್ಷಿಣ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ₹2,150 ನಗದನ್ನು ವಶಕ್ಕೆ ಪಡೆದಿದ್ದಾರೆ.

ಕೋಟೆಹುಂಡಿ ಗ್ರಾಮದ ನಾಗರಾಜ ಹಾಗೂ ರಾಮಕೃಷ್ಣನಗರದ ನಿವಾಸಿ ವೇಣು ಬಂಧಿತರು.

ಚಿನ್ನದ ಗಟ್ಟಿಯ ಆಮಿಷ: ₹12.24 ಲಕ್ಷ ವಂಚನೆ

ಮೈಸೂರು: ಚಿನ್ನದ ಗಟ್ಟಿ ನೀಡುವುದಾಗಿ ನಂಬಿಸಿ ನಗರದ ಚಿನ್ನಾಭರಣ ವ್ಯಾಪಾರಿಯಿಂದ ₹12.24 ಲಕ್ಷ ಪಡೆದ ಹೈದರಾಬಾದ್ ಮೂಲದ ವ್ಯಕ್ತಿ ವಂಚಿಸಿದ್ದಾರೆ.

ದೇವರಾಜ ಅರಸು ರಸ್ತೆಯಲ್ಲಿನ ಶಾರದಾ ಜ್ಯುವೆಲ್ಲರ್ಸ್‌ ಮಳಿಗೆಯನ್ನು ಹೊಂದಿರುವ ಅರುಣಾಚಲ ಅವರು ಹೋಲ್‌ಸೇಲ್ ಚಿನ್ನದ ವ್ಯಾಪಾರಿಗಳಿಂದ ಚಿನ್ನದ ಗಟ್ಟಿ ಖರೀದಿಸುತ್ತಿದ್ದರು. ಇದೇ ರೀತಿ ತಮ್ಮ ಅಳಿಯ ಗೌರವ್‌ಲಾಲ್ ಅವರಿಂದ ಪರಿಚಯವಾದ ಹೈದರಾಬಾದ್ ನಿವಾಸಿ ರಾಜೇಶ್‌ ಕುಮಾರ್ ಕಡೇಲ ಅವರನ್ನು ಸಂಪರ್ಕಿಸಿ 200 ಗ್ರಾಂ ಚಿನ್ನದ ಗಟ್ಟಿಯನ್ನು ಖರೀದಿಸುವುದಾಗಿ ಹೇಳಿದ್ದಾರೆ.

ಇದಕ್ಕಾಗಿ ಮುಂಗಡವಾಗಿ ₹6 ಲಕ್ಷ ಪಾವತಿಸಿದ್ದು, ರಾಜೇಶ್ ಅವರ ಮನವಿಯಂತೆ ಮತ್ತೆ ₹6.24 ಲಕ್ಷವನ್ನು ಅವರ ಖಾತೆಗೆ ಜಮೆ ಮಾಡಿದ್ದಾರೆ. ಹಣ ನೀಡಿ ಕೆಲವು ತಿಂಗಳಾದರೂ ಚಿನ್ನದ ಗಟ್ಟಿಯನ್ನು ಕೊಡದೆ ಸತಾಯಿಸಿದ್ದರಿಂದ ಅರುಣಾಚಲ ಅವರು ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಹಿಳೆ ಆತ್ಮಹತ್ಯೆ: ಪತಿಯಿಂದ ಕಿರುಕುಳ ಆರೋಪ

ಮೈಸೂರು: ನಗರದ ವಿದ್ಯಾನಗರದ ನಿವಾಸಿ ಅಭಿಲಾಷ (22) ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಕಿರುಕುಳವೇ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಲಾಗಿದೆ.

ಮಹದೇವಪ್ರಸಾದ್ ಅಲಿಯಾಸ್ ಫಾಸ್ಟ್ ಫುಡ್ ಉಮೇಶ್ ಹಾಗೂ ಅಭಿಲಾಷ ಅವರಿಗೆ 15 ವರ್ಷದ ಹಿಂದೆ ವಿವಾಹವಾಗಿತ್ತು. ‘ಮಹದೇವಪ್ರಸಾದ್‌ಗೆ ಕುಡಿತದ ಚಟವಿತ್ತು. ಪಾನಮತ್ತನಾದ ಬಳಿಕ ಪತ್ನಿಗೆ ಹಲ್ಲೆ ನಡೆಸುತ್ತಿದ್ದ. ಈ ಬಗ್ಗೆ ಅನೇಕ ಬಾರಿ ನ್ಯಾಯ ಪಂಚಾಯಿತಿ ನಡೆಸಲಾಗಿತ್ತು. ಮಂಗಳವಾರ ಸಂಜೆ ಮನೆಗೆ ಬಂದು ಅಭಿಲಾಷ ಬಳಿ ಊಟ ಕೊಡಲು ತಿಳಿಸಿದ್ದಾರೆ. ನಂತರ ಆತ ಊಟದ ತಟ್ಟೆ ಬಿಸಾಡಿ, ಹಲ್ಲೆ ನಡೆಸಿ ಹೋಗಿದ್ದಾನೆ. ನೊಂದ ಪತ್ನಿಯು ತನ್ನ ಇಬ್ಬರು ಮಕ್ಕಳನ್ನು ಮನೆಪಾಠಕ್ಕೆ ಕಳಿಸಿ ನೇಣು ಹಾಕಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ನಜರ್‌ಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹11.50 ಲಕ್ಷ ವಂಚನೆ

ಮೈಸೂರು: ಆನ್‌ಲೈನ್‌ ಮೂಲಕ ಪರಿಚಯವಾಗಿ ಹೆಚ್ಚಿನ ಹಣ ಹೂಡಿಕೆ ಮಾಡಿ ಲಾಭ ಪಡೆಯುವ ಬಗ್ಗೆ ನಂಬಿಸಿ ವಂಚನೆ ಮಾಡಿರುವ ಬಗ್ಗೆ ದಾಖಲಾಗಿರುವ ಎರಡು ಪ್ರತ್ಯೇಕ ಪ‍್ರಕರಣಗಳಲ್ಲಿ ಇಬ್ಬರು ₹11.50 ಲಕ್ಷ ಕಳೆದುಕೊಂಡಿದ್ದಾರೆ.

ತಾಲ್ಲೂಕಿನ ಬುಗತಹಳ್ಳಿ ಬಳಿಯ ಆದಿಶಕ್ತಿ ಬಡಾವಣೆ ನಿವಾಸಿ ಹೇಮಂತ್ ಅವರು ಆನ್‌ಲೈನ್ ಮೂಲಕ ಕೆಲಸ ಪಡೆದಿದ್ದು, ಅಲ್ಲಿ ಅವರಿಗೆ ಟಾಸ್ಕ್ ಪೂರ್ಣಗೊಳಿಸುವ ಕೆಲಸ ನೀಡಿದ್ದಾರೆ. ಇದಕ್ಕಾಗಿ ಕಂಪನಿಯು ಆರಂಭದಲ್ಲಿ ಹಣವನ್ನೂ ನೀಡಿದೆ. ನಂತರ ಅಲ್ಲಿನ ಸಿಬ್ಬಂದಿ ಹೆಚ್ಚು ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ಇದನ್ನು ನಂಬಿದ ಹೇಮಂತ್ ಹಂತ ಹಂತವಾಗಿ ₹5.38 ಲಕ್ಷವನ್ನು ಅವರ ಖಾತೆಗೆ ವರ್ಗಾಯಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಹೆಬ್ಬಾಳು ನಿವಾಸಿ ಜಗದೀಶ್ ಕೆಲಸ ಪಡೆದು, ಟಾಸ್ಕ್‌ ಪೂರೈಸಿದಕ್ಕಾಗಿ ಹಣ ಪಡೆದಿದ್ದರು. ಕಂಪನಿಯು ಅವರಿಂದ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಸಿ ಹೆಚ್ಚಿನ ಹಣ ಹೂಡಿಕೆ ಮಾಡಿದ್ದಲ್ಲಿ ಲಾಭ ಪಡೆಯಬಹುದು ಎಂದು ನಂಬಿಸಿದೆ. ಅವರು ₹6,28,631 ವರ್ಗಾಯಿಸಿದ್ದಾರೆ. ಕಂಪನಿಯಿಂದ ಪ್ರತಿಕ್ರಿಯೆ ಬಾರದಿದ್ದಾಗ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT