ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕ್ಕೆ ನಮ್ಮ ಪರಂಪರೆ ತೋರಿಸುವ ದಸರಾ: ಎ.ದೇವರಾಜು

Published : 4 ಅಕ್ಟೋಬರ್ 2024, 8:25 IST
Last Updated : 4 ಅಕ್ಟೋಬರ್ 2024, 8:25 IST
ಫಾಲೋ ಮಾಡಿ
Comments

ಮೈಸೂರು: ‘ಮೈಸೂರು ದಸರಾ ಇಡೀ ವಿಶ್ವಕ್ಕೆ ನಮ್ಮ ಪರಂಪರೆಯನ್ನು ತೋರಿಸುತ್ತದೆ’ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಹೇಳಿದರು.

ಇಲ್ಲಿನ ಪುರಭವನದ ಆವರಣದಲ್ಲಿ‌ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ‘ಪಾರಂಪರಿಕ ಜಾವಾ ಮೋಟಾರ್ ಬೈಕ್‌ ಸವಾರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೈಸೂರಿನಲ್ಲಿ ಪಾರಂಪರಿಕ ಹಾಗೂ ಸಾಂಸ್ಕೃತಿಕವಾದ ಸಾಕಷ್ಟು ವಿಚಾರಗಳಿವೆ. ಇಂದಿನ ಮಕ್ಕಳಿಗೆ ನಮ್ಮ ಪರಂಪರೆಯನ್ನು ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

‘ದಸರಾ ವಸ್ತುಪ್ರದರ್ಶನದಲ್ಲಿ ‘ಬ್ರ್ಯಾಂಡ್‌ ಮೈಸೂರು’ ಮಳಿಗೆ ಇದ್ದು, ಜಿಲ್ಲೆಯ ವಿಶೇಷ ಪಾರಂಪರಿಕ ಸ್ಮಾರಕಗಳು ಹಾಗೂ ಕಟ್ಟಡಗಳ ಮಾದರಿಗಳು, ಆಹಾರ ಪದಾರ್ಥ, ಮೈಸೂರ್ ಸ್ಯಾಂಡಲ್ ಸೋಪ್, ಮೈಸೂರ್ ಸಿಲ್ಕ್ ಮೊದಲಾದವುಗಳನ್ನು ಪ್ರದರ್ಶಿಸಲಾಗಿದೆ. ಅದನ್ನು ಸಾರ್ವಜನಿಕರು ವೀಕ್ಷಿಸಬೇಕು’ ಎಂದು ಕೋರಿದರು.

‘ಪಾರಂಪರಿಕ ಕಟ್ಟಡಗಳನ್ನು ಪರಿಚಯಿಸಲು ಈ ಬಾರಿ ಬೈಕ್ ಸವಾರಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಶಾಲಾ ಮಕ್ಕಳಿಗೆ ಪಾರಂಪರಿಕ ಸ್ಮಾರಕಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದು, ಕಾಲೇಜುಗಳಲ್ಲಿ ‘ಹೆರಿಟೇಜ್ ಕ್ಲಬ್’ ಕೂಡ ರಚಿಸಲಾಗಿದೆ’ ಎಂದರು.

ಸವಾರಿಗೆ ಹಸಿರುನಿಶಾನೆ ತೋರಿದ ಪ್ರಾದೇಶಿಕ ಆಯುಕ್ತ ರಮೇಶ್ ಡಿ.ಎಸ್. ಮಾತನಾಡಿ, ‘ಪರಂಪರೆ ಎಂದರೆ ನಾವು ಬೆಳೆದು ಬಂದ ದಾರಿ. ಅದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪುರಭವನ ಆವರಣದಿಂದ ಪ್ರಾರಂಭವಾದ ಬೈಕ್ ಸವಾರಿಯು ದೊಡ್ಡ ಗಡಿಯಾರ– ಚಾಮರಾಜ ಒಡೆಯರ್ ವೃತ್ತ– ಕೆ.ಆರ್. ವೃತ್ತ– ಡಿ.ಬನುಮಯ್ಯ ಕಾಲೇಜು ಎದುರಿನ ರಸ್ತೆ– ಕಾಡಾ ಕಚೇರಿ– ಲಲಿತಮಹಲ್ ರಸ್ತೆ– ಟೆರೀಷಿಯನ್‌ ಕಾಲೇಜು–ವಸಂತ ಮಹಲ್‌ ರಸ್ತೆಯ ಮೂಲಕ ವಸ್ತುಪ್ರದರ್ಶನ ಆವರಣದ ಪುರಾತತ್ವ ಇಲಾಖೆ ಕಚೇರಿ ಬಳಿಗೆ ತಲುಪಿತು.

ಭೋಪಾಲದ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ನಿರ್ದೇಶಕ ಅಮಿತ್ ಪಾಂಡೆ, ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನದ ವಿಭಾಗದ ಸೆಲ್ವಪಿಳ್ಳೆ ಅಯ್ಯಂಗಾರ್, ಇತಿಹಾಸ ತಜ್ಞ ರಂಗರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT