ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಚನ್ನಕೇಶವ ದೇಗುಲ ಪ್ರಚಾರಕ್ಕೆ ಬ್ಲಾಗರ್ಸ್‌!

ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದಲ್ಲಿರುವ, ಯುನೆಸ್ಕೊ ಮಾನ್ಯತೆಯ ತಾಣ
Published 23 ಜೂನ್ 2024, 5:40 IST
Last Updated 23 ಜೂನ್ 2024, 5:40 IST
ಅಕ್ಷರ ಗಾತ್ರ

ಮೈಸೂರು: ಕಳೆದ ವರ್ಷ ‘ಯುನೆಸ್ಕೊ’ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿರುವ ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇಗುಲದ ವಿಶೇಷತೆಗಳನ್ನು ಪ್ರಚುರಪಡಿಸಲು ‘ಸಾಮಾಜಿಕ ಮಾಧ್ಯಮ’ ಬಳಸಿಕೊಳ್ಳಲು ಪ್ರವಾಸೋದ್ಯಮ ಇಲಾಖೆ ಯೋಜಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹಾಕಲಾಗುವ ಆಸಕ್ತಿಕರ ಹಾಗೂ ವಿಶೇಷ ರೀಲ್ಸ್‌ಗಳು, ಕಿರು ವಿಡಿಯೊ ಮೊದಲಾದವುಗಳನ್ನು ವೀಕ್ಷಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದನ್ನು ಬಳಸಿಕೊಂಡು, ಹೆಚ್ಚಿನ ಫಾಲೋವರ್‌ಗಳನ್ನು ಹೊಂದಿರುವ ಬ್ಲಾಗರ್‌ಗಳಿಂದ ವಿಡಿಯೊಗಳನ್ನು ಸಿದ್ಧಪಡಿಸಿ ಹಂಚಿಕೊಳ್ಳಲು ತಿಳಿಸುವುದಕ್ಕಾಗಿ ‘ಬ್ಲಾಗರ್ಸ್‌ ಮೀಟ್‌’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ವಿಡಿಯೊಗಳು ಬಹಳ ತುಂಬಾ ಆಕರ್ಷಕವಾಗಿರಬೇಕು ಅದರಿಂದ ಉತ್ತಮ ಪ್ರತಿಕ್ರಿಯೆ ಬರುವಂತಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ.
ಎಂ.ಕೆ. ಸವಿತಾ., ಜಂಟಿ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ

ಲಕ್ಷಾಂತರ ಮಂದಿ ಫಾಲೋವರ್‌ಗಳನ್ನು ಹೊಂದಿರುವ ಬ್ಲಾಗರ್‌ಗಳು ರಾಜ್ಯದಲ್ಲೂ ಇದ್ದಾರೆ. ಅವರಲ್ಲಿ 30ರಿಂದ 35ಕ್ಕೂ ಹೆಚ್ಚು ಮಂದಿಯನ್ನು ಸೋಮನಾಥಪುರದ ಚನ್ನಕೇಶವ ದೇಗುಲದ ಬಗ್ಗೆ ಪ್ರಚಾರ ಮಾಡಲು ಕೋರಲಾಗುತ್ತಿದೆ. ಇದಕ್ಕಾಗಿ ಕೆಟಿಎಫ್‌ (ಕರ್ನಾಟಕ ಪ್ರವಾಸೋದ್ಯಮ ವೇದಿಕೆ) ನೆರವು ಪಡೆದುಕೊಳ್ಳಲು ಇಲಾಖೆ ಉದ್ದೇಶಿಸಿದೆ. ಬ್ಲಾಗರ್‌ಗಳನ್ನು ಈ ವೇದಿಕೆಯ ಮೂಲಕ ಆಹ್ವಾನಿಸಲಾಗುತ್ತದೆ. ಅವರು ವಿಡಿಯೊಗಳನ್ನು ಮಾಡಲು ಬೇಕಾದ ಪರಂಪರೆ ಇಲಾಖೆಯಿಂದ ಅನುಮತಿ ಕೊಡಿಸುವುದು, ವಾಸ್ತವ್ಯ ಹಾಗೂ ಪ್ರವೇಶಕ್ಕೆ ಬೇಕಾದ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆಯು ಮಾಡಿಕೊಡಲಿದೆ.

ವಿಶೇಷಗಳನ್ನು ಕಟ್ಟಿಕೊಡುವಂತೆ:

ಸ್ಮಾರಕದ ಹಿನ್ನೆಲೆ, ಇತಿಹಾಸ, ಪ್ರಾಮುಖ್ಯತೆ, ವಾಸ್ತುಶಿಲ್ಪದ ವಿಶೇಷತೆ, ಶಿಲ್ಪಗಳು ಮತ್ತು ಶಿಲ್ಪಿಗಳ ಬಗ್ಗೆ ಬೆಳಕು ಚೆಲ್ಲುವ  ಕಿರುಚಿತ್ರ ಅಥವಾ ವಿಡಿಯೊ ರೂಪಿಸಲು ಯೋಜಿಸಲಾಗಿದೆ. ವಿಶಿಷ್ಟ ಶಿಲ್ಪಕಲೆಯ ಸೊಬಗಿನ ಕಾರಣದಿಂದಾಗಿ ಆ ದೇವಾಲಯಕ್ಕೆ ಜಾಗತಿಕ ಮಾನ್ಯತೆ ಗಳಿಸಿದೆ. ಅಲ್ಲಿಗೆ ಜಾಗತಿಕವಾಗಿ ಪ್ರವಾಸಿಗರನ್ನು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವುದು ಇಲಾಖೆಯ ಉದ್ದೇಶವಾಗಿದೆ.

‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ, ನಿಯಮಿತವಾಗಿ ಪ್ರವಾಸ ನಡೆಸುವ ಬ್ಲಾಗರ್‌ಗಳನ್ನು ಬಳಸಿಕೊಳ್ಳಲಾಗುವುದು. ಅವರು ಅವರವರ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ವಿಡಿಯೊ ಹಂಚಿಕೊಂಡರೆ ಅನುಕೂಲ ಆಗುತ್ತದೆ. ಅದಕ್ಕಾಗಿ ಜುಲೈ ಎರಡನೇ ವಾರದಲ್ಲಿ ‘ಬ್ಲಾಗರ್ಸ್‌ ಮೀಟ್‌’ ಕಾರ್ಯಕ್ರಮವನ್ನು ದೇಗುಲದಲ್ಲೇ ಆಯೋಜಿಸಲಾಗುವುದು. ಇದಕ್ಕಾಗಿ ಹೋಟೆಲ್‌ ಮಾಲೀಕರ ಸಂಘದವರು, ಟ್ರಾವೆಲ್ಸ್ ಸಂಘದವರ ಸಹಕಾರ ಪಡೆದುಕೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಜಾಸ್ತಿ ಹಣ ಬೇಕಾಗುವುದಿಲ್ಲ’ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯಕ್ಕೆ ‘ಉತ್ಸವ’ ಕಷ್ಟ!

ಚಿಕ್ಕ ಗ್ರಾಮವಾದ ಸೋಮನಾಥಪುರದಲ್ಲಿರುವ ಈ ಪ್ರವಾಸಿ ತಾಣದ ಆವರಣದಲ್ಲಿ ಉತ್ಸವ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಅಲ್ಲಿ ಉತ್ಸವಕ್ಕೆ ಬೇಕಾಗುವಷ್ಟು ಜಾಗ ಸಾಲುವುದಿಲ್ಲ. ಸಾಂಸ್ಕೃತಿಕ ಸೇರಿದಂತೆ ಹಲವು ಕಾರ್ಯಕ್ರಮ ನಡೆಸಲು ಆಗುವುದಿಲ್ಲ. ಆವರಣದಲ್ಲಿ ನಡೆಸಿದರೆ ಉದ್ಯಾನವೆಲ್ಲವೂ ಹಾಳಾಗುವ ಸಾಧ್ಯತೆ ಇದೆ. ಹೆಚ್ಚಿನ ವಾಹನಗಳ ನಿಲುಗಡೆಗೂ ಸ್ಥಳಾವಕಾಶವಿಲ್ಲ. ಆದ್ದರಿಂದ ಸಮೀಪದ ಖಾಸಗಿಯವರ ಜಮೀನಿನಲ್ಲಿ ನಡೆಸುವುದಾದರೆ ಅನುಮತಿ ಅನುದಾನ ಎಲ್ಲವೂ ಬೇಕಾಗುತ್ತದೆ. ಆದ್ದರಿಂದ ಈ ಕುರಿತು ಉಸ್ತುವಾರಿ ಸಚಿವರು ಪ್ರವಾಸೋದ್ಯಮ ಸಚಿವರು ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ವಹಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವ್ಯಾಪಕವಾಗಿ ಹಂಚಿಕೊಳ್ಳಲೆಂದು

‘ಆ ದೇಗುಲದ ಇತಿಹಾಸ ಪರಂಪರೆ ಹಾಗೂ ಶಿಲ್ಪಕಲೆಯ ವೈಶಿಷ್ಟ್ಯಗಳನ್ನು ನಾವು ಬ್ಲಾಗರ್ಸ್‌ಗೆ ತಿಳಿಸಿಕೊಡುತ್ತೇವೆ. ಅವರು ಅವರು ಸೃಜನಶೀಲತೆ ಬಳಸಿಕೊಂಡು ವಿಡಿಯೊ ಜೊತೆ ಮಾಹಿತಿಯನ್ನೂ ಹಂಚಿಕೊಳ್ಳಬೇಕು. ಅವುಗಳನ್ನು ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಹಂಚಿಕೊಳ್ಳಬೇಕು. ಪ್ರವಾಸಿಗರ ಸಂಖ್ಯೆ ಹೆಚ್ಚಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ.ಇದರೊಂದಿಗೆ ಮೈಸೂರಿನ ಇನ್ನೊಂದು ವಿಶೇಷ ಪ್ರವಾಸಿ ತಾಣವನ್ನು ಜೋಡಿಸಿ ಅವರಿಗೆ ವಿಡಿಯೊ ಮಾಡಲು ಕೋರಲಾಗುವುದು. ಅವರ ಜಾಲದಿಂದಲೂ ನೆರವಾಗಲಿದೆ ಎಂಬ ಆಶಯವಿದೆ’ ಎಂದು ಎಂ.ಕೆ. ಸವಿತಾ ಮಾಹಿತಿ ನೀಡಿದರು.

‘ಮೈಸೂರೆಂದರೆ ಅರಮನೆ ಮೃಗಾಲಯ ಕಾರಂಜಿಕೆರೆ ಎನ್ನುವುದಷ್ಟೆ ಎಂದು ಪ್ರವಾಸಿಗರು ಭಾವಿಸುತ್ತಿದ್ದಾರೆ. ಸೋಮನಾಥಪುರದಂತಹ ತಾಣಗಳನ್ನೂ ಹೆಚ್ಚು ಪ್ರಚುರಪಡಿಸಬೇಕಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT