ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೇಣಿಕೃತ ಪದ್ಧತಿಗೆ ಬಾಬೂಜಿ ರಾಜಕೀಯ ಬಲಿ: ಡಿ.ಕುಮಾರ್ ವಿಷಾದ

Published : 6 ಜುಲೈ 2024, 13:31 IST
Last Updated : 6 ಜುಲೈ 2024, 13:31 IST
ಫಾಲೋ ಮಾಡಿ
Comments

ಹುಣಸೂರು: ‘ಬಾಬು ಜಗಜೀವನರಾಂ ಅವರನ್ನು ಶ್ರೇಣಿಕೃತ ರಾಜಕೀಯ ವ್ಯವಸ್ಥೆಯಿಂದ ದೇಶದ ಪ್ರಧಾನ ಮಂತ್ರಿ ಹುದ್ದೆಗೇರುವುದನ್ನು ತಪ್ಪಿಸಲಾಯಿತು’ ಎಂದು ಆದಿಜಾಂಬವ ಸಮುದಾಯದ ಮುಖಂಡ ಡಿ.ಕುಮಾರ್ ವಿಷಾದಿಸಿದರು.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸರಳವಾಗಿ ಆಯೋಜಿಸಿದ್ದ ಬಾಬು ಜಗಜೀವನರಾಂ ಅವರ 38 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ‘ಜಗಜೀವನರಾಂ ಅವರು ತಳ ಸಮುದಾಯದಿಂದ ಬಂದಿದ್ದರೂ ಪ್ರತಿಯೊಂದು ಸಮುದಾಯ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಕಾಳಜಿ ಹೊಂದಿದ್ದ ಅಪರೂಪದ ವ್ಯಕ್ತಿ ಆಗಿದ್ದರು. ರಾಜಕೀಯವಾಗಿ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ತಮ್ಮದೇ ಛಾಪು ಮೂಡಿಸಿದ್ದರು. ದೇಶದ ಪ್ರಥಮ ದಲಿತ ಪ್ರಧಾನಿ ಎನ್ನುವ ಆಸೆ ಕನಸಾಗಿ ಉಳಿದಿದ್ದು ಇಂದಿಗೂ ದಲಿತ ಸಮುದಾಯಕ್ಕೆ ಆರದ ಗಾಯವಾಗಿದೆ’ ಎಂದರು.

ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, ‘ಬಾಬು ಜಗಜೀವನರಾಂ ದೇಶ ಆಹಾರ ಅಭದ್ರತೆ ಎದುರಿಸುವ ಹಂತದಲ್ಲಿ ಹಸಿರು ಕ್ರಾಂತಿಗೆ ಚಾಲನೆ ನೀಡಿ ದೇಶ ಆಹಾರ ಸ್ವಾವಲಂಭಬಿಯಾಗಲು ಕಾರಣಕರ್ತರಾಗಿದ್ದರು. ದಲಿತ ಸಮುದಾಯದಲ್ಲಿ ಜ್ಞಾನವಂತರಿದ್ದರೂ ಅವರನ್ನು ಗುರುತಿಸುವ ಕೆಲಸ ಮೇಲ್ಪಂಕ್ತಿಯ ಸಮಾಜ ಮಾಡಬೇಕಾಗಿದೆ’ ಎಂದರು.

‘ಬಿಳಿಗೆರೆ ಗ್ರಾಮದಲ್ಲಿ ಇಂದಿಗೂ ಅಸ್ಪೃಶ್ಯತೆ ಕಾಡುತ್ತಿದ್ದು, ದಲಿತ ಸಮಾಜಕ್ಕೆ ಗ್ರಾಮ ದೇವರ ಗುಡಿ ಪ್ರವೇಶ ನಿಷೇಧಿಸಿದೆ. ಈ ಸಂಬಂಧ ತಾಲ್ಲೂಕು ಆಡಳಿತದ ಗಮನಕ್ಕೆ ತಂದು ಹಲವು ಸಭೆ ನಡೆದಿದ್ದರೂ ಇಂದಿಗೂ ದಲಿತರು ದೇವಸ್ಥಾನ ಪ್ರವೇಶಿಸುವಂತೆ ಆಗಿಲ್ಲ’ ಎಂದರು.

ಸಭೆಯಲ್ಲಿ ದಲಿತ ಮುಖಂಡ ರಾಯನಹಳ್ಳಿ ಸ್ವಾಮಿ, ಶಿವಣ್ಣ ಮಾತನಾಡಿದರು

ಸಂದೇಶ: ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಕೆಲಸದ ನಿಮ್ಮಿತ್ತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದೆ ಪುಣ್ಯಸ್ಮರಣೆ ಕುರಿತ ಕಳುಹಿಸಿದ ಸಂದೇಶ ಪತ್ರವನ್ನು ಸಭೆಗೆ ಓದಿ ತಿಳಿಸಿದರು.

ಕಾರ್ಯಕ್ರಮದಲ್ಲಿದ್ದ ತಹಶೀಲ್ದಾರ್ ಮಂಜುನಾಥ್, ಯದುಗಿರೀಶ್, ನಗರಸಭೆ ಆಯುಕ್ತೆ ಮಾನಸ, ಶಿಕ್ಷಣ ಇಲಾಖೆಯ ಸಂತೋಷ್ ಕುಮಾರ್, ನರಸಿಂಹಯ್ಯ, ದಲಿತ ಮುಖಂಡರಾದ ಪುಟ್ಟಸ್ವಾಮಿ, ಹೊಸೂರು ಕುಮಾರ್ ಪುಷ್ಪನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT